ಹೊಸ ಮರಳುಗಾರಿಕೆ ನೀತಿಯ ವಿರುದ್ಧ ಪ್ರತಿಭಟನೆ

ಮಂಗಳೂರು, ಮಾ.21: ದ.ಕ. ಜಿಲ್ಲೆಯಲ್ಲಿ ಮರಳುಗಾರಿಕೆಯ ಹೊಸ ನೀತಿಯ ಪರಿಣಾಮ ಎದುರಾಗಿರುವ ಸಮಸ್ಯೆಗಳ ವಿರುದ್ಧ ದ.ಕ. ಸಿವಿಲ್ ಕಾಂಟ್ರಾಕ್ಟರ್ಸ್ ಅಸೋ ಸಿಯೇಶನ್ ನೇತೃತ್ವದಲ್ಲಿಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಯೆದುರು ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಸೋಸಿಯೇಶನ್‌ನ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಮರಳುಗಾರಿಕೆಯ ಪರವಾನಿಗೆಯನ್ನು ನವೀಕರಿಸದ ಕಾರಣವನ್ನು ಮುಂದಿಟ್ಟು ಜಿಲ್ಲಾಡಳಿತವು ಮರಳುಗಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇದರಿಂದ ಜಿಲ್ಲೆಯಲ್ಲಿ ಎಲ್ಲ ತರಹದ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಮರಳಿನ ಅಭಾವ ಸೃಷ್ಟಿಯಾಗಿದೆ. ಗುತ್ತಿಗೆದಾರರು ಕಾಮಗಾರಿಗಳನ್ನು ಸಂಪೂರ್ಣವಾಗಿ ನಿಲ್ಲಿಸುವ ಸ್ಥಿತಿ ಎದುರಾಗಿದೆ. ಅಧಿಕಾರಿಗಳು ನಗರದ ಜನತೆಯ ಹಿತದೃಷ್ಟಿಯ ಬದಲಾಗಿ ಕೆಲವು ಮಂತ್ರಿಗಳ ಹಿತದೃಷ್ಟಿಯನ್ನಷ್ಟೇ ಬಯಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಸೋಸಿಯೇಶನ್ ಮುಖಂಡ ವಿಜಯ ವಿಷ್ಣು ಮಯ್ಯ ಮಾತನಾಡಿ, ಮರಳು ಪೂರೈಕೆಗೆ ನಿಷೇಧ ಹೇರುವ ಮೂಲಕ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ನಮ್ಮ ಹೊಟ್ಟೆಗೆ ಹೊಡೆದು ಅವರ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಪಾರಂಪರಿಕವಾಗಿ ನಡೆಸಿಕೊಂಡು ಬಂದ ಮರಳುಗಾರಿಕೆಯನ್ನು ಎರಡು ತಿಂಗಳಿನಿಂದ ಸ್ಥಗಿತಗೊಳಿಸಿರುವುದು ಖಂಡನೀಯ. ಮರಳುಗಾರಿಕೆಗೆ ಅವಕಾಶ ಕಲ್ಪಿಸಿಕೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳ ಮನೆ ಮುಂಭಾಗದಲ್ಲಿ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು. ಕೆನರಾ ಬಿಲ್ಡರ್ಸ್ ಅಸೋಸಿಯೇಶನ್‌ನ ಸುದೇಶ್‌ಕುಮಾರ್, ಅಸೋಸಿಯೇಶನ್‌ನ ಉಪಾಧ್ಯಕ್ಷ ದಿನಕರ್ ಸುವರ್ಣ, ಕಾರ್ಯದರ್ಶಿ ದೇವಾನಂದ, ಜೊತೆ ಕಾರ್ಯದರ್ಶಿ ಅಶೋಕ್ ಕುಲಾಲ್, ಖಜಾಂಚಿ ಸುರೇಶ್ ಜೆ. ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.





