800ರಲ್ಲಿ ಒಂದು ಮಗುವಿಗೆ ಡೌನ್ ಸಿಂಡ್ರೋಮ್: ಡಾ.ಗಿರೀಶ್

ಉಡುಪಿ, ಮಾ.21: ಡೌನ್ ಸಿಂಡ್ರೋಮ್ ಕಾಯಿಲೆ ಬುದ್ಧಿ ಮಾಂದ್ಯತೆಯ ಒಂದು ಪ್ರಮುಖ ಕಾರಣವಾಗಿದ್ದು, 800 ನವಜಾತ ಶಿಶುಗಳ ಪೈಕಿ ಒಂದು ಮಗುವಿನಲ್ಲಿ ಈ ತೊಂದರೆ ಕಂಡುಬರುತ್ತದೆ ಎಂದು ಮಣಿಪಾಲ ಕೆಎಂಸಿಯ ಜೆನೆಟಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಗಿರೀಶ್ ಕೆ.ಎಂ. ತಿಳಿಸಿದ್ದಾರೆ.
ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಆಶಾನಿಲಯ ವಿಶೇಷ ಮಕ್ಕಳ ಶಾಲೆ, ಉಡುಪಿ ಜಯಂಟ್ಸ್, ನಾಗರಿಕ ಆರೋಗ್ಯ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಆಶಾನಿಲಯದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಡೌನ್ ಸಿಂಡ್ರೋಮ್ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಹಿಳೆಯ ವಯಸ್ಸು ಮೀರಿದಂತೆ ಈ ಕಾಯಿಲೆಯ ಸಾಧ್ಯತೆ ಹೆಚ್ಚಾಗುತ್ತಾ ಹೋಗುತ್ತದೆ. 20 ವಯಸ್ಸಿನ 1,500 ಗರ್ಭಿಣಿಯರಲ್ಲಿ ಒಂದು ಮಗುವಿನಲ್ಲಿ ಈ ಸ್ಥಿತಿ ಇದ್ದರೆ, 40ರ ವಯಸ್ಸಿನ ತಾಯಿಯರಲ್ಲಿ ಜನಿಸುವ ಪ್ರತಿ 100 ಮಕ್ಕಳಲ್ಲಿ ಒಂದು ಮಗುವಿಗೆ ಡೌನ್ ಸಿಂಡ್ರೋಮ್ ಇರುತ್ತದೆ ಎಂಬುದನ್ನು ಸಮೀಕ್ಷೆ ತಿಳಿಸುತ್ತದೆ ಎಂದರು.
ಸಾಮಾನ್ಯರಲ್ಲಿ ಐಕ್ಯೂ 100ರ ಅಂದಾಜಿನಲ್ಲಿದ್ದರೆ ಡೌನ್ ಸಿಂಡ್ರೋಮ್ ಇರುವವರಲ್ಲಿ 40-60ರಷ್ಟು ಇರುತ್ತದೆ. ಆದ್ದರಿಂದ ಇವರ ಬೆಳವಣಿಗೆ ತೀರಾ ನಿಧಾನವಾಗಿರುತ್ತದೆ. ಇವರು ಸಾಮಾನ್ಯರಿಗಿಂತ ಭಿನ್ನವಾಗಿರುತ್ತಾರೆ. ಸರಿಯಾದ ಪೋಷಣೆ, ಶಿಕ್ಷಣ, ಮಾರ್ಗದರ್ಶನ ನೀಡಿದರೆ ಇವರೂ ಕೂಡ ಸಮಾಜದಲ್ಲಿ ಸಾಮಾನ್ಯರಂತೆ, ಎಲ್ಲರಂತೆ ಬದುಕಲು ಸಾಧ್ಯ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಸಿಎಸ್‌ಐ ಜುಬಿಲಿ ಚರ್ಚ್‌ನ ವಲಯಾಧ್ಯಕ್ಷ ರೆ.ಸ್ಟಿವನ್ ಸರ್ವೋತ್ತಮ್, ಜಿಲ್ಲಾ ವಿಕಲ ಚೇತನರ ಕಲ್ಯಾಣಾಧಿಕಾರಿ ನಿರಂಜನ್ ಭಟ್, ಬೋರ್ಡಿಂಗ್ ಹೋಮ್‌ನ ಸಂಚಾಲಕ ವಿನ್ಸೆಂಟ್ ಸಲಿನ್ಸ್, ಆಶಾನಿಲಯದ ಮುಖ್ಯೋಪಾಧ್ಯಾಯಿನಿ ಅಗ್ನೆಸ್ ಹೇಮಾವತಿ, ಜಯಂಟ್ಸ್ ಅಧ್ಯಕ್ಷ ರಮೇಶ್ ಪೂಜಾರಿ ಉಪಸ್ಥಿತರಿದ್ದರು.
ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾನಿಲಯದ ಪ್ರಸನ್ನಿ ಸೋನ್ಸ್ ವಂದಿಸಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿಶೇಷ ಉಪನ್ಯಾಸ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮ ಜರಗಿತು.







