ಮಾದಕ ವಸ್ತು ದಾರಿ ತಪ್ಪಿಸಿತು: ಸಂಜಯ್ ದತ್

ಹೊಸದಿಲ್ಲಿ, ಮಾ.22: ಬಾಲಿವುಡ್ ಸಿನೆಮಾ ತಾರೆ ಸಂಜಯ್ ದತ್ ಫೆಬ್ರವರಿ 25ಕ್ಕೆ ಜೈಲಿನಿಂದ ಬಿಡುಗಡೆಗೊಂಡಿದ್ದರೂ ಪೂರ್ಣಾರ್ಥದಲ್ಲಿ ತನಗೆ ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಅನಧಿಕೃತವಾಗಿ ಶಸ್ತ್ರಾಸ್ತ್ರಗಳನ್ನು ಕೈವಶದಲ್ಲಿರಿಸಿದ್ದಕ್ಕಾಗಿ ಸಂಜಯ್ ಜೈಲು ಶಿಕ್ಷೆ ಅನುಭವಿಸಿದ್ದರು. ಇಂಡಿಯಾ ಟುಡೆ ಕಂಕ್ಲೇವ್‌ನಲ್ಲಿ ತನ್ನ ಜೈಲು ಜೀವನದ ಕುರಿತು ಮಾತಾಡುತ್ತಾ ಬಾಲಿವುಡ್ ತಾರೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ.
ಅಮ್ಮ ನರ್ಗೀಸ್ ದತ್ ಮರಣದ ನಂತರ ತಾನು ಮಾದಕ ವಸ್ತು ಉಪಯೋಗಿಸಲು ಆರಂಭಿಸಿದೆ. ಆ ದಿನಗಳಲ್ಲಿ ತಾನು ಬಳಸದ ಮಾದಕ ವಸ್ತುಗಳೇ ಇಲ್ಲ ಎಂದು ಸಂಜಯ್ ದತ್ ಹೇಳಿದ್ದಾರೆ.
ಮೊದಲು ತಂದೆಗೆ ತಾನೇನು ಮಾಡುತ್ತಿದ್ದೇನೆಂದು ತಿಳಿದಿರಲಿಲ್ಲ. ಮತ್ತೊಮ್ಮೆ ತನಗೆ ಸ್ವಯಂ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಅಂದು ತನ್ನನ್ನು ಅವರು ಆಸ್ಪತ್ರೆಗೆ ಸೇರಿಸಿದ್ದರು. ಆನಂತರವೇ ತಾನು ಮಾದಕ ವಸ್ತು ಸೇವಿಸುತ್ತಿರುವುದು ತಂದೆಗೆ ತಿಳಿದಿತ್ತು ಎಂದು ಸಂಜಯ್ ದತ್ ಹೇಳಿದ್ದಾರೆ.
ತನ್ನನ್ನು ಅಮೆರಿಕದ ಪುನರ್‌ವಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು. ಅಂದಿನಿಂದ ಈವರೆಗೂ ತಾನು ಮಾದಕ ವಸ್ತುಗಳನ್ನು ಮುಟ್ಟಿಲ್ಲ ಎಂದು ದತ್ ಹೇಳಿದ್ದಾರೆ. ತನಗೆ ಜೈಲಿನಲ್ಲಿ ವಿಐಪಿ ಪರಿಗಣನೆಯೇನೂ ಇದ್ದಿರಲಿಲ್ಲ. ಸಾಮಾನ್ಯ ಕೈದಿಗಳಂತೆಯೇ ಶಿಕ್ಷೆ ಅನುಭವಿಸಿದ್ದೇನೆ ಎಂದು ಸಂಜಯ್ ದತ್ ಹೇಳಿದ್ದಾರೆ ಎಂದು ವರದಿಯಾಗಿದೆ.







