ACB ಕುರಿತ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ.
Anti Corruption Bureau ಏಕೆ?

ಇತ್ತೀಚೆಗೆ ರಾಜ್ಯ ಸರ್ಕಾರವು ಹೊಸದಾಗಿ ಸೃಷ್ಟಿಸಿದ ಭ್ರಷ್ಟಾಚಾರ ನಿಗ್ರಹ ದಳ (Anti Corruption Bureau- ACB) ಕುರಿತು ಗೊಂದಲಗಳು, ಪ್ರಶ್ನೆಗಳು ಮತ್ತು ವಿರೋಧಗಳು ವ್ಯಕ್ತವಾಗಿವೆ. ಇದು ಲೋಕಾಯುಕ್ತ ಸಂಸ್ಥೆಯನ್ನೇ ಬಲಹೀನಗೊಳಿಸುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಈ ACBಯನ್ನು ಮಾಡಬೇಕಾದ ಅಗತ್ಯತೆ ಮತ್ತು ಉದ್ದೇಶಗಳ ಬಗ್ಗೆ ತಿಳಿಸಿದ ಮೇಲೂ ಸಹ ಅನೇಕರಿಗೆ ಅಸ್ಪಷ್ಟತೆಯಿದೆ. ಇದಕ್ಕಿಂತ ಮುಖ್ಯವಾಗಿ ನಮ್ಮ ರಾಜ್ಯದಲ್ಲಿ ಲೋಕಾಯುಕ್ತ ವ್ಯವಸ್ಥೆ ಬಗ್ಗೆಯೂ ಅಸ್ಪಷ್ಟ ತಿಳಿವಳಿಕೆ ಇರುವುದಿರಂದಲೂ ನಾವು ಸೃಜಿಸಿರುವ ACB ಬಗ್ಗೆ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ:
• ಮೊದಲನೆಯದಾಗಿ ನಮ್ಮ ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಅಶಿಸ್ತಿನ ಪ್ರಕರಣಗಳೂ ಸೇರಿದಂತೆ ಆಡಳಿತ ಕ್ರಮಗಳಲ್ಲಿ ಬಂದ ದೂರುಗಳ ಬಗ್ಗೆ ವಿಚಾರಣೆ ನಡೆಸಿ ಸಾರ್ವಜನಿಕ ಆಡಳಿತ ಗುಣಮಟ್ಟವನ್ನು ಸುಧಾರಿಸುವ ಸಲುವಾಗಿ 1984ರಲ್ಲಿ ಜಾರಿಗೆ ಬಂದ ಲೋಕಾಯುಕ್ತ ಕಾಯ್ದೆ 1984ರ ಮುಖಾಂತರ ಲೋಕಾಯುಕ್ತ ಸಂಸ್ಥೆ ಅಸ್ತಿತ್ವಕ್ಕೆ ಬಂದಿತ್ತು. ಒಬ್ಬ ಸರ್ಕಾರಿ ನೌಕರ ತೆಗೆದುಕೊಂಡ ಯಾವುದೇ ಕ್ರಮದ ಬಗ್ಗೆ ಯಾರಾದರೂ ದೂರು ಸಲ್ಲಿಸಿದ ಸಂದರ್ಭದಲ್ಲಿ ಆ ದೂರಿನನ್ವಯ ಆ ನೌಕರ ತೆಗೆದುಕೊಂಡ ಕ್ರಮ ಅಥವಾ ನಿರ್ಧಾರದ ಬಗ್ಗೆ ಲೋಕಾಯುಕ್ತ ವಿಚಾರಣೆ ನಡೆಸುತ್ತದೆ. ಈ ತನಿಖೆ ನಡೆಸಲು ಲೋಕಾಯುಕ್ತರಿಗೆ ಸಿವಿಲ್ ನ್ಯಾಯಾಲಯದ ಅಧಿಕಾರವಿರುತ್ತದೆ ಹಾಗೂ ಇದಕ್ಕಾಗಿ ಅವರಿಗೆ ಅಗತ್ಯವಿರುವ ತಾಂತ್ರಿಕ ಮತ್ತು ಪೊಲೀಸ್ ಸಿಬ್ಬಂದಿಯ ಸಹಾಯವನ್ನು ಸರ್ಕಾರ ನೀಡಿರುತ್ತದೆ.
• ಎರಡನೆಯದಾಗಿ, ಭ್ರಷ್ಟಾಚಾರದ ಕ್ರಿಮಿನಲ್ ಪ್ರಕರಣಗಳನ್ನು ತನಿಖೆ ನಡೆಸುವುದು ಮೇಲೆ ತಿಳಿಸಿದ ಲೋಕಾಯುಕ್ತ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇಂತಹ ಪ್ರಕರಣಗಳನ್ನು ಪ್ರತ್ಯೇಕವಾದ ಭ್ರಷ್ಟಾಚಾರ ತಡೆ ಕಾಯ್ದೆ 1988ರ (PC Act) ಪ್ರಕಾರ ತನಿಖೆ ನಡೆಸಲಾಗುತ್ತದೆ. ಇದುವರೆಗೆ ಈ ತನಿಖೆ ನಡೆಸುವುದು ಲೋಕಾಯುಕ್ತ ಕಚೇರಿಯಲ್ಲೇ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಶಾಖೆ. 06-02-1991ರಂದು ಒಂದು ಅಧಿಸೂಚನೆ (executive order) ಮೂಲಕ ಈ ಪೊಲೀಸ್ ಶಾಖೆಗೆ ಈ ಅಧಿಕಾರ ನೀಡಲಾಗಿತ್ತು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಈ ಭ್ರಷ್ಟಾಚಾರ ತಡೆ ಅಧಿನಿಯವ (PC Act) ಕೆಳಗೆ ಭ್ರಷ್ಟಾಚಾರ ಅಪರಾಧಗಳ ತನಿಖೆ ಮಾಡುವ ಅಧಿಕಾರವು ಲೋಕಾಯುಕ್ತಕ್ಕೆ ಇಲ್ಲವಾಗಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆ ನೀಡುವ IPC ಮತ್ತು PC ಕಾಯ್ದೆಗಳು ಲೋಕಾಯುಕ್ತ ಕಾಯ್ದೆಯ ವ್ಯಾಪ್ತಿಯಲ್ಲಿ ಇಲ್ಲ.
• ಅನೇಕ ಸಲ ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಲೋಕಾಯುಕ್ತ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಶಾಖೆ ನಡೆಸುವ ದಾಳಿಗಳನ್ನು ಲೋಕಾಯುಕ್ತರೇ ನಡೆಸುತ್ತಿದ್ದರು ಎಂಬ ಕಲ್ಪನೆ ಜನರಲ್ಲಿ ಬಂದಿದೆ. ಆದರೆ ಲೋಕಾಯುಕ್ತವು ಲೋಕಾಯುಕ್ತ ಕಾಯ್ದೆಯ ಅಡಿ ಮಾತ್ರ ಕೆಲಸ ಮಾಡುತ್ತಿದೆ.
ACB ರಚಿಸುವ ಅಗತ್ಯತೆಯ ಕುರಿತು:
• ಮೇಲೆ ತಿಳಿಸಿದಂತೆ ಲೋಕಾಯುಕ್ತ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಶಾಖೆಯ ಪೊಲೀಸರು ಲೋಕಾಯುಕ್ತ ಅಧಿನಿಯಮದ ಪ್ರಕರಣಗಳ ತನಿಖೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ (PC Act)ಯ ಪ್ರಕರಣಗಳ ತನಿಖೆ ನಡೆಸುತ್ತಿದ್ದರು. ಅಂದರೆ ಲೋಕಾಯುಕ್ತದ ವ್ಯಾಪ್ತಿಯಲ್ಲಿ ಇಲ್ಲದ ಭ್ರಷ್ಟಾಚಾರ ತಡೆ ಅಧಿನಿಯಮದ ಪ್ರಕರಣಗಳನ್ನು ತನಿಖೆ ನಡೆಸುವ ಪೊಲೀಸ್ ವಿಭಾಗವು ಲೋಕಾಯುಕ್ತರ ಆರ್ಥಿಕ ಮತ್ತು ಆಡಳಿತಾತ್ಮಕ ನಿಯಂತ್ರಣದಡಿ ಇತ್ತು. ಆದರೆ ಮೂಲಭೂತ ವಿಷಯವೇನೆಂದರೆ ಲೋಕಾಯುಕ್ತಕ್ಕೆ ಈ ಪೊಲೀಸ್ ವಿಭಾಗದ ಮೇಲೆ ಯಾವುದೇ ಶಾಸನಾತ್ಮಕ ದಂಡನೆ ನೀಡುವ (statutory penal power) ಅಧಿಕಾರವಿರುವುದಿಲ್ಲ. ಆ ಅಧಿಕಾರ ಇರುವುದು ರಾಜ್ಯ ಸರ್ಕಾರಕ್ಕೆ ಎಂದು ಈ ಹಿಂದೆ ಸುಪ್ರೀಕೋರ್ಟೇ ಸಿ. ರಂಗಸ್ವಾಮಯ್ಯ ವಿರುದ್ಧ ಕರ್ನಾಟಕ ಲೋಕಾಯುಕ್ತ ಕೇಸಿನಲ್ಲಿ ಸ್ಪಷ್ಟಪಡಿಸಿದೆ.
• ಇದರಿಂದಾಗಿ ಈ ಪೊಲೀಸ್ ವಿಭಾಗ ಮತ್ತು ಲೋಕಾಯುಕ್ತದ ನಡುವೆ ಒಂದು ಅಸಮಂಜಸ ಪರಿಸ್ಥಿತಿ (anomalous situation) ಉಂಟಾಗಿತ್ತು. ಹಾಗೆಯೇ ಲೋಕಾಯುಕ್ತರು ಒಬ್ಬ ನ್ಯಾಯಿಕ ಅಧಿಕಾರಿ (Judicaial Officer) ಆಗಿದ್ದು ಅವರಿಗೆ ಪೊಲೀಸ್ ಅಧಿಕಾರಿಗಳನ್ನು ಆಡಳಿತಾತ್ಮಕವಾಗಿ ನಿಯಂತ್ರಿಸುವ ಅಧಿಕಾರವಿರುವುದು ಸ್ವಾಭಾವಿಕ ನ್ಯಾಯಕ್ಕೆ (Natural Justice) ವಿರುದ್ಧವಾದದ್ದು.
ಈ ಹಿನ್ನೆಲೆಯಲ್ಲಿ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಮತ್ತು ಇನ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (DG&IGP)ಯವರು ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕೆಲಸ ಮಾಡುವ ಪೊಲೀಸ್ ವಿಭಾಗಕ್ಕೆ ಪ್ರತ್ಯೇಕ ಭ್ರಷ್ಟಾವಾರ ನಿಗ್ರಹ ದಳ ರಚಿಸುವ ಪ್ರಸ್ತಾಪ ನೀಡಿದ್ದು ಅದರಂತೆ ಸರ್ಕಾರ ಈ ಭ್ರಷ್ಟಾಚಾರ ನಿಗ್ರಹ ದಳವನ್ನು ಸೃಷ್ಟಿಸಿದೆ.
ACB ರಚನೆಯಿಂದ ಲೋಕಾಯುಕ್ತವೇ ಬಲಹೀನಗೊಳ್ಳುತ್ತದೆ ಎಂಬ ತಪ್ಪು ಕಲ್ಪನೆಯ ಕುರಿತು:
ಖಂಡಿತಾ ಹೀಗಾಗುವುದಿಲ್ಲ. ಮೇಲೆ ತಿಳಿಸಿದಂತೆ ಲೋಕಾಯುಕ್ತ ಇಲಾಖೆ ಕಾರ್ಯ ನಿರ್ವಹಿಸುವುದು ಲೋಕಾಯುಕ್ತ ಅಧಿನಿಯಮ 1984ರ ಅಡಿಯಲ್ಲಿ ಮತ್ತು ಅದರ ಕಾರ್ಯನಿರ್ವಹಣೆಗೆ ನಿಯೋಜಿಸಲಾಗಿರುವ ಪೊಲೀಸ್ ವಿಭಾಗ ಯಾವುದೇ ತೊಂದರೆಯಿಲ್ಲದೆ ಅಬಾಧಿತವಾಗಿ ಕಾರ್ಯನಿರ್ವಹಿಸುತ್ತದೆ. ಈಗ ACB ಯನ್ನು ರಚಿಸಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾದ ಭ್ರಷ್ಟಾಚಾರ ಪ್ರಕರಣಗಳನ್ನು ACBಗೆ ವರ್ಗಾಯಿಸದರೆ ಅದರಿಂದ ಲೋಕಾಯುತ್ತ ಸಂಸ್ಥೆಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ , ಲೋಕಾಯುಕ್ತವನ್ನು ಬಲಹೀನಗೊಳಸಿದಂತೆಯೂ ಆಗುವುದಿಲ್ಲ. ಲೋಕಾಯುಕ್ತದ ಅಧಿಕಾರವನ್ನುಸಹ ಯಾವುದೇ ರೀತಿಯಿಂದ ಮೊಟಕುಗೊಳಿಸಿದ ಹಾಗೆ ಆಗುವುದಿಲ್ಲ. ಬದಲಿಗೆ ಲೋಕಾಯುಕ್ತದ ಕೆಲಸವು ಯಾವುದೇ ತೊಂದರೆಯಿಲ್ಲದೆ ಸುಗಮವಾಗಿ ಸಾಗುತ್ತದೆ. ಭ್ರಷ್ಟಾಚಾರ ಅಧಿನಿಯಮದಡಿ ಲೋಕಾಯುಕ್ತರಿಗೆ ಯಾವದೇ ಅಧಿಕಾರವಿಲ್ಲದಿದ್ದರೂ ಅವರೇ ತನಿಖೆಗಳ ಮೇಲ್ವಿಚಾರಣೆ ನಡೆಸುತ್ತಾರೆ ಎಂಬ ಸಾರ್ವಜನಿಕ ಗ್ರಹಿಕೆ (public perception) ಕಾರಣದಿಂದಾಗಿ ಜನರಲ್ಲಿ ಗೊಂದಲವುಂಟಾಗಿದೆಯಷ್ಟೆ.
• ಒಂದೊಮ್ಮೆ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಲೋಕಾಯುಕ್ತ ಕಾಯ್ದೆಯಡಿ ಲೋಕಾಯುಕ್ತದಲ್ಲಿ ದೂರು ದಾಖಲಾದ ಪಕ್ಷದಲ್ಲಿ ಅದನ್ನೂ ಸಹ ಲೋಕಾಯುಕ್ತ ಸ್ವತಂತ್ರವಾಗಿಯೇ ತನಿಖೆ ನಡೆಸುವ ಎಲ್ಲಾ ಅಧಿಕಾರವನ್ನು ಲೋಕಾಯುಕ್ತ ಹೊಂದಿದೆ ಎಂದೂ ಈ ಮೂಲಕ ತಿಳಿಯಪಡಿಸುತ್ತೇನೆ.
ಭ್ರಷ್ಟಾಚಾರ ನಿಗ್ರಹ ದಳದ (ACB) ಪ್ರಯೋಜನಗಳು:
ಸುಪ್ರೀಂ ಕೋರ್ಟು ಮತ್ತು ಹೈಕೋರ್ಟುಗಳ ಹಲವು ತೀರ್ಪುಗಳಲ್ಲಿ ನ್ಯಾಯಾಲಯಗಳು ನೀಡಿರುವ ಆದೇಶಗಳ ನಿರ್ದೇಶನಗಳಿಗೆ ಅನುಗುಣವಾಗಿಯೇ ಭ್ರಷ್ಟಾಚಾರ ನಿಗ್ರಹ ದಳ- ACB ಯನ್ನು ಅಧಿಸೂಚನೆಯ ಮೂಲಕ ಸೃಷ್ಟಿಸಲಾಗಿದೆ. ಪ್ರತಿಯೊಂದು ಇಲಾಖೆ/ನಿಗಮ/ಮಂಡಳಿಗಳಲ್ಲಿ ಜಾಗೃತ ಕೋಶಗಳನ್ನು ಸೃಷ್ಟಿಸಲಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ವ್ಯವಸ್ಥೆಯ ಸಮಗ್ರ ಸುಧಾರಣೆ ಅಂಗವಾಗಿ ಇವುಗಳನ್ನು ಸೃಜಿಸಲಾಗಿದೆ. ಕೇಂದ್ರ ಸರ್ಕಾರದ ಕೇಂದ್ರ ಜಾಗೃತ ಆಯೋಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾಗೃತ ಕೋಶಗಳ ಮಾದರಿಯಲ್ಲಿಯೇ ಇವನ್ನು ಸೃಜಿಸಲಾಗಿದೆ. ಈ ಕೋಶಗಳು ಪ್ರತಿ ಇಲಾಖೆ/ನಿಗಮ/ಮಂಡಳಿಗಳಲ್ಲಿನ ಸಾರ್ವಜನಿಕ ನೌಕರರ ವಿರುದ್ಧದ ದೂರುಗಳು/ಆರೋಪಗಳು/ಕುಂದುಕೊರತೆಗಳನ್ನು ಪರಿಶೀಲಿಸಿ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ವರದಿ ಮಾಡುತ್ತವೆ.
ಭ್ರಷ್ಟಾಚಾರ ನಿಗ್ರಹ ದಳ (ACB) ಒಂದು ಸ್ವತಂತ್ರ ಸಂಸ್ಥೆಯಾಗಿದ್ದು ಅದು ಆಡಳಿತಾತ್ಮಕ ನೆರವನ್ನು ಆಡಳಿತ ಸುಧಾರಣೆ ಇಲಾಖೆಯಿಂದ ಪಡೆದುಕೊಳ್ಳುತ್ತದೆ. ಆದರೆ ಕೆಲವರು ತಪ್ಪಾಗಿ ಭಾವಿಸುವಂತೆ ಆಡಳಿತಾತ್ಮಕ ಸುಧಾರಣೆ ಇಲಾಖೆಯಾಗಲೀ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾಗಲೀ ಭ್ರಷ್ಟಾಚಾರ ನಿಗ್ರಹ ದಳ ದಾಖಲಿಸುವ ಪ್ರಕರಣಗಳ ಫೈಲುಗಳನ್ನು ತನಿಖೆ ಅಥವಾ ವಿಚಾರಣೆಯ ಮೇಲೆ ಮೇಲ್ವಿಚಾರಣೆ ನಡೆಸುವ ಅಧಿಕಾರವಿರುವುದಿಲ್ಲ. ಹಾಗೆಯೇ ಜಾಗೃತ ಸಲಹಾ ಮಂಡಳಿಯು ಒಟ್ಟಾರೆ ಆಡಳಿತಾತ್ಮಕ ಮೇಲುಸ್ತುವಾರಿ ಹಾಗೂ ಸಲಹೆ ನೀಡುವ ಅಧಿಕಾರವನ್ನು ಮಾತ್ರ ಹೊಂದಿರುತ್ತದೆಯೇ ಹೊರತು ACBಯ ತನಿಖೆಯಲ್ಲಿ ಯಾವುದೆ ಹಸ್ತಕ್ಷೇಪ ಮಾಡುವ ಅಧಿಕಾರ ಹೊಂದಿರುವುದಿಲ್ಲ. ಲಂಚ, ಅಕ್ರಮ ಆಸ್ತಿ ಪ್ರಕರಣಗಳಲ್ಲಿ ಅಥವಾ ಟ್ರ್ಯಾಪ್ ಪ್ರಕರಣಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳವು ತನಿಖೆ ನಡೆಸಲು ಸ್ವತಂತ್ರಾಧಿಕಾರ ಹೊಂದಿದ್ದು ಸರ್ಕಾರದ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ.
ದಿನಾಂಕ 14-03-2016ರ ಸರ್ಕಾರದ ಅದೇಶದಲ್ಲಿ ಜಾಗೃತ ಸಲಹಾ ಮಂಡಳಿಯ ಪರಿಶೀಲನಾ ಕಾರ್ಯವು ಕೇವಲ ಆಡಳಿತಾತ್ಮಕವಾಗಿರುತ್ತದೆಯೇ ಹೊರತು PC Act ಅಡಿಯ ಶಾಸನಾತ್ಮಕ ತನಿಖೆಗಳ ಮೇಲ್ವಿಚಾರಣೆ ಆಗುವುದಿಲ್ಲ ಎಂಬ ವಿಷಯವನ್ನು ಸ್ಪಷ್ಟವಾಗಿ ತಿಳಿಯಪಡಿಸಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಸಾಧ್ಯವಾಗಬೇಕು ಎನ್ನುವುದು ನಮ್ಮ ಸರ್ಕಾರದ ಗುರಿಯಾಗಿದ್ದು ಇದಕ್ಕೆ ಸೂಕ್ತವಾಗ ಆಡಳಿತ ಕ್ರಮಗಳ ಅಗತ್ಯತೆಯಿರುತ್ತದೆಯಲ್ಲದೇ ಭ್ರಷ್ಟಾಚಾರವನ್ನು ತಡೆಯುವಲ್ಲಿ ಇರುವ ಕುಂದುಕೊರತೆಗಳನ್ನು ಸರಿಪಡಿಸಿಕೊಂಡು ಹೋಗಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ACB ರಚನೆ ಒಂದು ಮಹತ್ವದ ಹೆಜ್ಜೆಯಾಗಿದೆ. ರಾಜ್ಯದಲ್ಲಿ ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಎರಡೂ ಸಹ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ದೃಷ್ಟಿಯಲ್ಲಿ ಶಾಸನಾತ್ಮಕ ಅನುಕೂಲತೆಗಳನ್ನು ಮಾಡುವುದು ನಮ್ಮ ಕರ್ತವ್ಯವಾಗಿದ್ದು ನಮ್ಮ ಸರ್ಕಾರ ಇದಕ್ಕೆ ಬದ್ಧವಾಗಿದೆ ಎಂದು ಈ ಮೂಲಕ ತಿಳಿಸಲಿಚ್ಛಿಸುತ್ತೇನೆ.
-ಸಿದ್ದರಾಮಯ್ಯ
ಮುಖ್ಯಮಂತ್ರಿ, ಕರ್ನಾಟಕ.







