ದೇವರ ನಾಡು ಕೇರಳದಲ್ಲಿ ಈಗ ಇನ್ನೊಬ್ಬ ಹೊಸ ದೇವರು

ತಿರುವನಂತಪುರಂ : ದೇವರ ನಾಡು ಕೇರಳದಲ್ಲಿ ಈಗ ಇನ್ನೊಂದು ದೇವರಿದ್ದಾನೆ. ಈ ದೇವರ ಅನುಯಾಯಿಗಳು ರವಿವಾರ ತಮ್ಮ ದೇವರಿಗೆ ಗೌರವ ಸೂಚಿಸಲು ಸಮ್ಮೇಳನವೊಂದನ್ನೂಆಯೋಜಿಸಿದರು. ಹಳದಿ ಬಣ್ಣದ ಅಂಗಿ, ಕುತ್ತಿಗೆಗೆ ಸುತ್ತಿದ ಕೆಂಪು ಬಟ್ಟೆ ಹಾಗೂ ಸೂಪರ್ ಹೀರೋ ಮಾದರಿಯ ಅಂಡರ್‌ವೇರ್ ಧರಿಸಿದ ಇಲಿಯೇ ಈ ದೇವರು.

ವಿಚಾರವಾದಿಗಳು ರಾಜ್ಯದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣುತೆಯನ್ನು ಎದುರಿಸಲು 2008ರಲ್ಲಿ ಆರಂಭಿಸಿದ ಅಣಕು ಧರ್ವವೇ ಡಿಂಕೋಯಿಸಂ. ಕೇರಳದಲ್ಲಿ ಮೂರು ದಶಕಗಳ ಕಾಲ ಜನಪ್ರಿಯವಾಗಿದ್ದ ಹಾಗೂ 2012ರಲ್ಲಿ ಪ್ರಕಟಣೆ ನಿಲ್ಲಿಸಿದ್ದಮಕ್ಕಳ ಮ್ಯಾಗಝೀನ್ ‘ಬಾಲಮಂಗಳಂ’ನಲ್ಲಿಪ್ರಕಟವಾಗುತ್ತಿದ್ದ ಕಾಮಿಕ್ ಮಾಲಿಕೆಯಲ್ಲಿನ ಪಾತ್ರ ಡಿಂಕನ್‌ನನ್ನು ಅವರು ತಮ್ಮ ದೇವರಾಗಿಆರಿಸಿಕೊಂಡರು. ಇತರ ಧರ್ಮಗಳಂತೆಯೇ ಡಿಂಕೋಯಿಸಂಗೆ ತನ್ನದೇ ಆದ ಧರ್ಮ ಗ್ರಂಥವಿದೆ,ಭಕ್ತಿ ಗೀತೆಗಳಿವೆ ಹಾಗೂ ಧರ್ಮಗುರುಗಳೂ ಇದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಧರ್ಮಾಂಧರ ಕಾರ್ಯಗಳಿಗೆ ತಕ್ಕ ಉತ್ತರ ನೀಡಲು ವಿಶೇಷ ಘಟಕವೂ ಇದೆ.
ಡಿಂಕೋಯಿಸಂ ಆನ್‌ಲೈನ್‌ನಲ್ಲಿ ಸಾಕಷ್ಟು ಜನಪ್ರಿಯವಾಗಿದ್ದರೂ ಅದು ತನ್ನ ಪ್ರಥಮ ದೊಡ್ಡ ಪರೀಕ್ಷೆಯನ್ನು ರವಿವಾರ ಕೊಝಿಕ್ಕೋಡಿನಲ್ಲಿ ಆಯೋಜಿಸಲಾಗಿದ್ದ ಅದರ ಪ್ರಥಮ ಬೃಹತ್ ಸಮ್ಮೇಳನದಲ್ಲಿ ಎದುರಿಸಿತ್ತು. ಆದರೆ ನಿರೀಕ್ಷೆಗೂ ಮೀರಿ ಈ ಸಮ್ಮೇಳನಕ್ಕೆ ಜನಸಾಗರ ಹರಿದು ಬಂದಿತ್ತಲ್ಲದೆ ಸಮ್ಮೇಳನದ ಹಾಲ್ ಚಿಕ್ಕದಾಗಿದ್ದರಿಂದ ಹಲವರನ್ನು ಹಿಂದಕ್ಕೆ ಕೂಡ ಕಳುಹಿಸಬೇಕಾಯಿತು.
ಕೊಝಿಕ್ಕೋಡ್ ಜಿಲ್ಲಾ ಕಲೆಕ್ಟರ್ ಪ್ರಶಾಂತ್ ನಾಯರ್ ಕೂಡ ಡಿಂಕೋಯಿಸಂಗೆ ಬೆಂಬಲ ವ್ಯಕ್ತಪಡಿಸಿದ್ದು ಅದರ ಪ್ರಾಯೋಜಕರಿಗೆ ದೊಡ್ಡ ಉತ್ತೇಜನವಾಗಿತ್ತು.ಡಿಂಕೋವಾದಿಗಳ ಧರ್ಮಗ್ರಂಥಯಾವುದೆಂದು ಬಲ್ಲಿರಾ-ಅದುವೇ ಮಕ್ಕಳ ಮ್ಯಾಗಜೀನ್ ‘ಬಾಲಮಂಗಳಂ.’ ಅದರ ಇನ್ನೊಂದು ಧರ್ಮ ಗ್ರಂಥ ‘ಡಿಂಕಾಪುರಾಣಂ.’ ಡಿಂಕೋಯಿಸಂಗೆ ಅಮೆರಿಕಾದಲ್ಲೂ ಅನುಯಾಯಿಗಳಿದ್ದು ಚಿಕಾಗೋ ನಗರದಲ್ಲಿ ಅದರ ಶಾಖೆ ಕೂಡ ಇದೆ. ‘ಡಿಂಕೋಯಿಸಂ’ನ ಜನಪ್ರಿಯತೆ ಗಮನಿಸಿ ಮಂಗಳಂ ಗ್ರೂಪ್ ಮತ್ತೆ ‘ಬಾಲಮಂಗಳಂ’ ಮ್ಯಾಗಜೀನನ್ನು ಹೊರತರುವ ಬಗ್ಗೆ ಯೋಚಿಸುತ್ತಿದೆ.









