ಮಲ್ಯನ 9000 ಕೋಟಿ ವಸೂಲಿ ಮಾಡಿ, ಮತ್ತೆ ನನ್ನ 260ರೂ. ದಂಡ ಕೇಳಿ !
ಟಿಕೆಟ್ ರಹಿತ ಪ್ರಯಾಣಕ್ಕೆ ದಂಡ ತೆರದೆ 12 ಗಂಟೆ ವಾದಿಸಿದ ಮಹಿಳೆ

ಮುಂಬೈ , ಮಾ. 22 : ಮುಂಬೈಯ ಲೋಕಲ್ ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡಿ ಸಿಕ್ಕಿಬಿದ್ದ ಮಹಿಳೆಯೊಬ್ಬರು ತಾನು ದಂಡ ತೆರಬೇಕಾದರೆ ವಿಜಯ್ ಮಲ್ಯ ಭಾರತದ ಬ್ಯಾಂಕುಗಳಿಗೆ ಬಾಕಿಯಿತ್ತ 9000 ಕೋಟಿ ರೂ. ಅನ್ನು ಮೊದಲು ವಸೂಲು ಮಾಡಬೇಕು ಎಂದು ಪಟ್ಟು ಹಿಡಿದು ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದ ಘಟನೆ ಇತ್ತೀಚಿಗೆ ನಡೆದಿದೆ.
ದಕ್ಷಿಣ ಮುಂಬೈಯ ವಿಲಾಸಿ ಪ್ರದೇಶವೊಂದರ ನಿವಾಸಿ ಪ್ರೇಮಲತಾ ಬನ್ಸಾಲಿ ಟಿಕೆಟ್ ರಹಿತ ಪ್ರಯಾಣಿಸಿ ಮಹಾಲಕ್ಷ್ಮಿ ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಟಿಕೆಟ್ ಪರೀಕ್ಷಕರ ಕೈಗೆ ಸಿಕ್ಕಿ ಬಿದ್ದರು. ಅವರಿಗೆ ರೂ. 260 ದಂಡ ವಿಧಿಸಲಾಯಿತು. ಆದರೆ ಅಧಿಕಾರಿಗಳಿಗೆ ಅಚ್ಚರಿ ಕಾಡಿತ್ತು. ತನ್ನ ದಂಡ ತೆರುವ ಬದಲು ತನ್ನನ್ನು ಸ್ಟೇಶನ್ ಮಾಸ್ತರ್ ಕಚೇರಿಗೆ ಕರೆದುಕೊಂಡು ಹೋಗಲು ಪ್ರೇಮಲತಾ ಹೇಳಿದರು. ಅಲ್ಲಿ " ವಿಜಯ್ ಮಲ್ಯ ದೇಶದ ಬ್ಯಾಂಕುಗಳಿಗೆ 9000 ಕೋಟಿ ರೂಪಾಯಿ ಬಾಕಿ ಇಟ್ಟಿದ್ದಾರೆ. ಆದರೆ ಅಧಿಕಾರಿಗಳು ಬಡವರ ಜೀವ ಹಿಂಡುತ್ತಿದ್ದಾರೆ ಎಂದು ಪದೇ ಪದೇ ಹೇಳಲಾರಂಭಿಸಿದರು. ರೈಲ್ವೆ ಅಧಿಕಾರಿಗಳು, ಪೊಲೀಸರು ಹೇಗೆ ಪ್ರಯತ್ನಿಸಿದರೂ ಸಮಾಧಾನಗೊಳ್ಳದ ಪ್ರೇಮಲತಾ ಸುಮಾರು 12 ಗಂಟೆ ಹಠ ಹಿಡಿದು ಕೂತಿದ್ದಾರೆ. ನನ್ನನ್ನು ಅಣ್ಣ ಹಝಾರೆ ರೀತಿ ಪ್ರತಿಭಟನೆ ಮಾಡಲು ಜೈಲಿಗೆ ಕಲಿಸಬೇಕು ಎಂದು ಆಕೆ ಪಟ್ಟು ಹಿಡಿದರು. ಆಕೆಯ ಪತಿಯನ್ನು ಕರೆದು ಹೇಳಿದರೂ ಆಕೆ ತನ್ನ ಹಠ ಬಿಡಲಿಲ್ಲ.
ಕೊನೆಗೆ ಬೇರೆ ದಾರಿ ಕಾಣದೆ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದು ಬಳಿಕ ವಶಕ್ಕೆ ತೆಗೆದುಕೊಂಡು ಬಿಡುಗಡೆ ಮಾಡಲಾಯಿತು. ಮಂಗಳವಾರ ನ್ಯಾಯಾಲಯದಲ್ಲಿ ಆಕೆಯ ಪ್ರಕರಣ ವಿಚಾರಣೆಗೆ ಬರಲಿದೆ.





