ಮೂಡುಬಿದಿರೆ : ಮರಗಳ್ಳರಿಂದ ಅರಣ್ಯಾಧಿಕಾರಿಗಳಿಗೆ ಧಮ್ಕಿ
ಮೂಡುಬಿದಿರೆ : ರಾಜೇಂದ್ರ ಜೈನ್ ಮತ್ತು ರುಕ್ಕಯ ಪೂಜಾರಿ ಎಂಬ ಇಬ್ಬರು ಮರದ ವ್ಯಾಪಾರಿಗಳು ಇತ್ತೀಚೆಗೆ ಅರಣ್ಯಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಕೆಯೊಡ್ಡಿದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ. ಶಿರ್ತಾಡಿ ತಾ.ಪಂನ ಮಾಜಿ ಸದಸ್ಯ, ಉದ್ಯಮಿ ರುಕ್ಕಯ ಪೂಜಾರಿ ಮತ್ತು ಮರದ ವ್ಯಾಪಾರಿ ಮೂಡುಮಾರ್ನಾಡಿನ ರಾಜೇಂದ್ರ ಜೈನ್ ಎಂಬವರು ಮೂಡುಬಿದಿರೆ ಅರಣ್ಯಾಧಿಕಾರಿಗಳಿಗೆ ಧಮ್ಕಿ ಹಾಕಿದ ವ್ಯಕ್ತಿಗಳು. ಕಳೆದ ಕೆಲವು ದಿನಗಳ ಹಿಂದೆ "ಬಾಹುಬಲಿ" ಎಂಬ ಹೆಸರಿನ ಲಾರಿಯೊಂದು ಮರವನ್ನು ತುಂಬಿಸಿಕೊಂಡು ಬಿ.ಸಿರೋಡ್ ಕಡೆಗೆ ಹೋಗುತ್ತಿದ್ದಾಗ ಉಪ ವಲಯಾರಣ್ಯಾಧಿಕಾರಿ ಪ್ರಕಾಶ್ ಶೆಟ್ಟಿ ಎಂಬವರು ಗಂಟಾಲ್‌ಕಟ್ಟೆ ಬಳಿ ತಡೆದು ನಿಲ್ಲಿಸಿ ವಿಚಾರಿಸಿದಾಗ ತಾ.ಪಂನ ಮಾಜಿ ಸದಸ್ಯ ರುಕ್ಕಯ ಪೂಜಾರಿ ಎಂಬವರಿಗೆ ಸೇರಿದ ಮರವೆಂದು ಚಾಲಕ ಬಾಯ್ಬಿಟ್ಟಿದ್ದ. ಮರ ಅಕ್ರಮವಾಗಿ ಸಾಗಾಟವಾಗುತ್ತಿದೆ ಎಂಬ ಮಾಹಿತಿಯನ್ನು ತಿಳಿದುಕೊಂಡ ಅಧಿಕಾರಿಗಳು ರಾತ್ರಿ 8 ಗಂಟೆಯ ವೇಳೆಗೆ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದರು.
ಮರುದಿನ ಬೆಳಿಗ್ಗೆ ರುಕ್ಕಯ ಪೂಜಾರಿ ಅವರು ತನ್ನ ಮರದ ವ್ಯಾಪಾರಿ ರಾಜೇಂದ್ರ ಜೈನ್ ಅವರ ಜತೆಗೂಡಿ ಅರಣ್ಯಾಧಿಕಾರಿಗಳ ಕಛೇರಿಗೆ ಆಗಮಿಸಿ ತನ್ನ ಲಾರಿ ಸಹಿತ ಮರವನ್ನು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸಿದ್ದ ಅರಣ್ಯಾಧಿಕಾರಿಗಳಿಗೆ ಕಛೇರಿಯಲ್ಲೇ ಧಮ್ಕಿ ಹಾಕಿ ಬೆದರಿಕೆಯೊಡ್ಡಿದ್ದಾರೆನ್ನಲಾಗಿದೆ. ಅಲ್ಲದೆ ರಾಜೇಂದ್ರ ಜೈನ್ ಎಂಬವರು "ಈ ಹಿಂದೆ ಎಸಿಎಫ್ ಆಗಿದ್ದ ಅಧಿಕಾರಿಗಳಿಗೆ ಕಣ್ಣೀರಿಳಿಸಿದ್ದೆ ತಮಗೂ ಅದೇ ಸ್ಥಿತಿಯನ್ನು ತರುವೆ" ಎಂಬ ಟಾಂಗ್ ನೀಡಿದ್ದಾರೆನ್ನಲಾಗಿದೆ. ಅಲ್ಲದೆ ಈ ಬಗ್ಗೆ ಇಬ್ಬರು ಮರಗಳ್ಳರಿಗೆ ಮತ್ತು ಅರಣ್ಯಾಧಿಕಾರಿಗಳಿಗೆ ದೊಡ್ಡ ಮಟ್ಟದಲ್ಲಿಯೇ ಮಾತಿನ ಚಕಾಮಕಿ ನಡೆದಿದೆ ಎನ್ನಲಾಗಿದೆ.
ಮರ ಸಹಿತ ಲಾರಿಯನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವುದು ನಿಜ. ಶಿರ್ತಾಡಿ-ವಾಲ್ಪಾಡಿ ವ್ಯಾಪ್ತಿಯಲ್ಲಿ ಅನುಮತಿ ಮೇರೆಗೆ ಮರವನ್ನು ಕಡಿಯಲಾಗುತ್ತಿದೆ ಆದರೆ ಸಾಗಾಟ ಮಾಡುತ್ತಿದ್ದ ಮರ ಪಟ್ಟಾ ಜಾಗದ್ದೇ ಅಥವಾ ಸರಕಾರಿ ಜಾಗದ್ದೇ..? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ಮರವನ್ನು ವಶಕ್ಕೆ ತೆಗೆದುಕೊಂಡಿರುವುದರ ಬಗ್ಗೆ ತಾ.ಪಂ ಮಾಜಿ ಸದಸ್ಯ ರುಕ್ಕಯ ಪೂಜಾರಿ ಮತ್ತು ಮರದ ವ್ಯಾಪಾರಿ ರಾಜೇಂದ್ರ ಜೈನ್ ಕಛೇರಿಗೆ ಆಗಮಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದಾಗ ಮಾತಿನ ಚಕಾಮಕಿ ನಡೆದಿದೆ- ಜಿ.ಡಿ ದಿನೇಶ್ ವಲಯಾರಣ್ಯಾಧಿಕಾರಿ ಮೂಡುಬಿದಿರೆ







