ಉ.ಪ್ರ: ದಲಿತರ 35 ಮನೆಗಳಿಗೆ ಬೆಂಕಿ ಇಬ್ಬರು ಮಕ್ಕಳು ಜೀವಂತ ದಹನ
ಗ್ರಾಮ ಪಂಚಾಯತ್ ಮುಖಂಡನಿಂದ ಸೇಡು: ದಲಿತರ ಆರೋಪ

ಸೀತಾಪುರ, ಮಾ.22: ಉತ್ತರ ಪ್ರದೇಶದ ಸೀತಾ ಪುರದ ದಹೇಲಿಯಾ ಪಟ್ಟಿ ಗ್ರಾಮದ ದಲಿತರ ಕಾಲನಿಯ 30ಕ್ಕೂ ಅಧಿಕ ಮನೆಗಳು ಬೆಂಕಿ ಅವಘಡಕ್ಕೀಡಾಗಿದ್ದು, ಇಬ್ಬರು ಮಕ್ಕಳು ಜೀವಂತ ದಹನವಾಗಿರುವ ಘಟನೆ ‘ಇಂಡಿಯಾ ಸಂವಾದ್’ ವೆಬ್‌ಸೈಟ್‌ನಲ್ಲಿ ವರದಿಯಾಗಿದೆ.
ದಲಿತರು ಮತ ನೀಡಲಿಲ್ಲ ಎನ್ನುವ ಕಾರಣವನ್ನು ಮುಂದಿಟ್ಟು ಗ್ರಾಮ ಪಂಚಾಯತ್ ಮುಖಂಡನೇ ಈ ಕೃತ್ಯ ಎಸಗಿದ್ದಾನೆ ಎಂದು ಸಂತ್ರಸ್ತ ದಲಿತರು ಆರೋಪಿಸಿದ್ದಾರೆ.
ಸೋಮವಾರ ನಡೆದ ಈ ಭೀಭತ್ಸ ಘಟನೆಯಲ್ಲಿ ಸೂರ್ಯಾಂಶಿ ಹಾಗೂ ಮುಖೇಶ್ ಎನ್ನುವ ಇಬ್ಬರು ಮಕ್ಕಳು ಕರಕಲಾಗಿದ್ದಾರೆ. ಕನಿಷ್ಠ 35 ದಲಿತರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರಾಣ ಕಳೆದುಕೊಂಡಿರುವ ಮಕ್ಕಳು ಕೇವಲ 8 ಹಾಗೂ 4ರ ಹರೆಯದವರಾಗಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಾಯಕ ಕಮಲೇಶ್ ವರ್ಮ ಎಂಬವನಿಗೆ ದಲಿತರು ಮತ ನೀಡದ ಕಾರಣ ಅವರ ಮನೆಗಳನ್ನು ಸುಡಲಾಗಿದೆ. ಇದು ಅವರ ಸೇಡು ತೀರಿಸುವ ಕ್ರಮವಾಗಿದೆಯೆಂದು ಸಂತ್ರಸ್ತ ದಲಿತರು ಹೇಳಿಕೆ ನೀಡಿದ್ದಾರೆ.
ಈ ಪ್ರದೇಶದಲ್ಲಿ 2015ರ ನ.27 ಹಾಗೂ ಡಿ.15ರಂದು ಚುನಾವಣೆಗಳು ನಡೆದಿದ್ದವು. ದಹೇಲಿಯಾ ಪಟ್ಟ ಗ್ರಾಮದ ಪ್ರಧಾನನಾಗಿ ಕಮಲೇಶ್ ಮರು ಆಯ್ಕೆಗೊಂಡಿದ್ದನು. ಕಮಲೇಶ್, ತಮ್ಮ ಕಾಲನಿಯ ಸಮೀಪದ ಆತನ ಜಮೀನಿನಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ್ದು, ಆ ಬೆಂಕಿ ದಲಿತರ ಮನೆಗಳಿಗೆ ಹರಡಿದವು ಎನ್ನುವುದು ಗ್ರಾಮಪಂಚಾಯತ್‌ನ ವಾದವಾಗಿದೆ.. ತಮ್ಮ ಮನೆಗಳಿಗೆ ಬೆಂಕಿ ಹರಡುವ ಭೀತಿಯಿಂದ, ಆ ರೀತಿ ಮಾಡದಂತೆ ತಾವಾತನಲ್ಲಿ ವಿನಂತಿಸಿದ್ದೆವು. ಆದರೆ, ಆತ ಕೇಳಲಿಲ್ಲವೆಂದು ಮೃತ ಮಗುವೊಂದರ ತಾಯಿ ತಿಳಿಸಿದ್ದಾಳೆ. ತನಗೆ ಮತ ನೀಡದಿದ್ದರೆ ಮನೆಗಳನ್ನು ಸುಡುವೆನೆಂದು ಕಮಲೇಶ್, ಚುನಾವಣೆಗೆ ಮೊದಲು ತಮಗೆ ಬೆದರಿಕೆ ಹಾಕಿದ್ದನು. ಸೇಡಿಗಾಗಿ ಅವನು ಈಗ ಬೆಂಕಿ ಹಚ್ಚಿದ್ದಾನೆಂದು ಗ್ರಾಮಸ್ಥನೊಬ್ಬ ಆರೋಪಿಸಿದ್ದಾನೆ.
ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.







