ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿದ ಪೊಲೀಸರು, ಹಲವರು ಆಸ್ಪತ್ರೆಗೆ ದಾಖಲು
ಹೈದರಾಬಾದ್ ವಿವಿ ವಿವಾದ: ಪೊಲೀಸ್ ಬಲದೊಂದಿಗೆ ವಿವಿ ಪ್ರವೇಶಿಸಿದ ಕುಲಪತಿ ಅಪ್ಪಾರಾವ್
ಹೈದರಾಬಾದ್,ಮಾ.22: ಪಿಎಚ್‌ಡಿ ವಿದ್ಯಾರ್ಥಿ ರೋಹಿತ ವೇಮುಲಾರ ಆತ್ಮಹತ್ಯೆ ವಿರುದ್ಧ ಪ್ರತಿಭಟನೆಯು ಉತ್ತುಂಗದಲ್ಲಿದ್ದಾಗ ರಜೆಯ ಮೇಲೆ ತೆರಳಿದ್ದ ಹೈದರಾಬಾದ್ ಕೇಂದ್ರೀಯ ವಿವಿಯ ಕುಲಪತಿ ಪ್ರೊ.ಅಪ್ಪಾ ರಾವ್ ಪೊಡಿಲೆ ಅವರು ಭಾರೀ ಪೊಲೀಸ್ ಪಡೆಯ ಜೊತೆಗೆ ಮಂಗಳವಾರ ಕರ್ತವ್ಯಕ್ಕೆ ಮರಳಿ ಹಾಜರಾಗಿದ್ದಾರೆ.
ಈ ಸಂದರ್ಭದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಿದ ನೂರಾರು ವಿದ್ಯಾರ್ಥಿಗಳ ಮೇಲೆ ಪೊಲೀಸರು ಯದ್ವಾತದ್ವಾ ಲಾಠಿ ಬೀಸಿದ್ದು, ಹಲವು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಡೆದಿದೆ. ಸುಮಾರು 20 ಮಂದಿ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪ್ಪಾ ರಾವ್ ಮಂಗಳವಾರ ಬೆಳಿಗ್ಗೆ ಸುದ್ದಿಗೋಷ್ಠಿಯನ್ನು ಕರೆದಿದ್ದರು. ಆದರೆ ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಅದನ್ನು ರದ್ದುಗೊಳಿಸಬೇಕಾಯಿತು.
ಕುಲಪತಿ ಮರಳಬಾರದುಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ನಾವು ರೋಹಿತ್ ವೇಮುಲಾರನ್ನು ಕಳೆದುಕೊಂಡಿದ್ದೇವೆ. ಅಪ್ಪಾ ರಾವ್ ತಪ್ಪಿತಸ್ಥರಲ್ಲೋರ್ವರಾಗಿದ್ದಾರೆ. ವೇಮುಲಾ ಆತ್ಮಹತ್ಯೆ ಮಾಡಿಕೊಂಡು ಎರಡು ತಿಂಗಳುಗಳೇ ಕಳೆದು ಹೋಗಿವೆ, ಆದರೆ ಈವರೆಗೂ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಆದರೆ ಬುಧವಾರ ಪೊಲೀಸ್ ಪಡೆಯ ಬೆಂಬಲದ ಜೊತೆಗೆ ಅಪ್ಪಾರಾವ್ ಕರ್ತವ್ಯಕ್ಕೆ ಹಾಜರಾದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿಗಳ ಮಧ್ಯೆ ತೀವ್ರ ತಿಕ್ಕಾಟ ನಡೆಯಿತು. ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು ಅಪ್ಪಾರಾವ್ ಪರವಾಗಿ ನಿಂತು, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಅಪ್ಪಾರಾವ್ ನಿವಾಸದ ಮೇಲೆ ಅವರೇ ದಾಳಿ ನಡೆಸಿ, ಅದನ್ನು ಅಮಾಯಕರ ತಲೆಗೆ ಕಟ್ಟಿದ್ದಾರೆ ಎಂದೂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಬುಧವಾರ ಹೈದರಾಬಾದ್ ವಿವಿಗೆ ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಅವರ ಪ್ರಸ್ತಾವಿತ ಭೇಟಿ ಕುರಿತ ಪ್ರಶ್ನೆಗೆ ಅಪ್ಪಾ ರಾವ್, ಸಭೆಗೆ ನಾನು ಅನುಮತಿಯನ್ನು ನೀಡಿಲ್ಲ. ಇಂತಹ ಅನುಮತಿಯನ್ನು ಕೋರಿ ಯಾರೂ ಪತ್ರವನ್ನೂ ಸಲ್ಲಿಸಿಲ್ಲ ಎಂದು ಉತ್ತರಿಸಿದರು.







