2025ರ ವೇಳೆಗೆ 180 ಕೋಟಿ ಜನರಿಗೆ ಕುಡಿಯಲು ನೀರಿಲ್ಲ: ವಿಶ್ವಸಂಸ್ಥೆ
ವಿಶ್ವಸಂಸ್ಥೆ, ಮಾ. 22: ಮಾನವ ಕುಲ ಎದುರಿಸಬೇಕಾದ ಘೋರ ಪರಿಸ್ಥಿತಿಯೊಂದರ ಬಗ್ಗೆ ವಿಶ್ವಸಂಸ್ಥೆ ಬೆಳಕು ಚೆಲ್ಲಿದೆ. 2025ರ ವೇಳೆಗೆ ಜಗತ್ತಿನ ಸುಮಾರು 180 ಕೋಟಿ ಜನರು ಸ್ಪಷ್ಟ ನೀರಿನ ಕೊರತೆಯನ್ನು ಎದುರಿಸಲಿದ್ದಾರೆ ಎಂದು ಅದು ಎಚ್ಚರಿಸಿದೆ. ಅಷ್ಟೇ ಅಲ್ಲ, ಜಾಗತಿಕ ಜನಸಂಖ್ಯೆಯ ಮೂರನೆ ಎರಡರಷ್ಟು ಭಾಗ ನೀರಿನ ಕೊರತೆಯ ಪರಿಸ್ಥಿತಿಯಲ್ಲಿ ಬದುಕಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದೆ.
ಜಾಗತಿಕ ಸಿಹಿ ನೀರಿನ ಮೂಲಗಳನ್ನು ಸಂರಕ್ಷಿಸಲು ಹಾಗೂ ನೀರಿನ ಕೊರತೆಯನ್ನು ತಪ್ಪಿಸಲು ಅರಣ್ಯಗಳನ್ನು ರಕ್ಷಿಸುವುದು ಮಹತ್ವದ ಕ್ರಮವಾಗಿದೆ ಎಂಬುದಾಗಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಪರಿಣತರು ಅಭಿಪ್ರಾಯಪಟ್ಟರು ಎಂದು ಕ್ಸಿನುವ ವಾರ್ತಾ ಸಂಸ್ಥೆ ವರದಿ ಮಾಡಿದೆ.
ಅಂತಾರಾಷ್ಟ್ರೀಯ ಅರಣ್ಯ ದಿನಾಚರಣೆ ಅಂಗವಾಗಿ ಸೋಮವಾರ ಅರಣ್ಯ ಮತ್ತು ನೀರು ಕುರಿತ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.
ಜನರು ಪ್ರತಿ ದಿನ ಬಳಸುವ ಸಿಹಿ ನೀರಿನ ಮುಕ್ಕಾಲು ಭಾಗ ಅರಣ್ಯಾವೃತ ಜಲಾನಯನ ಪ್ರದೇಶಗಳಿಂದ ಬರುತ್ತಿದೆ ಹಾಗೂ 160 ಕೋಟಿಗೂ ಅಧಿಕ ಜನರು ಅಹಾರ, ನೀರು, ಔಷಧಗಳು ಮತ್ತು ಇಂಧನಕ್ಕಾಗಿ ಅರಣ್ಯಗಳನ್ನೇ ಆಶ್ರಯಿಸಿದ್ದಾರೆ ಎಂದು ಅರಣ್ಯ ಪರಿಣತರು ಹೇಳಿದರು.
ಎಲ್ಲಿ ಮತ್ತು ಹೇಗೆ ಮಳೆ ಬೀಳಬೇಕು ಎಂಬುದರ ಮೇಲೆ ಅರಣ್ಯಾವೃತ ಜಲಾನಯನ ಪ್ರದೇಶಗಳು ಮತ್ತು ಜೌಗುಪ್ರದೇಶಗಳು ಪರಿಣಾಮ ಬೀರುತ್ತವೆ ಎಂದು ಪರಿಣತರು ತಿಳಿಸಿದರು.
ಅಂತರ್ಜಲ ಮರುಪೂರೈಕೆ ಮತ್ತು ಸವಕಳಿ ನಿಯಂತ್ರಣ ಸೇರಿದಂತೆ ನೀರಿನ ಬಳಕೆ ಮತ್ತು ನಿಯಂತ್ರಣದಲ್ಲಿ ಅರಣ್ಯಗಳು ಪ್ರಮುಖ ಪಾತ್ರ ನಿಭಾಯಿಸುತ್ತವೆ ಎಂದು ಪರಿಣತರು ಹೇಳಿದರು.
‘‘ಅರಣ್ಯಗಳು ಈ ಗ್ರಹದ ನೈಸರ್ಗಿಕ ಜಲ ಗೋಪುರಗಳು’’ ಎಂದು ವಿಶ್ವಸಂಸ್ಥೆಯ ಅರಣ್ಯಗಳ ಕುರಿತ ಸಚಿವಾಲಯದ ನಿರ್ದೇಶಕ ಮ್ಯಾನುಯಲ್ ಸೊಬ್ರಾಲ್ ಫಿಲ್ಹೊ ಹೇಳಿದರು.





