ಹಜ್, ಉಮ್ರಾ, ರಿಯಾದ್ ಮೆಟ್ರೊ ಯೋಜನೆಗಳಿಗೆ ಬಾಧಕವಿಲ್ಲ
ಸೌದಿಯಿಂದ ಹಾಲಿ ಯೋಜನೆಗಳ ಮರುಪರಿಶೀಲನೆ
ಜಿದ್ದಾ, ಮಾ. 22: ಹಜ್ ಮತ್ತು ಉಮ್ರಾ ಯಾತ್ರೆಗಳಿಗೆ ಸಂಬಂಧಿಸಿದ ಯೋಜನೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವ ರಿಯಲಿವೆ. ಅದೇ ವೇಳೆ, ಇತರ ಯೋಜನೆಗಳನ್ನು ಮರುಪರಿಶೀಲಿಸಲಾಗುವುದು ಹಾಗೂ ಅವುಗಳನ್ನು ಆದ್ಯತೆಗೆ ತಕ್ಕಂತೆ ನಿಭಾಯಿಸಲಾಗುವುದು. ರಿಯಾದ್ ಮೆಟ್ರೊ ಯೋಜನೆಯೂ ಜಾರಿಯಲ್ಲಿದೆ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ.
ಸೌದಿ ಅರೇಬಿಯದ ಮುನಿಸಿಪಲ್ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯವು ಆರ್ಥಿಕ ಮತ್ತು ಅಭಿವೃದ್ಧಿ ವ್ಯವಹಾರಗಳ ಮಂಡಳಿಯ ಶಿಫಾರಸುಗಳಂತೆ ಚಾಲ್ತಿಯಲ್ಲಿರುವ ಯೋಜನೆಗಳ ಆದ್ಯತೆಯನ್ನು ಮರುಪರಿಶೀಲನೆ ನಡೆಸುತ್ತಿದೆ.
ಯೋಜನೆಗಳ ಬಜೆಟ್‌ಗಳ ಗರಿಷ್ಠ ಪ್ರಯೋಜನ ಪಡೆದುಕೊಳ್ಳುವ ಹಾಗೂ ಪ್ರಸಕ್ತ ಅಭಿವೃದ್ಧಿ ಪ್ರವೃತ್ತಿಗಳೊಂದಿಗೆ ಹೆಜ್ಜೆ ಹಾಕುವ ಪ್ರಯತ್ನವಾಗಿ ಈ ಮರುಪರಿಶೀಲನೆಯನ್ನು ನಡೆಸಲಾಗುತ್ತಿದೆ.
ನೂತನ ಶಿಫಾರಸುಗಳ ಪ್ರಕಾರ, ಸಚಿವಾಲಯವು ನೂತನ ಯೋಜನೆಗಳಿಗೆ ಅನುಮೋದನೆ ನೀಡುವ ಹಾಗೂ ಸಹಿ ಹಾಕುವ ಪ್ರಕ್ರಿಯೆಯನ್ನು ತಡೆಹಿಡಿದಿದೆ. ಆದಾಗ್ಯೂ, ಹೀಗೆ ಮಾಡುವಾಗ ಹಜ್ ಮತ್ತು ಉಮ್ರಾ ಯಾತ್ರೆಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ವಿನಾಯಿತಿ ನೀಡಲಾಗಿದೆ.
ಹಜ್ ಮತ್ತು ಉಮ್ರಾ ಯಾತ್ರೆಗಳಿಗೆ ಸಂಬಂಧಿಸಿದ ಯೋಜನೆಗಳ ಜೊತೆಗೆ ರಿಯಾದ್ ಮೆಟ್ರೊ ಯೋಜನೆಯೂ ಪೂರ್ಣ ಪ್ರಮಾಣದಲ್ಲಿ ಜಾರಿಯಲ್ಲಿದೆ.
ತೈಲ ಬೆಲೆಯಲ್ಲಿನ ಭಾರೀ ಕುಸಿತವು ಸೌದಿ ಅರೇಬಿಯದ ಆರ್ಥಿಕತೆಯ ಮೇಲೆ ಭಾರೀ ಹೊಡೆತ ನೀಡಿರುವುದನ್ನು ಸ್ಮರಿಸಬಹುದಾಗಿದೆ. ಈ ಹಿನ್ನೆಲೆಯಲ್ಲೇ, ಅದು ತನ್ನ ಹಾಲಿ ಯೋಜನೆಗಳ ಪರಿಷ್ಕರಣೆಗೆ ಮುಂದಾಗಿದೆ.





