ಐರೋಪ್ಯ ಒಕ್ಕೂಟದ ಸುಧಾರಣಾ ಪ್ರಕ್ರಿಯೆ ಮೇಲೆ ವ್ಯತಿರಿಕ್ತ ಪರಿಣಾಮ?
ಬ್ರಸೆಲ್ಸ್ ವಿಮಾನ ನಿಲ್ದಾಣದಲ್ಲಿ ಆತ್ಮಹತ್ಯಾ ದಾಳಿ
ಬ್ರಸೆಲ್ಸ್, ಮಾ. 22: ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ನ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದ ಆತ್ಮಹತ್ಯಾ ದಾಳಿ ಮತ್ತು ನಗರದ ಮೆಟ್ರೊ ರೈಲು ನಿಲ್ದಾಣದಲ್ಲಿ ನಡೆದ ಇನ್ನೊಂದು ಸ್ಫೋಟ ಐರೋಪ್ಯ ಒಕ್ಕೂಟದ ಸುಧಾರಣಾ ಪ್ರಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ. ‘‘ಗಡಿಯಿಲ್ಲದ ಯುರೋಪ್’’ನ ಕಲ್ಪನೆ ಹಿನ್ನೆಲೆಗೆ ಸರಿಯುವ ಭೀತಿ ಎದುರಾಗಿದೆ.
ಬ್ರಸೆಲ್ಸ್ ಸರಣಿ ದಾಳಿಗಳಲ್ಲಿ ಕನಿಷ್ಠ 28 ಮಂದಿ ಮೃತಪಟ್ಟಿದ್ದಾರೆ.
ಸಮಗ್ರ ಐರೋಪ್ಯ ಒಕ್ಕೂಟದ ಕಲ್ಪನೆಯು ಕೆಲವು ಸಮಯದಿಂದ ಆರ್ಥಿಕ ಬಿಕ್ಕಟ್ಟು, ಭಯೋತ್ಪಾದನೆ ಬೆದರಿಕೆ ಮತ್ತು ಸಿರಿಯದಿಂದ ಪ್ರವಾಹೋಪಾದಿಯಲ್ಲಿ ವಲಸೆ ಬರುತ್ತಿರುವ ವಲಸಿಗರ ಸಮಸ್ಯೆಗಳಿಂದ ಒತ್ತಡಕ್ಕೊಳಗಾಗಿತ್ತು. ಸಿರಿಯದಿಂದ ಬರುತ್ತಿರುವ ವಲಸಿಗರ ಪ್ರವಾಹವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜರ್ಮನ್ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಕಳೆದ ವಾರ ಟರ್ಕಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿರಬಹುದು. ಆದರೆ, ಮಂಗಳವಾರದ ಆಕ್ರಮಣಗಳು ಐರೋಪ್ಯ ಒಕ್ಕೂಟದ ಒಳಗೇ ಬಲಿಷ್ಠ ರಾಷ್ಟ್ರೀಯ ಗಡಿಗಳು ಇರಬೇಕೆಂಬ ವಾದಕ್ಕೆ ಬಲ ತುಂಬಿವೆ.
2015ರ ನವೆಂಬರ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆದ ಸರಣಿ ಭಯೋತ್ಪಾದನಾ ದಾಳಿಗಳ ರೂವಾರಿ ಹಾಗೂ ಯುರೋಪ್‌ನ ಅತ್ಯಂತ ಬೇಕಾದ ದೇಶಭ್ರಷ್ಟ ಸಲಾಹ್ ಅಬ್ದ್ದುಸ್ಸಲಾಂನನ್ನು ಶುಕ್ರವಾರವಷ್ಟೇ ನಾಟಕೀಯ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು. ಪ್ಯಾರಿಸ್ ದಾಳಿಯಲ್ಲಿ 130ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.
ಬೆಲ್ಜಿಯಂ ರಾಜಧಾನಿ ಮೇಲೆ ದಾಳಿ ನಡೆಸಲು ಸಂಚು ರೂಪಿಸಲಾಗಿದೆ ಎಂಬುದನ್ನು ವಿಚಾರಣೆಯ ವೇಳೆ ಆತ ಬಹಿರಂಗಪಡಿಸಿದ್ದ ಎಂಬುದಾಗಿ ಆ ದೇಶದ ವಿದೇಶ ಸಚಿವರು ಹೇಳಿದ್ದರು.
ಅಬ್ದ್ದುಸ್ಸಲಾಂ ಬೆಲ್ಜಿಯಂ ಸಂಜಾತ ಫ್ರೆಂಚ್ ಪ್ರಜೆ. ಪ್ರಸಕ್ತ ದಾಳಿಯ ಸೂತ್ರಧಾರರ ಗುರುತು ಬಹಿರಂಗವಾಗಿಲ್ಲವಾದರೂ, ದಾಳಿ ನಡೆಸುವವರು ಹೊರಗಿನವರಲ್ಲ, ಸ್ಥಳೀಯರೇ ಎಂಬುದನ್ನು ಇತ್ತೀಚೆಗೆ ಯುರೋಪ್‌ನಾದ್ಯಂತ ನಡೆದ ದಾಳಿಗಳು ತೋರಿಸಿವೆ.
2015ರಲ್ಲಿ ಪ್ಯಾರಿಸ್‌ನಲ್ಲಿ ‘ಚಾರ್ಲಿ ಹೆಬ್ಡೊ’ ಪತ್ರಿಕಾ ಕಚೇರಿಯ ಮೇಲೆ ನಡೆದ ದಾಳಿಗಳ ಪ್ರಮುಖ ಶಂಕಿತರಾದ ಕುವಾಚಿ ಸಹೋದರರು ಪ್ಯಾರಿಸ್‌ನಲ್ಲೇ ಹುಟ್ಟಿದ ಫ್ರೆಂಚ್ ನಾಗರಿಕರೇ.
ಹೊರಗಿನವರಿಗೆ ತಮ್ಮ ಗಡಿಗಳನ್ನು ಮುಕ್ತವಾಗಿಡಬೇಕೆಂದು ಪ್ರತಿಪಾದಿಸುತ್ತಿರುವ ದೇಶಗಳಿಗೆ ಈ ಭಯೋತ್ಪಾದಕ ದಾಳಿಗಳಿಂದ ಹಿನ್ನಡೆಯಾಗಿದೆ.





