ಸೌದಿ ಅರೇಬಿಯದಲ್ಲಿ ತಿಂಗಳು ಮೀರಿ ನಿಲ್ಲುವ ವಲಸಿಗರಿಗೆ ವಿಮಾ ಸೇವೆ ಇಲ್ಲ?
ಜಿದ್ದಾ, ಮಾ. 22: ಸೌದಿ ಅರೇಬಿಯದಲ್ಲಿರುವ ವಲಸಿಗರು ಒಂದು ತಿಂಗಳಿಗಿಂತ ಹೆಚ್ಚಿನ ಅವಧಿ ವಿದೇಶದಲ್ಲಿದ್ದರೆ ಅವರ ಎಲ್ಲಾ ವಿಮಾ ಸೌಲಭ್ಯಗಳನ್ನು ಸ್ಥಗಿತಗೊಳಿಸುವ ಪ್ರಸ್ತಾಪವಿದೆಯೆಂದು ಜನರಲ್ ಆರ್ಗನೈಝೇಶನ್ ಫಾರ್ ಸೋಶಿಯಲ್ ಇನ್ಶೂರೆನ್ಸ್ ತಿಳಿಸಿದೆ. ವಲಸಿಗರು ದೇಶಕ್ಕೆ ಹಿಂದಿರುಗಿದ ನಂತರವಷ್ಟೇ ಅವರ ವಿಮಾ ಸೌಲ್ಯ ಮಂದುವರಿಯುವುದೆಂದು ಅದು ಹೇಳಿದೆ.
ಈ ನಿಯಮವನ್ನು ಜಾರಿಗೆ ತರುವ ಪ್ರಕ್ರಿಯೆಯ ಬಗ್ಗೆ ಸಂಸ್ಥೆ ಇನ್ನಷ್ಟೇ ನಿರ್ಧರಿಸಬೇಕಾಗಿದೆಯಾದರೂ ಈ ನಿಟ್ಟಿನಲ್ಲಿ ಆಂತರಿಕ ವ್ಯವಹಾರಗಳ ಸಚಿವಾಲಯದೊಂದಿಗೆ ಮಾತುಕತೆಗಳು ನಡೆಯುತ್ತಿವೆಯೆಂದು ಸಂಸ್ಥೆಯ ಉಪ-ಗವರ್ನರ್ ಅಬ್ದುಲ್ ಅಝೀಝ್ ಅಲ್-ಹಬ್ದನ್ ಈಸ್ಟರ್ನ್ ಪ್ರಾವಿನ್ಸ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿಯಲ್ಲಿ ನಡೆದ ಸಂವಾದವೊಂದರಲ್ಲಿ ತಿಳಿಸಿದ್ದಾರೆ.
ದೇಶದಲ್ಲಿರುವ ದೊಡ್ಡ ಸಂಖ್ಯೆಯ ವಿದೇಶಿ ಕಾರ್ಮಿಕರನ್ನು ಪರಿಗಣಿಸಿ ಕಂಪೆನಿಗಳಿಗೆ ಹಾಗೂ ಉದ್ಯೋಗಿಗಳಿಗೆ ಇಲೆಕ್ಟ್ರಾನಿಕ್ ಸೇವೆಗಳನ್ನು ಆರಂಭಿಸಲು ಸಂಸ್ಥೆ ಯೋಚಿಸುತ್ತಿದೆ. ಪ್ರಸ್ತುತ ಶೇ. 50ರಷ್ಟು ಸದಸ್ಯರು ಮುಖತಃ ಭೇಟಿಯಾಗಿ ತಮ್ಮ ಕಾರ್ಯಗಳನ್ನು ಸಂಸ್ಥೆಯ ಮುಖಾಂತರ ನಿರ್ವಹಿಸುತ್ತಾರೆ ಎಂದೂ ಅವರು ತಿಳಿಸಿದರು.
ಕಾರ್ಮಿಕರ ವೇತನದ ಕುರಿತು ಮಾತನಾಡಿದ ಅವರು ಹಲವು ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ವಾಸ್ತವವಾಗಿ ನೀಡುವ ವೇತನಕ್ಕಿಂತ ಕಡಿಮೆ ವೇತನವನ್ನು ಸಂಸ್ಥೆಯಲ್ಲಿ ನೋಂದಾಯಿಸುವಾಗ ನಮೂದಿಸಿ ತಾವು ಸಂಸ್ಥೆಗೆ ಕೊಡಬೇಕಾದ ಮೊತ್ತ ಕಡಿಮೆಯಾಗುವಂತೆ ನೋಡಿಕೊಳ್ಳುತ್ತಾರೆ ಎಂದರು. ಅದೇ ವೇಳೆ, ವಿದೇಶೀಯರನ್ನು ವಿವಾಹವಾದ ಸೌದಿ ಮಹಿಳೆಯರ ಮಕ್ಕಳಿಗೆ ಸಾಮಾಜಿಕ ವಿಮಾ ವ್ಯವಸ್ಥೆಯ ಪ್ರಯೋಜನ ಸಿಗುತ್ತಿಲ್ಲವೆಂದು ಹೇಳುವ ವರದಿಗಳನ್ನು ನಿರಾಕರಿಸಿದರು.
ತಮ್ಮ ಸೇವಾವಧಿ ಮುಕ್ತಾಯಗೊಳ್ಳುವ ಮೊದಲೇ ನಿವೃತ್ತರಾಗಬಯಸುವವರಿಂದ ಸಂಸ್ಥೆಯ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆಯೆಂದು ಆವರು ಹೇಳಿದರು.
ಸಂಸ್ಥೆಯಲ್ಲಿ ಈಗ 4 ಲಕ್ಷ ಕಂಪೆನಿಗಳು ಹಾಗೂ ಅವುಗಳ 85 ಲಕ್ಷ ಉದ್ಯೋಗಿಗಳು ನೋಂದಾಯಿಸಲ್ಪಟ್ಟಿದ್ದಾರೆ. ಖಾಸಗಿ ರಂಗದ ಎಲ್ಲಾ ಉದ್ಯೋಗಿಗಳು ಹಾಗೂ ಸಾರ್ವಜನಿಕ ರಂಗದ ಒಂದು ಗುಂಪಿನ ಉದ್ಯೋಗಿಗಳು ಈ ಯೋಜನೆಯಡಿ ಬರುತ್ತಾರೆ ಎಂದು ಹಬ್ದನ್ ಹೇಳಿದರು.





