ಪತ್ರಿಕಾಗೋಷ್ಠಿಯಲ್ಲಿ ಜಗಳವಾಡಿಕೊಂಡ ಒಬಾಮ, ಕ್ಯಾಸ್ಟ್ರೊ!

ಹವಾನದ ಕ್ರಾಂತಿ ಅರಮನೆಯಲ್ಲಿ ಸೋಮವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯ ಕೊನೆಯಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ (ಎಡ ಭಾಗದಲ್ಲಿರುವವರು) ಮತ್ತು ಕ್ಯೂಬದ ಅಧ್ಯಕ್ಷ ರವುಲ್ ಕ್ಯಾಸ್ಟ್ರೊ ಆತ್ಮೀಯತೆಯ ಪೋಸ್ ನೀಡಿದರು.
ಹವಾನ, ಮಾ. 22: ಕ್ಯೂಬ ರಾಜಧಾನಿ ಹವಾನದಲ್ಲಿ ಸೋಮವಾರ ನಡೆದ ಅಸಾಧಾರಣ ಪತ್ರಿಕಾಗೋಷ್ಠಿಯೊಂದರಲ್ಲಿ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮತ್ತು ಕ್ಯೂಬದ ಅಧ್ಯಕ್ಷ ರವುಲ್ ಕ್ಯಾಸ್ಟ್ರೊ ಅಕ್ಷರಶಃ ಜಗಳವಾಡಿದರು.
ಮಾನವಹಕ್ಕುಗಳು ಮತ್ತು ಗ್ವಾಂಟನಾಮೊ ಕಾರಾಗೃಹದ ಬಗ್ಗೆ ಅವರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ತಮ್ಮ ದೇಶಗಳು ಮತ್ತು ಜಗತ್ತಿನ ಬಗ್ಗೆ ತಮ್ಮದೇ ಆದ ನಿಲುವುಗಳನ್ನು ವ್ಯಕ್ತಪಡಿಸಿದರು.
ಆದಾಗ್ಯೂ, ಕ್ಯೂಬಕ್ಕೆ ಒಬಾಮ ನೀಡಿರುವ ಭೇಟಿ ಉಭಯ ದೇಶಗಳ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಇಡಲಾಗಿರುವ ಮಹತ್ವದ ಹೆಜ್ಜೆ ಎಂಬುದಾಗಿ ಇಬ್ಬರೂ ಶ್ಲಾಘಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪರಸ್ಪರ ಶ್ಲಾಘನೆಯ ಮತ್ತು ಸಂಬಂಧ ಸುಧಾರಣೆಯ ಮಾತುಗಳ ಬಳಿಕ ಮಾತು ‘ನೈಜ’ ವಿಷಯಗಳತ್ತ ಹೊರಳಿತು. ಮಾನವಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ ಮತ್ತು ಪ್ರಜಾಪ್ರಭುತ್ವ ಮುಂತಾದ ವಿಷಯಗಳ ಬಗ್ಗೆ ತಮ್ಮ ಎರಡು ಗಂಟೆಗಳ ಮಾತುಕತೆಯ ವೇಳೆ ಕ್ಯಾಸ್ಟ್ರೊ ಜೊತೆ ‘‘ಪ್ರಾಮಾಣಿಕವಾಗಿ’’ ಮಾತನಾಡಿದೆ ಎಂದು ಒಬಾಮ ಹೇಳಿದರು.
ಇದಕ್ಕೆ ಪ್ರತಿಯಾಗಿ ಮಾತನಾಡಿದ ಕ್ಯಾಸ್ಟ್ರೊ, ಕ್ಯೂಬದ ನೈರುತ್ಯ ತುದಿಯ ಗ್ವಾಂಟನಾಮೊ ಕೊಲ್ಲಿಯಲ್ಲಿರುವ ಸೇನಾ ನೆಲೆಯನ್ನು ತೆರವುಗೊಳಿಸುವಂತೆ ಹಾಗೂ ಕ್ಯೂಬದ ಮೇಲೆ ವಿಧಿಸಲಾಗಿರುವ ದಿಗ್ಬಂಧನವನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಅಮೆರಿಕಕ್ಕೆ ಕರೆ ನೀಡಿದರು.





