ಪರಿತ್ಯಕ್ತ ಪತಿಗೆ ಹೊರೆಯಾಗದೆ ಕೆಲಸ ಹುಡುಕಿಕೊಳ್ಳಲು ಮಹಿಳೆಗೆ ನ್ಯಾಯಾಲಯದ ಸೂಚನೆ
ಹೊಸದಿಲ್ಲಿ, ಮಾ.22: ಉದ್ಯೋಗವೊಂದನ್ನು ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುವಂತೆ ಮಹಿಳೆಯೋರ್ವಳಿಗೆ ಸಲಹೆ ನೀಡಿರುವ ದಿಲ್ಲಿಯ ಜಿಲ್ಲಾ ನ್ಯಾಯಾಲಯವು, ಆಕೆ ವಿದ್ಯಾವಂತೆಯಾಗಿದ್ದಾಳೆ ಮತ್ತು ತನ್ನ ಪರಿತ್ಯಕ್ತ ಪತಿಯ ಮೇಲೆ ಹೊರೆ ಹಾಕಲು ಮನೆಯಲ್ಲಿ ಸೋಮಾರಿಯಾಗಿ ಕುಳಿತುಕೊಳ್ಳಲು ಅವಕಾಶ ನೀಡುವಂತಿಲ್ಲ ಎಂದು ಹೇಳಿದೆ. ತನ್ನ ಪತಿಯಿಂದ ಜೀವನಾಂಶವನ್ನು ಕೋರಿರುವ ಮಹಿಳೆ ತನ್ನ ಪತಿಗಿಂತಲೂ ಹೆಚ್ಚು ವಿದ್ಯಾವಂತೆಯಾಗಿದ್ದು, ದುಡಿದು ಗಳಿಸುವ ಸಾಮರ್ಥ್ಯ ಹೊಂದಿರುವುದನ್ನು ನ್ಯಾಯಾಲಯವು ತನ್ನ ಪರಿಗಣನೆಗೆ ತೆಗೆದುಕೊಂಡಿದೆ.
ತನ್ನ ವಿಚ್ಛೇದಿತ ಪತ್ನಿಗೆ ಮಾಸಿಕ 12,000 ರೂ.ಜೀವನಾಂಶ ನೀಡುವಂತೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿಯು ಜಿಲ್ಲಾ ನ್ಯಾಯಾಲಯದ ಮೆಟ್ಟಿಲನ್ನೇರಿದ್ದ. ಆಕೆ ತನಗಿಂತಲೂ ಹೆಚ್ಚು ವಿದ್ಯಾವಂತೆಯಾಗಿದ್ದು,ಎಂಎಸ್ಸಿಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾಳೆ. ಆಕೆ ಯಾವುದೇ ಉದ್ಯೋಗಕ್ಕೆ ಎಂದೂ ಅರ್ಜಿ ಸಲ್ಲಿಸಿಲ್ಲ ಮತ್ತು ಮನೆಯಲ್ಲಿ ಸೋಮಾರಿಯಾಗಿ ಕುಳಿತುಕೊಂಡು ತನಗೆ ಆರ್ಥಿಕ ಹೊರೆಯಾಗಲು ಬಯಸಿದ್ದಾಳೆ ಎಂದು ಆತ ವಾದಿಸಿದ್ದ.
ಇದನ್ನು ಪುರಸ್ಕರಿಸಿದ ನ್ಯಾ.ರೇಖಾ ರಾಣಿ ಅವರು,ತನ್ನ ಮಾಜಿ ಪತ್ನಿಯು ಉದ್ಯೋಗ ಹುಡುಕಿಕೊಳ್ಳಲು ನೆರವಾಗಲು ಅರ್ಜಿದಾರ ಸಿದ್ಧನಿದ್ದಾನೆ ಮತ್ತು ಒಂದು ವರ್ಷದ ಅವಧಿಗೆ ಪ್ರತಿ ತಿಂಗಳು 12,000 ರೂ.ಗಳ ಜೀವನಾಂಶ ನೀಡಲು ಒಪ್ಪಿಕೊಂಡಿದ್ದಾನೆ ಎಂದು ಹೇಳಿದರು. ಒಂದು ವರ್ಷದೊಳಗೆ ಉದ್ಯೋಗವನ್ನು ಕಂಡುಕೊಳ್ಳುವಂತೆ ಅವರು ಮಹಿಳೆಗೆ ಸೂಚಿಸಿದರು.





