ಡುಮಿನಿಗೆ ಗಾಯ, ವಿಂಡೀಸ್ ಪಂದ್ಯಕ್ಕೆ ಅಲಭ್ಯ

ಹೊಸದಿಲ್ಲಿ, ಮಾ.22: ಗಾಯದ ಸಮಸ್ಯೆಗೆ ಸಿಲುಕಿರುವ ದಕ್ಷಿಣ ಆಫ್ರಿಕದ ಆಲ್‌ರೌಂಡರ್ ಜೆಪಿ ಡುಮಿನಿ ನಾಗ್ಪುರದಲ್ಲಿ ಶುಕ್ರವಾರ ನಡೆಯಲಿರುವ ವೆಸ್ಟ್‌ಇಂಡೀಸ್ ವಿರುದ್ಧದ ಐಸಿಸಿ ವಿಶ್ವಕಪ್ ಟ್ವೆಂಟಿ-20 ಟೂರ್ನಿಯ ಸೂಪರ್-10 ಪಂದ್ಯದಿಂದ ಹೊರಗುಳಿದಿದ್ದಾರೆ.
ರವಿವಾರ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ಡುಮಿನಿಗೆ ಮಂಡಿನೋವು ಕಾಣಿಸಿಕೊಂಡಿತ್ತು. ಸೋಮವಾರ ನಡೆಸಿದ ಸ್ಕಾನಿಂಗ್‌ನಲ್ಲಿ ಗಾಯವಾಗಿರುವುದು ಖಚಿತವಾಗಿತ್ತು.
ಪ್ರಸ್ತುತ ವಿಶ್ವಕಪ್‌ನ ಸೂಪರ್-10 ಹಂತದಲ್ಲಿ ಒಂದರಲ್ಲಿ ಜಯ, ಮತ್ತೊಂದರಲ್ಲಿ ಸೋಲು ಅನುಭವಿಸಿರುವ ದಕ್ಷಿಣ ಆಫ್ರಿಕ ಗ್ರೂಪ್-1ರಲ್ಲಿ ಎರಡನೆ ಸ್ಥಾನದಲ್ಲಿದೆ. ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ನಾಲ್ಕು ಅಂಕಗಳಿಸಿರುವ ವೆಸ್ಟ್‌ಇಂಡೀಸ್ ಗ್ರೂಪ್-1ರಲ್ಲಿ ಮೊದಲ ಸ್ಥಾನದಲ್ಲಿದೆ.
‘‘ಡುಮಿನಿಗೆ ನಡೆಸಲಾದ ಸ್ಕ್ಯಾನಿಂಗ್‌ನಲ್ಲಿ ಗಾಯವಾಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿ ಶುಕ್ರವಾರ ನಡೆಯಲಿರುವ ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಡುಮಿನಿ ಆಡುವುದಿಲ್ಲ. ಶ್ರೀಲಂಕಾ ವಿರುದ್ದ ರವಿವಾರ ನಡೆಯಲಿರುವ ಅಂತಿಮ ರೌಂಡ್ ರಾಬಿನ್ ಪಂದ್ಯದಲ್ಲಿ ಡುಮಿನಿ ಅವರನ್ನು ಸಜ್ಜುಗೊಳಿಸಲು ಪ್ರಯತ್ನಿಸುವೆವು. ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ’’ಎಂದು ದಕ್ಷಿಣ ಆಫ್ರಿಕದ ಟೀಮ್ ಮ್ಯಾನೇಜರ್ ಡಾ. ಮುಹಮ್ಮದ್ ಮೂಸಾಜಿ ಹೇಳಿದ್ದಾರೆ.





