ಸೆಮಿಫೈನಲ್‌ನತ್ತ ವಿಂಡೀಸ್, 2ನೆ ಸ್ಥಾನಕ್ಕಾಗಿ ಭಾರತ ಹೋರಾಟ
ಐಸಿಸಿ ವಿಶ್ವಕಪ್ ಗ್ರೂಪ್ ಅವಲೋಕನ
ಹೊಸದಿಲ್ಲಿ, ಮಾ.22: ಐಸಿಸಿ ಟ್ವೆಂಟಿ-20 ವಿಶ್ವಕಪ್ ಆರಂಭವಾಗಿ ಎರಡು ವಾರ ಕಳೆದಿದೆ. ಈ ನಡುವೆ ಕೆಲವು ಅಚ್ಚರಿ ಫಲಿತಾಂಶಗಳು, ವೈಯಕ್ತಿಕ ಪ್ರದರ್ಶನಗಳು, ಕೆಲವು ದಾಖಲೆಗಳು ದಾಖಲಾಗಿವೆ. ವೆಸ್ಟ್‌ಇಂಡೀಸ್ ಹಾಗೂ ನ್ಯೂಝಿಲೆಂಡ್ ಕ್ರಮವಾಗಿ ಗ್ರೂಪ್ 1 ಹಾಗೂ ಗ್ರೂಪ್ 2ರಲ್ಲಿ ಅಗ್ರ ಸ್ಥಾನದಲ್ಲಿವೆ. ಪಾಕಿಸ್ತಾನದ ವಿರುದ್ದ 22 ರನ್‌ಗಳಿಂದ ಗೆಲುವು ಸಾಧಿಸಿರುವ ನ್ಯೂಝಿಲೆಂಡ್ ಸೆಮಿಫೈನಲ್ ತಲುಪಿದ ಮೊದಲ ತಂಡ ಎನಿಸಿಕೊಂಡಿದೆ. ವಿಶ್ವದ ನಂ.1 ತಂಡ ಭಾರತ ಗ್ರೂಪ್-2 ರಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಲೆಕ್ಕಾಚಾರದಲ್ಲಿದೆ.
ಗ್ರೂಪ್-2ರ ಅರ್ಹತಾ ಚಿತ್ರಣ
ನ್ಯೂಝಿಲೆಂಡ್(ಪಂದ್ಯ-3, ಜಯ 3, ಅಂಕ-6): ಆಡಲು ಬಾಕಿ ಇರುವ ಪಂದ್ಯಗಳು: ಬಾಂಗ್ಲಾದೇಶ(ಮಾ.26)
ನ್ಯೂಝಿಲೆಂಡ್ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತವನ್ನು ಮಣಿಸಿ ಅಚ್ಚರಿ ಮೂಡಿಸಿತ್ತು. ಆಸ್ಟ್ರೇಲಿಯ ವಿರುದ್ಧದ 2ನೆ ಪಂದ್ಯದಲ್ಲಿ 8 ರನ್‌ಗಳ ರೋಚಕ ಜಯ ಸಾಧಿಸಿತು. ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ತಲುಪಿದೆ.
ಭಾರತ(ಪಂದ್ಯ-2, ಗೆಲುವು 1, ಸೋಲು 1, ಅಂಕ 2): ಆಡಲು ಬಾಕಿ ಇರುವ ಪಂದ್ಯಗಳು: ಬಾಂಗ್ಲಾ(ಮಾ.23), ಆಸ್ಟ್ರೇಲಿಯ(ಮಾ.27)
ಭಾರತ ನಾಗ್ಪುರದಲ್ಲಿ ಕಿವೀಸ್ ವಿರುದ್ಧ 47 ರನ್‌ಗಳ ಅಂತರದಿಂದ ಸೋತಿರುವುದು ಭಾರೀ ಹಿನ್ನಡೆಯಾಗಿದ್ದು, ಇದು ನೆಟ್ ರನ್‌ರೇಟ್ ಮೇಲೆ ಪರಿಣಾಮ ಬೀರಿದೆ. ಗುಂಪಿನಲ್ಲಿ 2ಕ್ಕಿಂತ ಹೆಚ್ಚು ತಂಡಗಳು ಸಮಾನ ಅಂಕ ಪಡೆದರೆ ಭಾರತಕ್ಕೆ ಇದರಿಂದ ಸಮಸ್ಯೆಯಾಗಲಿದೆ. ಕೋಲ್ಕತಾದಲ್ಲಿ ಪಾಕ್ ವಿರುದ್ಧ ಜಯ ಸಾಧಿಸಿರುವ ಭಾರತ ಸ್ಪರ್ಧೆಯಲ್ಲಿ ಉಳಿದಿದೆ. ಬಾಂಗ್ಲಾದೇಶ ಅಥವಾ ಆಸ್ಟ್ರೇಲಿಯ ವಿರುದ್ಧ ಪಂದ್ಯದಲ್ಲಿ ಎಡವಿದರೆ ಮೊದಲ ಸುತ್ತಿನಲ್ಲಿ ಹೊರಗುಳಿಯಬೇಕಾಗುತ್ತದೆ. ಈ ಎರಡೂ ತಂಡಗಳ ವಿರುದ್ಧ ಜಯ ಸಾಧಿಸಿದರೆ ಸೆಮಿಫೈನಲ್‌ಗೆ ತಲುಪಬಹುದು.
ಆಸ್ಟ್ರೇಲಿಯ(ಪಂದ್ಯ-2, ಗೆಲುವು 1, ಅಂಕ 2):
ಆಡಲು ಬಾಕಿ ಇರುವ ಪಂದ್ಯಗಳು: ಪಾಕಿಸ್ತಾನ(ಮಾ.25),ಭಾರತ(ಮಾ.27)
ಧರ್ಮಶಾಲಾದಲ್ಲಿ ನ್ಯೂಝಿಲೆಂಡ್ ವಿರುದ್ಧ ಸೋತಿರುವುದು ಆಸೀಸ್‌ಗೆ ಹಿನ್ನಡೆಯಾಗಿದೆ. ಬಾಂಗ್ಲಾದೇಶದ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿ ಸೆಮಿಫೈನಲ್ ಸ್ಪರ್ಧೆಯಲ್ಲಿ ಉಳಿದಿದೆ. ಆಸೀಸ್‌ಗೆ ಪಾಕ್ ಹಾಗೂ ಭಾರತ ವಿರುದ್ಧ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಬಾಂಗ್ಲಾದೇಶ ತಂಡ ಭಾರತವನ್ನು ಮಣಿಸಿದರೆ ಆಸೀಸ್‌ನ ಸೆಮಿಫೈನಲ್ ಹಾದಿ ಸುಲಭವಾಗಲಿದೆ.
ಪಾಕಿಸ್ತಾನ(ಪಂದ್ಯ-3, ಗೆಲುವು 1, ಸೋಲು 2, ಅಂಕ 2):
ಆಡಲು ಬಾಕಿ ಇರುವ ಪಂದ್ಯಗಳು: ಆಸ್ಟ್ರೇಲಿಯ ಮಾ.25)
ಕೋಲ್ಕತಾದಲ್ಲಿ ಬಾಂಗ್ಲಾದೇಶವನ್ನು 55 ರನ್‌ಗಳ ಅಂತರದಿಂದ ಮಣಿಸಿದ್ದ ಪಾಕ್ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿತ್ತು. ಆದರೆ, ಭಾರತ ವಿರುದ್ಧ ಪಂದ್ಯವನ್ನು ಸೋಲುವ ಮೂಲಕ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೋಲಿನ ಸರಮಾಲೆ ಮುಂದುವರಿಸಿತ್ತು. ಮಾ..22 ರಂದು ನ್ಯೂಝಿಲೆಂಡ್ ವಿರುದ್ಧ ಸೋತಿರುವ ಪಾಕ್‌ನ ಸೆಮಿಫೈನಲ್ ಹಾದಿ ದುರ್ಗಮವಾಗಿದೆ. ಆಸ್ಟ್ರೇಲಿಯ ವಿರುದ್ಧ ಮಾ.25 ರಂದು ಅಂತಿಮ ಲೀಗ್ ಪಂದ್ಯ ಜಯಿಸಿದರೆ, ಆಸ್ಟ್ರೇಲಿಯ, ಭಾರತವನ್ನು ಕಡಿಮೆ ಅಂತರದಲ್ಲಿ ಮಣಿಸಿದರೆ ಪಾಕ್‌ಗೆ ಅವಕಾಶ ಸಿಗಲಿದೆ. ಬಾಂಗ್ಲಾದೇಶ(ಪಂದ್ಯ 2, ಅಂಕ-0):
ಆಡಲು ಬಾಕಿ ಇರುವ ಪಂದ್ಯಗಳು: ಭಾರತ(ಮಾ.23), ನ್ಯೂಝಿಲೆಂಡ್ (ಮಾ.26)
ಎರಡು ಪಂದ್ಯಗಳಲ್ಲಿ ಸೋತಿರುವ ಬಾಂಗ್ಲಾದೇಶ ಟೂರ್ನಿಯಿಂದ ಬಹುತೇಕ ಹೊರಗುಳಿದಿದೆ. ಬಾಂಗ್ಲಾದೇಶ ಬೆಂಗಳೂರಿನಲ್ಲಿ ಭಾರತವನ್ನು ಮಣಿಸಿದರೆ ಧೋನಿ ಪಡೆ ಸಂಕಷ್ಟಕ್ಕೆ ಸಿಲುಕಲಿದೆ. ಬಾಂಗ್ಲಾ ಅಂತಿಮ ಲೀಗ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಜಯ ಸಾಧಿಸಿದರೆ, ಕಿವೀಸ್ ಇತರ ಪಂದ್ಯಗಳ ಫಲಿತಾಂಶವನ್ನು ಕಾಯಬೇಕಾಗುತ್ತದೆ.
ಗ್ರೂಪ್-1ರ ಅರ್ಹತಾ ಚಿತ್ರಣ:
ವೆಸ್ಟ್‌ಇಂಡೀಸ್(ಪಂದ್ಯ-2, ಜಯ 2, ಅಂಕ-4): ಆಡಲು ಬಾಕಿ ಇರುವ ಪಂದ್ಯಗಳು: ದಕ್ಷಿಣ ಆಫ್ರಿಕ(ಮಾ.25), ಅಫ್ಘಾನಿಸ್ತಾನ (ಮಾ.27)
2012ರ ಚಾಂಪಿಯನ್ ವೆಸ್ಟ್‌ಇಂಡೀಸ್ ತಂಡ ಇಂಗ್ಲೆಂಡ್ ಹಾಗೂ ಶ್ರೀಲಂಕಾದ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ದಕ್ಷಿಣ ಆಫ್ರಿಕ ಇಲ್ಲವೇ ಅಫ್ಘಾನಿಸ್ತಾನದ ವಿರುದ್ಧ ಜಯ ಸಾಧಿಸಿದರೆ ಸೆಮಿಫೈನಲ್‌ಗೆ ತಲುಪಲಿದೆ. ದಕ್ಷಿಣ ಆಫ್ರಿಕ ಹಾಗೂ ಅಫ್ಘಾನಿಸ್ತಾನ ವಿರುದ್ಧ ಪಂದ್ಯವನ್ನು ಸೋತರೆ ಸೆಮಿಫೈನಲ್ ಹಾದಿ ಕಠಿಣವಾಗಲಿದೆ.
ದಕ್ಷಿಣ ಆಫ್ರಿಕ(ಪಂದ್ಯ 2, ಗೆಲುವು 1, ಅಂಕ 2): ಆಡಲು ಬಾಕಿ ಇರುವ ಪಂದ್ಯಗಳು: ವೆಸ್ಟ್‌ಇಂಡೀಸ್(ಮಾ.25), ಶ್ರೀಲಂಕಾ(ಮಾ.28)
ಈ ಬಾರಿಯ ಟ್ವೆಂಟಿ-20 ವಿಶ್ವಕಪ್‌ನಲ್ಲೂ ದಕ್ಷಿಣ ಆಫ್ರಿಕದ ಅದೃಷ್ಟ ಲಕ್ಷ್ಮೀಚಂಚಲವಾಗಿದೆ. ಇಂಗ್ಲೆಂಡ್ ವಿರುದ್ಧ 229 ರನ್ ಗಳಿಸಿದ್ದರೂ ಗೆಲುವು ದಕ್ಕಲಿಲ್ಲ. ಅಫ್ಘಾನಿಸ್ತಾನದ ವಿರುದ್ಧ ಪ್ರಯಾಸದ ಗೆಲುವು ಲಭಿಸಿದೆ. ಮಾ.25 ರಂದು ವೆಸ್ಟ್‌ಇಂಡೀಸ್ ವಿರುದ್ಧ ಸೋತರೆ ಬೇರೆ ತಂಡಗಳ ಫಲಿತಾಂಶವನ್ನು ಕಾಯಬೇಕಾಗುತ್ತದೆ. ಮಾ.28ರಂದು ಶ್ರೀಲಂಕಾ ವಿರುದ್ಧ ಕೊನೆಯ ಪಂದ್ಯ ಆಡಲಿದೆ.
ಶ್ರೀಲಂಕಾ(ಪಂದ್ಯ 2, ಗೆಲುವು 1, ಅಂಕ 2): ಆಡಲು ಬಾಕಿ ಇರುವ ಪಂದ್ಯಗಳು: ಇಂಗ್ಲೆಂಡ್(ಮಾ.26), ದ.ಆಫ್ರಿಕ(ಮಾ.28)
ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಶ್ರೀಲಂಕಾ ಕಠಿಣ ಸವಾಲು ಎದುರಿಸುತ್ತಿದೆ. ವೆಸ್ಟ್‌ಇಂಡೀಸ್ ವಿರುದ್ಧ ಸೋತಿರುವ ಲಂಕಾ ಸಂಕಷ್ಟಕ್ಕೆ ಸಿಲುಕಿದೆ. ಇಂಗ್ಲೆಂಡ್ ಇಲ್ಲವೇ ದಕ್ಷಿಣ ಆಫ್ರಿಕ ವಿರುದ್ಧ ಸೋತರೆ ಟೂರ್ನಿಯಿಂದ ಹೊರಗುಳಿಯಲಿದೆ. ಸೆಮಿಫೈನಲ್ ಅವಕಾಶ ಹೆಚ್ಚಿಸಿಕೊಳ್ಳಲು ಮಾ.26ರಂದು ಇಂಗ್ಲೆಂಡ್ ಹಾಗೂ ಮಾ.28 ರಂದು ದಕ್ಷಿಣ ಆಫ್ರಿಕ ವಿರುದ್ಧ ಗೆಲುವು ಸಾಧಿಸಬೇಕಾಗಿದೆ.
ಇಂಗ್ಲೆಂಡ್(ಪಂದ್ಯ 2, ಗೆಲುವು 1, ಅಂಕ 2): ಆಡಲು ಬಾಕಿ ಇರುವ ಪಂದ್ಯಗಳು: ಅಫ್ಘಾನ್(ಮಾ.23), ಶ್ರೀಲಂಕಾ(ಮಾ.26)
ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಪಂದ್ಯವನ್ನು ಸೋತಿದ್ದ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕ ವಿರುದ್ಧ ರೋಚಕ ಜಯ ಸಾಧಿಸಿ ಗೆಲುವಿನ ಹಳಿಗೆ ಮರಳಿತ್ತು. ಇಂಗ್ಲೆಂಡ್‌ಗೆ ಶ್ರೀಲಂಕಾ(ಮಾ.26) ಹಾಗೂ ಅಫ್ಘಾನಿಸ್ತಾನ(ಮಾ.23) ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಒಂದು ವೇಳೆ ದಕ್ಷಿಣ ಆಫ್ರಿಕ ತಂಡ ವಿಂಡೀಸ್‌ಗೆ ಶರಣಾದರೆ ಆಂಗ್ಲರ ಸೆಮಿಫೈನಲ್ ಹಾದಿ ಸುಗಮವಾಗಲಿದೆ.
ಅಫ್ಘಾನಿಸ್ತಾನ(ಪಂದ್ಯ 2, ಅಂಕ 0):
ಆಡಲು ಬಾಕಿ ಇರುವ ಪಂದ್ಯಗಳು: ಇಂಗ್ಲೆಂಡ್(ಮಾ.23), ವೆಸ್ಟ್‌ಇಂಡೀಸ್(ಮಾ.27).
ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕ ವಿರುದ್ಧ ಹೋರಾಟಕಾರಿ ಪ್ರದರ್ಶನ ನೀಡಿರುವ ಹೊರತಾಗಿಯೂ ಸೆಮಿಫೈನಲ್ ರೇಸ್‌ನಿಂದ ಹೊರಗುಳಿದಿರುವ ಅಫ್ಘಾನಿಸ್ತಾನ ತಂಡ ಉಳಿದೆರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ತಂಡಗಳನ್ನು ಎದುರಿಸಲಿದೆ. ಇಂಗ್ಲೆಂಡ್ ತಂಡ ಅಫ್ಘಾನ್‌ಗೆ ಶರಣಾದರೆ ಸೆಮಿಫೈನಲ್ ಹಾದಿ ಕಠಿಣವಾಗಲಿದೆ. ಇಂಗ್ಲೆಂಡ್ ಸೋತರೆ ದಕ್ಷಿಣ ಆಫ್ರಿಕ ಹಾಗೂ ಶ್ರೀಲಂಕಾದ ಸೆಮಿಫೈನಲ್ ಹಾದಿ ಸುಗಮವಾಗಲಿದೆ.







