ಮುಕ್ತ ಚಿಂತನೆಯ ಶಿಕ್ಷಣ ನೀತಿ ಜಾರಿ: ಸ್ಮತಿ ಇರಾನಿ

ಬೆಂಗಳೂರು, ಮಾ.22: ಶಿಕ್ಷಣ ವ್ಯವಸ್ಥೆಯಲ್ಲಿರುವ ಲೈಸೆನ್ಸ್ ಮತ್ತು ಇನ್‌ಸ್ಪೆಕ್ಟರ್ ರಾಜ್ ಪದ್ಧತಿಯನ್ನು ಕೈಬಿಟ್ಟು ಪಾರದರ್ಶಕತೆಯುಳ್ಳ ಹಾಗೂ ಮುಕ್ತ ಚಿಂತನೆ ಹೊಂದಿರುವ ಶಿಕ್ಷಣ ನೀತಿ ಜಾರಿಗೊಳಿಸಲಾಗುವುದೆಂದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಹೇಳಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲೊಂದ ರಲ್ಲಿ ಆಯೋಜಿಸಿದ್ದ ಇಪಿಎಸ್‌ಐ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ-ಪ್ರೌಢ ಮತ್ತು ಉನ್ನತ ದರ್ಜೆಯ ಶಿಕ್ಷಣದಲ್ಲಿ ಅಸಮಾನತೆ ಇದೆ. ಈ ನ್ಯೂನತೆಯನ್ನು ಶಾಶ್ವತವಾಗಿ ದೂರಗೊಳಿಸಲು ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಹೇಳಿದರು.
ಹೊಸ ಶಿಕ್ಷಣ ನೀತಿ ಜಾರಿ ಸಂಬಂಧ ಗ್ರಾಮೀಣ ಮಟ್ಟದ ಶಿಕ್ಷಣ ಸಂಸ್ಥೆಗಳಿಂದಲೂ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಪಡೆಯಲಾಗಿದೆ ಎಂದ ಅವರು, ಶಿಕ್ಷಣದಲ್ಲಿನ ಎಲ್ಲ ಕಾರ್ಯಕ್ರಮಗಳು ಕಾಲ ಮಿತಿ ಚೌಕಟ್ಟಿನೊಳಗೆ ನಡೆದರೆ ಮಾತ್ರ ಶಿಕ್ಷಣ ಕ್ಷೇತ್ರ ಪ್ರಗತಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಯುಜಿಸಿ 2010ರ ನಿಯಮ ಮತ್ತು ನಿಯಂತ್ರಣಗಳು ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಈಗ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ. ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ಪಾರದರ್ಶಕತೆ ಅಗತ್ಯವಿದ್ದು, ಕಾಲೇಜುಗಳು ತಮ್ಮ ಪಠ್ಯಕ್ರಮ, ಸೌಲಭ್ಯ ಮುಂತಾದ ಮಾಹಿತಿಗಳನ್ನು ಮೊಬೈಲ್ ಆ್ಯಪ್ ಮತ್ತು ಪೋರ್ಟಲ್‌ಗಳ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸುಲಭವಾಗಿ ದೊರಕುವಂತೆ ಮಾಡಬೇಕೆಂದು ಹೇಳಿದರು.
ಶಿಕ್ಷಣಕ್ಕೆ ಸಂಬಂಧಿದ ಎಲ್ಲ ವಿಶ್ಲೇಷಣೆಗಳು, ಸರ್ವೆಗಳು ಪ್ರತಿ ಜಿಲ್ಲಾ ಮತ್ತು ತಾಲೂಕು ಮಟ್ಟ ದಿಂದಲೂ ಕ್ರೋಡೀಕರಿಸಿ ನೀತಿ ನಿರೂಪಣೆ ಮಾಡ ಲಾಗುತ್ತಿದೆ. ಉನ್ನತ ಶಿಕ್ಷಣದ ಖಾಸಗಿ ಸಂಸ್ಥೆಗಳಲ್ಲಿರುವ ಸರಕಾರಿ ನಾಮನಿರ್ದೇಶನ ಪದ್ಧತಿಯನ್ನು ಬದಲಿಸಿ ಹೆಚ್ಚು ಪಾರದರ್ಶಕವಾದ ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡ ನಾಮನಿರ್ದೇಶನಕ್ಕೆ ಕ್ರಮ ಕೈಗೊಳ್ಳಲಾಗುವುದು. ಮಾನ್ಯತೆ ಪಡೆದ ಕಾಲೇಜುಗಳಿಗೆ ಅನುಮತಿ ನೀಡುವ ಕ್ರಮಗಳಲ್ಲೂ ಸುಧಾರಣೆ ತರಲಾಗಿದೆ ಎಂದು ಸಚಿವೆ ಸ್ಮತಿ ಇರಾನಿ ನುಡಿದರು.
ಹತ್ತು ವರ್ಷಗಳ ಕಾಲ ನಿರಂತರವಾಗಿ ನ್ಯಾಕ್‌ನಿಂದ ಉತ್ತಮ ದರ್ಜೆ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಉನ್ನತ ದರ್ಜೆಯ ಮಾನ್ಯತೆ ಮುಂದುವರಿಸಲಾಗುವುದು. ತಾಂತ್ರಿಕ ಶಿಕ್ಷಣ ಸಂಸ್ಥೆಗಳು 5 ವರ್ಷಗಳ ಕಾಲ ಮಾನ್ಯತೆ ಪಡೆದಿದ್ದರೆ, ಮುಂದಿನ ಐದು ವರ್ಷಗಳಿಗೂ ಅವುಗಳನ್ನು ವಿಸ್ತರಿಸಲಾಗುವುದು. ಎಲ್ಲ ವರ್ಗದ ಜನರಿಗೂ ಉನ್ನತ ಶಿಕ್ಷಣ ದೊರೆಯಬೇಕೆಂಬುದು ಸರಕಾರದ ಉದ್ದೇಶವಾಗಿದ್ದು, ಇದಕ್ಕಾಗಿ ಖಾಸಗಿ ಮತ್ತು ಸರಕಾರಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ಖಾಸಗಿ ಸಂಸ್ಥೆಗಳು ಸಾಮಾಜಿಕ ಕಾಳಜಿ ಹಾಗೂ ಬದ್ಧತೆ ಪ್ರದರ್ಶಿಸಬೇಕಾಗಿದೆ ಎಂದು ತಿಳಿಸಿದರು.ನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ರಾಜ್ಯದಲ್ಲಿ ಉನ್ನತ ಶಿಕ್ಷಣದ ವ್ಯಾಪ್ತಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನ ನೀಡಲು ಕೇಂದ್ರ ಸರಕಾರ ಮುಂದಾಗಬೇಕೆಂದು ಇದೇ ವೇಳೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ ಸೇರಿ ಪ್ರಮುಖರು ಹಾಜರಿದ್ದರು.







