ಮಹಾರಾಷ್ಟ್ರ ಸರಕಾರದಿಂದ ಮಕ್ಕಳಿಗಿಂತ ಜಾನುವಾರುಗಳಿಗೆ ಹೆಚ್ಚು ಅನುದಾನ: ಬೊಂಡೆ
ಮುಂಬೈ, ಮಾ.22: ಮಹಾರಾಷ್ಟ್ರ ಸರಕಾರವು ಅನಾಥಾಲಯಗಳು ಹಾಗೂ ಸರಕಾರಿ ಶಿಶು ಮಂದಿರಗಳಲ್ಲಿ ವಾಸಿಸುವ ಮಕ್ಕಳಿಗಾಗಿ ನೀಡುವುದಕ್ಕಿಂತ ಹೆಚ್ಚು ನಿಧಿಯನ್ನು ಮೇವು ಶಿಬಿರಗಳಲ್ಲಿರುವ ಜಾನುವಾರುಗಳ ಕಲ್ಯಾಣಕ್ಕಾಗಿ ಮಂಜೂರು ಮಾಡುತ್ತಿದೆಯೆಂದು ಬಿಜೆಪಿ ಶಾಸಕರೊಬ್ಬರು ಆರೋಪಿಸಿದ್ದಾರೆ.
ರಾಜ್ಯ ಸರಕಾರವು ಒಂದು ಜಾನುವಾರಿನ ಘೋಷಣೆಗಾಗಿ ಮೇವು ಶಿಬಿರಕ್ಕೆ ರೂ. 70 ನೀಡುತ್ತದೆ. ಆದರೆ, ಅನಾಥಾಲಯ ಹಾಗೂ ಸರಕಾರಿ ಶಿಶು ಮಂದಿರಗಳಲ್ಲಿರುವ ಮಕ್ಕಳ ಆಹಾರಕ್ಕಾಗಿ ದಿನಕ್ಕೆ ತಲಾ ಕೇವಲ ರೂ. 30 ಪಾವತಿಸುತ್ತಿದೆ. ಸರಕಾರವು ಮಕ್ಕಳ ಮನೆಗಳಿಗೆ ಅನುದಾನವನ್ನು ತಿಂಗಳಿಗೆ ಈಗಿರುವ ರೂ. 900ರಿಂದ ಕನಿಷ್ಠ ರೂ. 1,500ಕ್ಕೆ ಏರಿಸಬೇಕೆಂದು ಅಮರಾವತಿ ಜಿಲ್ಲೆಯ ಮೋರ್ಶಿ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಬೊಂಡೆ ಆಗ್ರಹಿಸಿದ್ದಾರೆ.
ಬರಗಾಲ ಪೀಡಿತ ಲಾತೂರು, ಉಸ್ಮಾನಾಬಾದ್ ಹಾಗೂ ಬೀಡ್ ಜಿಲ್ಲೆಗಳಲ್ಲಿ ಕಳೆದ ವರ್ಷ ಆಗಸ್ಟ್‌ನಿಂದ ಸುಮಾರು 255 ಮೇವು ಶಿಬಿರಗಳು ಕಾರ್ಯಾಚರಿಸುತ್ತಿವೆ. ಅವುಗಳಿಗೆ ರಾಜ್ಯದ ಬೊಕ್ಕಸದಿಂದ ಸುಮಾರು ರೂ. 60 ಕೋಟಿ ಖರ್ಚು ಮಾಡಲಾಗುತ್ತಿದೆ.
ರಾಜ್ಯದಲ್ಲಿ ಒಟ್ಟು 1,105 ಮಕ್ಕಳ ಮನೆಗಳಿದ್ದು, ಅವುಗಳಲ್ಲಿ 1,062ನ್ನು ವಿವಿಧ ನೋಂದಾಯಿತ ಸರಕಾರೇತರ ಸಂಘಟನೆಗೂ (ಎನ್‌ಜಿಒ) ನಡೆಸುತ್ತಿವೆ.
ಸರಕಾರವು ಪ್ರತಿ ಸಾಮಾನ್ಯ ಮಗುವಿಗೆ ತಿಂಗಳಿಗೆ ರೂ. 900ನ್ನು (ದಿನಕ್ಕೆ ರೂ.30) ಆಹಾರಕ್ಕಾಗಿ ನೀಡುತ್ತಿದ್ದರೆ, ವಿಶೇಷ ಮಕ್ಕಳಿಗೆ ತಿಂಗಳಿಗೆ ರೂ. 990(ದಿನಕ್ಕೆ ರೂ.33) ನೀಡುತ್ತಿದೆಯೆಂದು ಬೊಂಡೆ ಹೇಳಿದ್ದಾರೆ.
ಇಂತಹ ಮಕ್ಕಳನ್ನು ಪಾಲಿಸುತ್ತಿರುವ ಸರಕಾರೇತರ ಸಂಘಟನೆಗಳು ಮೂರು ವರ್ಷಗಳಿಂದ ಅನುದಾನ ಪಡೆದಿಲ್ಲವೆಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಕ್ಕಳ ಮನೆಗಳಿಗೆ ಬಾಕಿಯಿರುವ ಹಣ ಪಾವತಿಸಲು ತಮ್ಮ ಇಲಾಖೆ ರೂ. 156 ಕೋಟಿ ಕೇಳಿತ್ತು. ಆದರೆ, ಹಣಕಾಸು ಇಲಾಖೆ ಈ ವರೆಗೆ ಅದನ್ನು ಮಂಜೂರು ಮಾಡಿಲ್ಲವೆಂದು ಅವರು ಹೇಳಿದ್ದಾರೆ.
ಆದಾಗ್ಯೂ, ಎನ್‌ಜಿಒಗಳು ದತ್ತಿ ಆಯುಕ್ತರಲ್ಲಿ ನೋಂದಣಿಯಾಗಿರುವ ಕಾರಣ ಅದು ಸ್ವಂತ ನಿಧಿಯನ್ನು ಎತ್ತುವಳಿ ಮಾಡಬಹುದೆಂದು ನಿರೀಕ್ಷಿಸಲಾಗಿದೆ. ಅವುಗಳಿಗೆ ಸಮಾಜದಿಂದ ನಿಧಿ ಸಂಗ್ರಹಿಸುವ ಅಧಿಕಾರವಿದೆ. ಸರಕಾರದ ಸಹಾಯವು ಕೇವಲ ಈ ಸಾಮಾಜಿಕ ಉದ್ದೇಶಕ್ಕಾಗಿ ಬೆಂಬಲ ನೀಡಲಷ್ಟೇ ಇರುತ್ತದೆ. ಅವು ಸರಕಾರದ ಅನುದಾನವನ್ನು ಅವಲಂಬಿಸಬಾರದು. ವಾಸ್ತವವಾಗಿ ಮಕ್ಕಳಿಗೆ ಸೌಲಭ್ಯ ಕಲ್ಪಿಸಲು ನಿಧಿ ಎತ್ತುವಳಿಯು ಎನ್‌ಜಿಒಗಳ ಹೊಣೆಗಾರಿಕೆಯಾಗಿದೆಯೆಂದು ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





