ಛತ್ತೀಸ್‌ಗಡ: ಬಸ್ತಾರ್ ಪೊಲೀಸರು ವಶಪಡಿಸಿಕೊಂಡಿದ್ದ ಪತ್ರಕರ್ತ ಕಾಣೆ
ದಾಂತೇವಾಡ: ಮಾ.22: ಛತ್ತೀಸ್‌ಗಡದ ದಾಂತೇವಾಡದಲ್ಲಿ ಪತ್ರಕರ್ತನೊಬ್ಬನನ್ನು ಪೊಲೀಸರು ಒಯ್ದಿದ್ದು, ಆತನೀಗ ಕಾಣೆಯಾಗಿದ್ದಾನೆಂದು ಆರೋಪಿಸಲಾಗಿದೆ.
ಸೋಮವಾರ ಸಂಜೆ 5ರ ವೇಳೆಗೆ, ಬಳಿ ಬಣ್ಣದ ಬೊಲೆರೊ ವಾಹನವೊಂದು ಛತ್ತೀಸ್‌ಗಡದ ದಕ್ಷಿಣ ಬಸ್ತಾರ್ ವಲಯದ ದಾಂತೇವಾಡದ ‘ಪತ್ರಿಕಾ’ ದಿನ ಪತ್ರಿಕೆಯ ಕಚೇರಿಯೆದುರು ಬಂದಿತು. ಸಾದಾ ಉಡುಪಿನಲ್ಲಿದ್ದ ಪೊಲೀಸರು ಯಾವುದೇ ನೋಟಿಸ್ ಅಥವಾ ಎಚ್ಚರಿಕೆ ನೀಡದೇ ಪ್ರಭಾತ್ ಸಿಂಗ್ ಎಂಬ ಪತ್ರಕರ್ತನನ್ನು ಕರೆದೊಯ್ದರು. ಮಂಗಳವಾರ ಮಧ್ಯಾಹ್ನ 2 ಗಂಟೆಯವರೆಗೆ ಆತನ ಬಂಧನದ ಕುರಿತು ಯಾವುದೇ ಮಾಹಿತಿ ಬಂದಿಲ್ಲ.
ಪ್ರಭಾತ್ ಎಲ್ಲಿದ್ದಾರೆಂಬುದು ಯಾರಿಗೂ ತಿಳಿಯದಿರುವ ಕಾರಣ ಅವರು ತಾಂತ್ರಿಕವಾಗಿ ಕಾಣೆಯಾಗಿದ್ದಾರೆಂದು ರಾಜ್ಯದಲ್ಲಿ ಮಾನವ ಹಕ್ಕು ವಕೀಲರಾಗಿ ಕೆಲಸ ಮಾಡುತ್ತಿರುವುವವರ ಗುಂಪಾಗಿರುವ ಜಗದಾಲ್ಪುರ ಕಾನೂನು ಸಹಾಯ ಗುಂಪಿನ ವಕೀಲೇ, ಇಶಾ ಖಂಡೇಲ್ವಾಲ ಹೇಳಿದ್ದಾರೆ.
ರಾಜಸ್ಥಾನ್ ಪತ್ರಿಕಾ ಗ್ರೂಪ್‌ನ ಮಾಲಕತ್ವದ ಹಿಂದಿ ದಿನಪತ್ರಿಕೆ ‘ಪತ್ರಿಕಾ’ದ ವರದಿಗಾರನಾಗಿ ಪ್ರಭಾತ್ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆ ಅವರು ‘ಈಟಿವಿ’ ಸುದ್ದಿವಾಹಿನಿಗಾಗಿಯೂ ಕೆಲಸ ಮಾಡಲಾರಂಭಿಸಿದ್ದರು. ಪತ್ರಕರ್ತರು ಒಂದಕ್ಕಿಂತ ಹೆಚ್ಚು ಮಾಧ್ಯಮ ಸಂಸ್ಥೆಗಳಿಗೆ ಸ್ಟ್ರಿಂಜರ್‌ಗಳಿಗಾಗಿ ಕೆಲಸ ಮಾಡುವುದು ಈ ಪ್ರದೇಶದಲ್ಲಿ ಮಾಮೂಲು.
ಮಾ.19ರಂದು ಈಟಿವಿ ಪ್ರಭಾತ್‌ಗೆ ವಜಾ ಆದೇಶವನ್ನು ನೀಡಿತ್ತು. ಅದರಲ್ಲಿ ವಜಾಕ್ಕೆ ಯಾವುದೇ ಕಾರಣ ನೀಡಿರಲಿಲ್ಲ. ಎರಡು ದಿನಗಳ ಬಳಿಕ ಪೊಲೀಸರು ಪ್ರಭಾತ್‌ಸಿಂಗ್‌ರನ್ನು ವಶಕ್ಕೆ ಪಡೆದಿದ್ದಾರೆ.
ಪ್ರದೇಶದಲ್ಲಿ ಪತ್ರಕರ್ತರನ್ನು ಗುರಿಯಿರಿಸುತ್ತಿದ್ದ ‘ಸಾಮಾಜಿಕ ಏಕತಾ ಮಂಚ್’ ಎಂಬ ಜಾಗೃತ ಗುಂಪಿನ ವಿರುದ್ದ ಪ್ರಭಾತ್, ದೂರೊಂದನ್ನು ಈ ಹಿಂದೆ ದಾಖಲಿಸಿದ್ದರು.





