ವಾರಣಾಸಿಯಲ್ಲಿ ವಿಧವೆಯರಿಂದ ಹೋಳಿ
ವೃಂದಾವನ, ಮಾ.22: ವೃಂದಾವನ ಹಾಗೂ ವಾರಣಾಸಿಗಳ ವಿಧವೆಯಿಂದ ಸೋಮವಾರ ವಾರಣಾಸಿಯ ಗೋಪಿನಾಥ ಮಂದಿರದ ಆವರಣದಲ್ಲಿ ನಡೆದಿದ್ದ ಹೋಳಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ.
ವೇದ ಮಂತ್ರ ಪಠನ ಹಾಗೂ ಶಂಖ ನಾದಗಳ ನಡುವೆ, ವಿಧವೆಯರು ಉತ್ಸವದಲ್ಲಿ ಅರಸಿನ ಹುಡಿಯನ್ನು ಮುಕ್ತವಾಗಿ ಬಳಸಿದರು ಹಾಗೂ ಗುಲಾಬಿ ಮತ್ತು ಚೆಂಡು ಹೂಗಳ ಪಕಳೆಗಳಿಂದ ಹೋಳಿಯಾಡಿದರು.
105ರ ಹರೆಯದ ಕನಕಲತಾ ಎಂಬವರು ಹೋಳಿ ಹಬ್ಬದಲ್ಲಿ ಭಾಗವಹಿಸಿದ್ದ ವಿಧವೆಯಲ್ಲಿ ಅತಿ ಹಿರಿಯರಾಗಿದ್ದು, ಅವರನ್ನು ಗಾಲಿ ಕುರ್ಚಿಯಲ್ಲಿ ದೇವಾಲಯಕ್ಕೆ ತರಲಾಗಿತ್ತು.
ಗೋಪಿನಾಥ ಮಂದಿರದ ಪ್ರಧಾನ ದೇವರ ಮುಂದೆ ಹೋಳಿ ಹಬ್ಬ ವೀಕ್ಷಿಸಲು ಅವಕಾಶ ಮಾಡಿಕೊಟ್ಟ ಸಂಘಟಕರಿಗೆ ತಾನು ಕೃತಜ್ಞಳಾಗಿದ್ದೇನೆಂದು ಅವರು ಹೇಳಿದರು.
ಇದು, ವಿಧವೆಯರು ಹೋಳಿ ಆಚರಿಸುವುದಕ್ಕೆ ನಿಷೇಧವಿರುವ ಹಿಂದೂ ಸಂಪ್ರದಾಯವನ್ನು ಮುರಿಯುವ ಒಂದು ಪ್ರಯತ್ನವಾಗಿದೆ. ವಿಧವೆಯರ ಜೀವನಕ್ಕೆ ಹೊಸ ರಂಗವೊಂದನ್ನು ಕಲ್ಪಿಸುವ ಪ್ರಯತ್ನ ಇದಾಗಿದೆಯೆಂದು ಸಮಾಜ ಸುಧಾರಣೆ ಹಾಗೂ ಸುಲಭ್ ಇಂಟರ್ನ್ಯಾಶನಲ್‌ನ ಸ್ಥಾಪಕ ಬಂದೇಶ್ವರ ಪಾಠಕ್ ತಿಳಿಸಿದ್ದಾರೆ.





