ವಿದ್ಯಾರ್ಥಿಗಳ ಮೇಲೆ ಹಲ್ಲೆ: ದೇಶಾದ್ಯಂತ ಪ್ರತಿಭಟನೆಗೆ ಕ್ಯಾಂಪಸ್ ಫ್ರಂಟ್ ಕರೆ

ಬೆಂಗಳೂರು, ಮಾ.23: ಇತ್ತೀಚೆಗೆ ಜಾರ್ಖಂಡ್ ನ ರಾಂಚಿಯಲ್ಲಿ ಜಾನುವಾರು ಸಾಗಾಟದ ನೆಪವೊಡ್ಡಿ ಇಬ್ಬರು ಮುಸ್ಲಿಂ ಜಾನುವಾರು ವ್ಯಾಪಾರಿಗಳ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿ ಬಳಿಕ ಅಮಾನವೀಯ ರೀತಿಯಲ್ಲಿ ಮರವೊಂದಕ್ಕೆ ನೇಣುಹಾಕಿಸಿ ಕೊಂದಿರುವುದು ಅತ್ಯಂತ ಹೇಯ ಕೃತ್ಯವಾಗಿದೆ.
ಇಡೀ ಸಮಾಜವನ್ನೆ ತಲೆ ತಗ್ಗಿಸುವಂತೆ ಮಾಡಿದ ಈ ಮನುಷ್ಯ ವಿರೋಧಿ ಕೃತ್ಯದ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳು ಶಾಂತಿಯುತವಾಗಿ ಮತ್ತು ಸಂವಿಧಾನಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದ ಗೂಂಡಾಗಳು ಹಲ್ಲೆ ನಡೆಸಿದ್ದೂ ಅಲ್ಲದೆ ಪ್ರತಿಭಟನಾ ನಿರತ ವಿದ್ಯಾರ್ಥಿನಿಯರ ಮೇಲೆಯೂ ಹಲ್ಲೆ ನಡೆಸಿ ಸಂಘಪರಿವಾರದ ನೀಚ ಸಂಸ್ಕ್ರತಿಯನ್ನು ತೋರ್ಪಡಿಸಿದ್ದಾರೆ. ಸಂಘಪರಿವಾರಿವಾದ ಕಾರ್ಯಕರ್ತರು ವಿದ್ಯಾರ್ಥಿ ಸಮೂಹದ ಮೇಲೆ ನಡೆಸಿದ ಹಲ್ಲೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದೆ ಎಂದು ಕ್ಯಾಂಪಸ್ ಫ್ರಂಟ್ ಮಾಧ್ಯಮ ಸಂಯೋಜಕ ಅಬೂಸುಫ್ಯಾನ್ ಬೆಂಗಳೂರು ತಿಳಿಸಿದ್ದಾರೆ.
ಮಾತ್ರವಲ್ಲದೆ ಇದರ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದರು. ಇದು ಈ ದೇಶದ ಸಂವಿಧಾನಾತ್ಮಕ ಹಕ್ಕಿನ ಕಗ್ಗೊಲೆಯಾಗಿದೆ ಅದೇ ರೀತಿ ಕಳೆದ ಹಲವಾರು ವರ್ಷಗಳಿಂದ ಸಂಘಪರಿವಾರದ ದುಷ್ಕರ್ಮಿಗಳು ದೇಶಾದ್ಯಂತ ಅಶಾಂತಿಯ ವಾತಾವರಣ ಸೃಷ್ಠಿಸುತ್ತಿದ್ದಾರೆ ಮತ್ತು ಅಲ್ಪಸಂಖ್ಯಾತರ, ದಲಿತರ, ಪ್ರಗತಿಪರರ ಹಾಗೂ ಚಿಂತಕರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದು, ವಿದ್ಯಾರ್ಥಿಗಳ ಧ್ವನಿಯನ್ನು ದಮನಿಸಲು ವಿದ್ಯಾರ್ಥಿಗಳ ಮೇಲೆಯೂ ನಿರಂತರ ದೌರ್ಜನ್ಯ ನಡೆಸುತ್ತಿರುವ ಸಂಘಪರಿವಾರದ ಕಾರ್ಯಕರ್ತರ ಮೇಲೆ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವಾಗ ಮೂಕಪ್ರೇಕ್ಷಕರಾಗಿ ನಿಂತ ಪೊಲೀಸರ ಮೇಲೆಯೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ರಹೀಂ ಬೆಂಗಳೂರು ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.







