ಎಚ್ಐವಿ ಸೋಂಕಿತ ರಕ್ತ ಕೊಟ್ಟು ಬಟ್ಟೆ, ಸ್ಪಾಂಜ್ ಹೊಟ್ಟೆಯಲ್ಲೇ ಬಿಟ್ಟು ಬಾಣಂತಿಯ ಜೀವ ತೆಗೆದ ಖಾಸಗಿ ಆಸ್ಪತ್ರೆ
ವೈದ್ಯಕೀಯ ನಿರ್ಲಕ್ಷ್ಯದ ಪರಮಾವಧಿ
ಆಗ್ರಾ, ಮಾ.23: ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕಸ್ಗಂಜ್ ಜಿಲ್ಲೆಯ ಖ್ಯಾತ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದ 25 ವರ್ಷದ ಮಹಿಳೆಯೊಬ್ಬಳಿಗೆ ಹೆಚ್‌ಐವಿ ಸೋಂಕು ಇರುವ ರಕ್ತ ನೀಡಿ ಆಕೆಯ ಹೊಟ್ಟೆಯೊಳಗೆ ಟವೆಲ್ ಹಾಗೂ ಸ್ಪಾಂಜನ್ನು ವೈದ್ಯರು ಹಾಗೆಯೇ ಬಿಟ್ಟ ಕಾರಣ ಆಕೆ ಸಾವಿಗೀಡಾದ ಘಟನೆ ವರದಿಯಾಗಿದೆ.
ಇಬ್ಬರು ವೈದ್ಯರ ವಿರುದ್ಧ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಮ್ಲೇಶ್ ಎಂಬ ಮಹಿಳೆಗೆ ಮತ್ತೆ ಶಸ್ತ್ರಚಿಕಿತ್ಸೆ ನಡೆಸಿದ ಎಸ್ಎನ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಆಕೆಯ ಹೊಟ್ಟೆಯಿಂದ ಟವೆಲ್ ಹಾಗೂ ಸ್ಪಾಂಜ್ ತುಂಡೊಂದನ್ನೂ ಹೊರತೆಗೆದಿದ್ದು ಸಿಸೇರಿಯನ್ ನಡೆಸಿದ ವೈದ್ಯರ ಅಜಾಗರೂಕತೆಯಿಂದ ಈ ವಸ್ತುಗಳು ಆಕೆಯ ಹೊಟ್ಟೆಯಲ್ಲಿಯೇ ಉಳಿದಿತ್ತು ಎಂದು ಮಹಿಳೆಯ ಪತಿ ಕಸ್ಗಂಜ್‌ನ ನಾಗ್ಲಾಬುಲಾಹ್ ಗ್ರಾಮದ ಪ್ರೇಮ್ ಕಿಶೋರ್ ಹೇಳಿದ್ದಾರೆ.
ಇದಕ್ಕೂ ಮೊದಲು ಆಕೆಯನ್ನು ಆಗ್ರಾದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಟ್ರಾಸೌಂಡ್ ನಡೆಸಿದಾಗ ಆಕೆ ಹೆಚ್‌ಐವಿ ಪೀಡಿತೆಯೆಂದು ತಿಳಿದು ಬಂದಿತ್ತು. ಕಸ್ಗಂಜ್ ವೈದ್ಯರು ಆಕೆಗೆ ನೀಡಿದ ರಕ್ತವನ್ನು ಎಲ್ಲಿಂದ ಪಡೆಯಲಾಗಿತ್ತು ಎಂಬುದನ್ನು ತಿಳಿಸಿರಲಿಲ್ಲ, ಎಂದು ಕಿಶೋರ್ ತಿಳಿಸಿದ್ದಾರೆ.
ಆಕೆಯ ಹೊಟ್ಟೆಯೊಳಗಿದ್ದ ಬಟ್ಟೆಯನ್ನು ಹೊರತೆಗೆಯಲಾಯಿತಾದರೂ ಆಕೆಯ ಜೀವ ಉಳಿಸಲು ಸಾಧ್ಯವಾಗದೆ ಆಕೆ ಮಾರ್ಚ್ 17ರಂದು ಮೃತ ಪಟ್ಟಿದ್ದಳು.
ಕಮ್ಲೇಶ್ ಚಿಕಿತ್ಸೆಗಾಗಿ ಆಕೆಯ ಕುಟುಂಬ ತನ್ನ ಭೂಮಿಯನ್ನು ಅಡವಿಟ್ಟು 2 ಲಕ್ಷ ರೂ. ಖರ್ಚು ಮಾಡಿತ್ತು. ಕಸ್ಗಂಜ್ ಆಸ್ಪತ್ರೆಯ ಡಾ. ಗೀತಾ ಅಗರ್ವಾಲ್ ಹಾಗೂ ಡಾ. ಪ್ರವೀಣ್ ಅಗರ್ವಾಲ್ ವಿರುದ್ಧ ಪ್ರೇಮ್ ಕಿಶೋರ್ ಪ್ರಕರಣ ದಾಖಲಿಸಿದ್ದಾರೆ. ಕಸ್ಗಂಜ್ ಆಸ್ಪತ್ರೆ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.







