ಬ್ರಸೆಲ್ಸ್ : ಅತ್ಮಾಹುತಿ ದಾಳಿಕೋರರ ಬ್ಯಾಗ್‌ನಲ್ಲಿತ್ತು ಬಾಂಬ್... !
ವಿಮಾನ ನಿಲ್ದಾಣ - ಮೆಟ್ರೊ ರೈಲು ನಿಲ್ದಾಣದಲ್ಲಿ ಸರಣಿ ಬಾಂಬ್ ಸ್ಫೋಟ

ಬ್ರಸೆಲ್ಸ್ , ಮಾ.23: ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ನ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಹದಿನಾಲ್ಕು ಮಂದಿಯ ಸಾವಿಗೆ ಕಾರಣವಾದ ಬಾಂಬ್ ಸ್ಫೋಟಕ್ಕೆ ಅತ್ಮಾಹುತಿ ದಾಳಿಕೋರರು ಬ್ಯಾಗ್‌ಗಳಲ್ಲಿ ಬಾಂಬ್‌ಗಳನ್ನು ತಂದಿದ್ದರು ಎಂದು ಝಾವೆಂಟಮ್‌ನ ಮೇಯರ್ ಫ್ರಾನ್ಸಿಸ್ ವೆರ್ಮೆರಿಯನ್ ತಿಳಿಸಿದ್ದಾರೆ.
ಟ್ಯಾಕ್ಸಿ ಮೂಲಕ ವಿಮಾನ ನಿಲ್ದಾಣ ಪ್ರವೇಶಿಸಿದ ದಾಳಿಕೋರರು ತಮ ಬ್ಯಾಗ್‌ಗಳನ್ನು ಟ್ರಾಲಿಯಲ್ಲಿರಿಸಿದ್ದರು.ಎರಡು ಬಾಂಬ್ ಟ್ರಾಲಿಯಲ್ಲೇ ಸ್ಫೋಟಗೊಂಡಿತು. ಆದರೆ ಇನ್ನೊಂದು ಸ್ಫೋಟಗೊಳ್ಳಲಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣ ಮತ್ತು ಮೆಟ್ರೊ ರೈಲು ನಿಲ್ದಾಣವೊಂದರಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿದ್ದು ಕನಿಷ್ಠ 34 ಮಂದಿ ಬಲಿಯಾಗಿದ್ದರು.200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
.ವಿಮಾನ ನಿಲ್ದಾಣದಲ್ಲಿ 14 ಮಂದಿ, ಮೆಟ್ರೊ ನಿಲ್ದಾಣದಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ 20 ಜನರು ಬಲಿಯಾಗಿದ್ದಾರೆ , ದಾಳಿಯ ಹೊಣೆಯನ್ನು ಐಎಸ್ ಹೊತ್ತುಕೊಂಡಿದೆ.
ಕಳೆದ ನವೆಂಬರ್‌ನಲ್ಲಿ ಪ್ಯಾರಿಸ್ ಮೇಲೆ ದಾಳಿ ಪ್ರಕರಣದ ಆರೋಪಿ ಸಲಾಹ್ ಅಬ್ದೆಸಲಾಂ ಎಂಬಾತನನ್ನು ಕಳೆದ ಶುಕ್ರವಾರ ಬ್ರಸೆಲ್ಸ್‌ನಲ್ಲಿ ಬಂಧಿಸಲಾಗಿತ್ತು.. ಪ್ಯಾರಿಸ್ ದಾಳಿಗೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆ ಕಾರಣ ಎಂದು ಹೇಳಲಾಗಿದೆ. ಸಲಾಹ್ ನಾಲ್ಕು ತಿಂಗಳಿಂದ ತಲೆಮರೆಸಿಕೊಂಡಿದ್ದನು.
ಬೆಲ್ಜಿಯಂನಲ್ಲಿ ಉಗ್ರರ ಜಾಲ ಸೃಷ್ಟಿಸಿದ್ದಾಗಿ ಸಲಾಹ್ ವಿಚಾರಣೆ ವೇಳೆ ಹೇಳಿದ್ದ. ಈತನ ಬಂಧನಕ್ಕೆ ಪ್ರತೀಕಾರವಾಗಿ ಸರಣಿ ಸ್ಫೋಟ ನಡೆಸಲಾಗಿದೆಯೇ ಎಂಬ ವಿಚಾರದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ





