ಮಹಾರಾಷ್ಟ್ರ ವಿಭಜನೆಯಾಗಬೇಕು : ಆರೆಸ್ಸೆಸ್ ಮುಖಂಡ ಎಂ. ಜಿ. ವೈದ್ಯ

ಮುಂಬೈ , ಮಾ. 23 : ಮಹಾರಾಷ್ಟ್ರದ ಮರಾಠವಾಡ ಬೇರೆ ರಾಜ್ಯ ಆಗಬೇಕು ಎಂದು ಹೇಳಿ ರಾಜ್ಯದ ಅಡ್ವೋಕೇಟ್ ಜನರಲ್ ಹುದ್ದೆ ಕಳೆದುಕೊಂಡ ಶ್ರೀಹರಿ ಅನೆ ಅವರಿಗೆ ಆರೆಸ್ಸೆಸ್ ಹಿರಿಯ ನಾಯಕ ಹಾಗು ಮಾಜಿ ವಕ್ತಾರ ಎಂ.ಜಿ. ವೈದ್ಯ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಆಡಳಿತದ ದೃಷ್ಟಿಯಿಂದ ಮಹಾರಾಷ್ಟ್ರ ವಿಭಜನೆಯಾಗಬೇಕು ಎಂದು ಹೇಳಿದ್ದಾರೆ. ಯಾವುದೇ ರಾಜ್ಯದಲ್ಲಿ ೩ ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರಬಾರದು ಎಂದಿರುವ ವೈದ್ಯ ನೂತನ ರಾಜ್ಯ ಪುನರ್ ವಿಂಗಡಣಾ ಸಮಿತಿ ರಚನೆಯಾಗಬೇಕು ಎಂದು ಹೇಳಿದ್ದಾರೆ.
ಅಡ್ವೋಕೇಟ್ ಜನರಲ್ ಒಬ್ಬರು ಹಾಗೆ ಹೇಳಿದ್ದು ಸರಿಯಲ್ಲ ಎಂದು ಹೇಳಿದ ವೈದ್ಯ ಆದರೆ ಆ ಸಲಹೆಯನ್ನು ನಾನು ಬೆಂಬಲಿಸುತ್ತೇನೆ ಎಂದು ಹೇಳಿದರು. ಸಣ್ಣ ರಾಜ್ಯಗಳ ಆಡಳಿತ ನಡೆಸುವುದು ಸುಲಭ. ಬಾಬಾಸಾಹೇಬ್ ಅಂಬೇಡ್ಕರ್ ಕೂಡ ಮಹಾರಾಷ್ಟ್ರವನ್ನು ವಿಭಜಿಸಿ ಮರಾಠವಾಡ , ವಿದರ್ಭ ಹಾಗು ಡೆಕ್ಕನ್ ಎಂದು ಮೂರು ರಾಜ್ಯಗಳನ್ನು ರೂಪಿಸಲು ಹೇಳಿದ್ದರು ಎಂದು ಹೇಳಿದರು.
ಬರಪೀಡಿತ ಮರಾಠವಾಡಕ್ಕೆ ಬಹುದೊಡ್ಡ ಅನ್ಯಾಯವಾಗಿದೆ ಹಾಗು ಅಲ್ಲಿನ ಜನ ಇದರ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದ್ದಕ್ಕೆ ರಾಜ್ಯ ಸರಕಾರದಿಂದ ತೀವ್ರ ತರಾಟೆಗೆ ಒಳಗಾಗಿದ್ದ ಅನೆ ಅವರು ಮಂಗಳವಾರ ತಮ್ಮ ರಾಜಿನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ.





