ಸುಳ್ಯ: ಮೊರಂಗಲ್ಲಿನಲ್ಲಿ ಬೈಕ್-ಪಿಕಪ್ ಡಿಕ್ಕಿ ಸುಳ್ಯ ಪದವಿ ಕಾಲೇಜಿನ ವಿದ್ಯಾರ್ಥಿ ಮೃತ್ಯು

ಸುಳ್ಯ, ಮಾ.23 : ಸ್ನೇಹಿತರಿಬ್ಬರು ಹೋಗುತ್ತಿದ್ದ ಬೈಕ್ ಎದುರಿನಿಂದ ಬರುತ್ತಿದ್ದ ಟಾಟಾ ಏಸ್ ವಾಹನಕ್ಕೆ ಡಿಕ್ಕಿಯಾಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ.
ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿಗಳಾದ ದುಶ್ಯಂತ್ ಹಾಗೂ ಅರ್ಪಿತ್ ಕೋಲ್ಚಾರಿನಲ್ಲಿ ನಡೆಯುತ್ತಿದ್ದ ಕಳಿಯಾಟ ಮಹೋತ್ಸವಕ್ಕೆ ಸಂಜೆ ಬೈಕ್‌ನಲ್ಲಿ ಹೋಗುತ್ತಿದ್ದರು. ಬೈಕ್ ಆಲೆಟ್ಟಿ ಗ್ರಾಮದ ಮೊರಂಗಲ್ಲು ಎಂಬಲ್ಲಿಗೆ ತಲುಪುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಟಾಟಾ ಏಸ್‌ಗೆ ಡಿಕ್ಕಿಯಾಯಿತು. ಪರಿಣಾಮ ಬೈಕ್ ಸವಾರರಿಬ್ಬರು ನೆಲಕ್ಕೆ ಬಿದ್ದರು. ಸ್ಥಳೀಯರು ಅವರಿಬ್ಬರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರು. ಅರ್ಪಿತ್ ಗಂಭೀರ ಗಾಯಗೊಂಡಿದ್ದು ಆತನನ್ನು ಮಂಗಳೂರಿಗೆ ಸಾಗಿಸುವಷ್ಟರಲ್ಲಿ ದಾರಿ ಮಧ್ಯೆ ಆತ ಕೊನೆಯುಸಿರೆಳೆದನೆಂದು ತಿಳಿದು ಬಂದಿದೆ. ದುಶ್ಯಂತ್ ಸುಳ್ಯ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅರ್ಪಿತ್ ದೇವಚಳ್ಳ ಗ್ರಾಮದ ಮಂಜೋಳಕಜೆ ವಿಶ್ವನಾಥ್‌ರವರ ಪುತ್ರ.
ಅಪಘಾತದಿಂದ ಮೃತಪಟ್ಟ ಯುವಕ ಅರ್ಪಿತ್ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ. ಬುಧವಾರ ಮೃತರ ಗೌರವಾರ್ಥ ಕಾಲೇಜಿನ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಕಾಲೇಜಿಗೆ ರಜೆ ಸಾರಲಾಗಿದೆ ಎಂದು ತಿಳಿದು ಬಂದಿದೆ.





