ಕನ್ಹಯ್ಯ ಸಭೆಗೆ ಅನುಮತಿ ನಿರಾಕರಣೆ

ಹೈದರಾಬಾದ್,ಮಾ.23: ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಅವರು ಬುಧವಾರ ಸಂಜೆ ಇಲ್ಲಿಯ ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲಿದ್ದ ಸಭೆಗೆ ವಿವಿಯು ಅನುಮತಿಯನ್ನು ನೀಡಿಲ್ಲ.
ಸುದ್ದಿಸಂಸ್ಥೆಗೆ ಈ ವಿಷಯವನ್ನು ತಿಳಿಸಿದ ಕುಲಪತಿ ಅಪ್ಪಾರಾವ್ ಪೊಡಿಲೆ ಅವರು,ಅನುಮತಿಯನ್ನು ಕೋರಿ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದು ಸ್ಪಷ್ಟ ಪಡಿಸಿದರು.
ತನ್ಮಧ್ಯೆ ಮಂಗಳವಾರ ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆಯೂ ಪೊಡಿಲೆ ತನ್ನ ಕರ್ತವ್ಯಕ್ಕೆ ಮರಳಿ ಹಾಜರಾದ ಬಳಿಕ ವಿವಿ ಕ್ಯಾಂಪಸ್‌ನಲ್ಲಿ ಉದ್ವಿಗ್ನ ಸ್ಥಿತಿಯಿದ್ದು, ಮಾಧ್ಯಮ ಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷಗಳು ಸೇರಿದಂತೆ ಹೊರಗಿನವರು ಕ್ಯಾಂಪಸ್ ಪ್ರವೇಶಿಸುವುದನ್ನು ನಿಷೇಧಿಸಿರುವ ಅಧಿಕಾರಿಗಳು ನಾಲ್ಕು ದಿನಗಳ ಕಾಲ ತರಗತಿಗಳನ್ನು ಅಮಾನತುಗೊಳಿಸಿದ್ದಾರೆ.
ತನ್ಮಧ್ಯೆ ಕನ್ಹಯ್ಯೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾರೆಯೇ ಎನ್ನುವ ಬಗ್ಗೆ ತಾವು ತನಿಖೆ ನಡೆಸುತ್ತಿರುವುದಾಗಿ ದಿಲ್ಲಿ ಪೊಲೀಸರು ಬುಧವಾರ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.





