ಕೊಣಾಜೆ:ಬಾಯಾರಿ ಬಂದ ಜನರ ಬವಣೆ ನೀಗಿಸಿದ ಅಟೋ ಚಾಲಕ ಸ್ವಂತ ಖರ್ಚಿನಲ್ಲಿ ಬಸ್‌ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ

ಕೊಣಾಜೆ: ಒಂದೆಡೆಯಲ್ಲಿ ಬೇಸಿಗೆಯ ಬಿಸಿಲಿನ ಧಗೆ, ಮತ್ತೊಂದೆಡೆಗೆ ಬಾಯಾರಿಕೆಗೆ ಅಲ್ಲಿ ಕುಡಿಯಲು ನೀರೂ ಇಲ್ಲದ ಪರಿಸ್ಥಿತಿ. ಅಂಗಡಿಯಲ್ಲಿ ಹಣ ಕೊಟ್ಟು ತಂಪು ಪಾನಿಯ ಅಥವಾ ನೀರು ಕುಡಿಯೋಣ ಎಂದರೂ ಆ ಬಸ್ ನಿಲ್ದಾಣದ ಸಮೀಪ ಒಂದು ಅಂಗಡಿ ಮುಗ್ಗಟ್ಟೂ ಇಲ್ಲ, ಅಲ್ಲದೆ ಸಮೀಪ ಯಾವುದೇ ಮನೆ ಕಟ್ಟಡಗಳೂ ಇಲ್ಲ. ಇಂತಹ ಬಸ್‌ನಿಲ್ದಾಣದಲ್ಲಿ ಸ್ಥಳೀಯ ಅಟೋ ಚಾಲಕನೊರ್ವ ತನ್ನ ಸ್ವಂತ ಖರ್ಚಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಪ್ರಯಾಣಿಕರ ಬಾಯಾರಿಕೆಯ ಬವಣೆಯನ್ನು ನೀಗಿಸುವ ಪ್ರಯತ್ನ ಮಾಡಿರುವುದು ಶ್ಲಾಘನೆಗೆ ಪಾತ್ರವಾಗಿದೆ. ಕೊಣಾಜೆ ಗ್ರಾಮದ ನಡುಪದವಿನ ಬಸ್ ನಿಲ್ದಾಣವು ಮಂಗಳೂರು ವಿವಿ ಕ್ಯಾಂಪಸ್‌ನೊಳಗೇ ಇರುವುದರಿಂದ ಇಲ್ಲಿ ಸಮೀಪ ಯಾವುದೇ ಅಂಗಡಿ ಮುಂಗಟ್ಟು ಆಗಲೀ ಮನೆಗಳಾಗಲೀ ಇಲ್ಲ. ದಿನ ನಿತ್ಯ ನೂರಾರು ಪ್ರಯಾಣಿಕರು ಈ ಬಸ್ ನಿಲ್ಧಾಣಕ್ಕೆ ಬಂದು ಹೋಗುತ್ತಾರೆ. ಆದರೆ ಈಗ ಬೇಸಿಗೆ ಕಾಲವಾದ್ದರಿಂದ ಈ ಪ್ರದೇಶದಲ್ಲಿ ಕುಡಿಯಲು ನೀರು ಇಲ್ಲದೆ ಬಹಳಷ್ಟು ಜನ ಪ್ರಯಾಣಿಕರು ಇಲ್ಲಿ ಬಾಯಾರಿಕೆಯಿಂದ ಪರಿತಪಿಸುತ್ತಿದ್ದರು. ಇದನ್ನರಿತ ಇಲ್ಲಿಯ ಸ್ಥಳೀಯ ಅಟೋ ಪಾರ್ಕ್‌ನ ರಿಕ್ಷಾ ಚಾಲಕ ಅಬ್ದುಲ್ ಅಝೀರ್ ತನ್ನ ಸ್ವಂತ ಖರ್ಚಿನಲ್ಲಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಇದರಿಂದ ನೂರಾರು ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.
ನಡುಪದವಿನ ರೆಂಜಾಪುವಿನಲ್ಲಿ ವಾಸವಾಗಿರುವ ಅಬ್ದುಲ್ ಅಝೀಜ್ ಅವರು ಕಳೆದ ನಾಲ್ಕು ವರ್ಷಗಳಿಂದ ನಡುಪದವಿನ ಅಟೋ ರಿಕ್ಷಾ ಪಾರ್ಕ್‌ನಲ್ಲಿ ರಿಕ್ಷಾ ಚಾಲಕನಾಗಿ ದುಡಿಯವುದರೊಂದಿಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಲ್ಲಿಯ ಹೊಂಡಮಯ ರಸ್ತೆಗೆ ಇವರೇ ತನ್ನ ರಿಕ್ಷಾದಲ್ಲಿ ಗೋಣಿ ಚೀಲಗಳಲ್ಲಿ ಮಣ್ಣು ತಂದು ಹೊಂಡಗಳಿಗೆ ತುಂಬುವ ಕೆಲಸವನ್ನೂ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬಸ್ ನಿಲ್ದಾಣದಲ್ಲಿ ಇವರು ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದು ಸ್ಥಳೀಯವಾಗಿ ಶ್ಲಾಘನೆಗೆ ಪಾತ್ರವಾಗಿದೆ.
ಕಳೆದ ಹಲವಾರು ದಿನಗಳಿಂದ ಈ ಬಸ್ ನಿಲ್ದಾಣದ ಬಳಿ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದರು. ಇದನ್ನು ಮನಗಂಡು ನಾನು ಈ ವ್ಯವಸೈಯನ್ನು ಕಲ್ಪಿಸಿದ್ದೇನೆ. ಮನೆಯಿಂದ ಬೆಳಿಗ್ಗೆ ಬರುವಾಗ ಕುಡಿಯುವ ನೀರನ್ನು ಕೂಡಾ ತರುತ್ತೇನೆ. ಈ ಸೇವೆ ಮನಸ್ಸಿಗೆ ತೃಪ್ತಿ ತಂದಿದೆ ಎಂದು ಹೇಳುತ್ತಾರೆ ಅಝೀರ್.







