ಮಂಗಳೂರು: ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಕೆ.ಎಸ್. ವಿಮಲಾ ಆತಂಕ

ಮಂಗಳೂರು, ಮಾ. 23: ಅಭಿವೃದ್ಧಿಯ ಹೆಸರಿನಲ್ಲಿ ದೇಶವನ್ನು ಸ್ವರ್ಗ ಲೋಕವನ್ನಾಗಿ ಮಾಡುವುದಾಗಿ ಹೇಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಸರಕಾರ, ಜನರ ಅಭಿವ್ಯಕ್ತಿ ಸ್ವಾತಂತ್ರಕ್ಕೆ ತನ್ನ ವಿರಾಟ್ ಸ್ವರೂಪವನ್ನು ತೋರ್ಪಡಿಸಿದ್ದು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್. ವಿಮಲಾ ಆತಂಕ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್, ಸುಖ್‌ದೇವ್ ಮತ್ತು ರಾಜ್‌ಗುರು ಅವರು ಹುತಾತ್ಮರಾದ ದಿನದ ನೆನಪಿನ ಹಿನ್ನೆಲೆಯಲ್ಲಿ ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ವತಿಯಿಂದ ಬುಧವಾರ ನಡೆದ ಆಝಾದಿ ಮಾರ್ಚ್ (ಸ್ವಾತಂತ್ರದ ನಡಿಗೆ) ಬಳಿಕ ಪುರಭವನದಲ್ಲಿ ಸಭಾ ಕಾರ್ಯಕ್ರಮವನ್ನುದದೇಶಿಸಿ ಮಾತನಾಡಿದರು.
ನಮಗೆ ಸ್ವಾತಂತ್ರ ಬೇಕು ಎಂಬ ಎಂಬ ಸ್ಥಿತಿಗೆ ದೇಶದ ಬಹುಸಂಖ್ಯಾತ ದುಡಿಯುವ ವರ್ಗ ಬಂದಿದೆ. ಕೋಮುವಾದ, ಧರ್ಮಾಂಧತೆ, ನಿರುದ್ಯೋಗ, ಬಡತನದಿಂದ ನಮಗೆ ಸ್ವಾತಂತ್ರ ಬೇಕಾಗಿದೆ. ಸ್ವಾತಂತ್ರ ಕೇವಲ ರಾಜಕೀಯಕ್ಕೆ ಮಾತ್ರ ಅಲ್ಲ, ಬಡತನದಿಂದ ಜನರಿಗೆ ಮುಕ್ತಿಯನ್ನು ನೀಡಬೇಕೆಂಬ ಆಶಯ ಸ್ವಾತಂತ್ರ ಹೋರಾಟ ಮಾಡಿದವರದ್ದಾಗಿತ್ತು. ಅದು ಇಂದು ಸಾಧ್ಯವಾಗುತ್ತಿಲ್ಲ. ಸರಕಾರಗಳು ತರುತ್ತಿರುವ ನೀತಿಗಳು ಇರುವ ಅಷ್ಟಿಷ್ಟು ಸ್ವಾತಂತ್ರವನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ. ಅಂದು ಇಂದಿರಾಗಾಂಧಿ ಘೋಷಿತ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರೆ, ಇಂದು ಅಘೋಷಿತ ತುರ್ತು ಪರಿಸ್ಥಿತಿಯ ಮೂಲಕ ಅಭಿವ್ಯಕ್ತಿ ಸ್ವಾತಂತ್ರವನ್ನು ಕಸಿದುಕೊಳ್ಳಲಾಗುತ್ತಿದೆ.
ನಾವು ಏನು ಊಟ ಮಾಡಬೇಕು, ನಾವೇನು ಬಟ್ಟೆ ತೊಡಬೇಕು, ನಾವು ಯಾರ ಜತೆ ಮಾತನಾಡಬೇಕು ಎಂಬ ಇನ್ನೊಬ್ಬರ ಅಣತಿಯ ಪ್ರಕಾರವೇ ಜೀವಿಸಬೇಕು ಎಂಬ ಅಘೋಷಿತ ಕಟ್ಟು ಕಟ್ಟಳೆಗಳನ್ನು ಹೇಳುವ ಮೂಲಕ ಪ್ರಜಾಪ್ರಭುತ್ವವನ್ನು ಅಣಕಿಸಲಾಗುತ್ತಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ, ನ್ಯಾಯವಾದಿಗಳಿಗೆ, ರೈತರಿಗೆ, ಯುವಕರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ, ಬ್ಯಾಂಕ್ ಉದ್ಯೋಗಿಗಳಿಗೆ ರಾಜಕಾರಣ ಬೇಡ ಎನ್ನಲಾಗುತ್ತಿರುವ ಈ ಪರಿಸ್ಥಿತಿಯಲ್ಲಿ ರಾಜಕಾರಣ ಕೇವಲ ನಮ್ಮ ನೋಟುಗಳನ್ನು ಕೊಟ್ಟು ಓಟುಗಳನ್ನು ಖರೀದಿಸಿ ಪಾರ್ಲಿಮೆಂಟ್‌ನಲ್ಲಿ ಕೂತವರಿಗೆ ಮಾತ್ರ ರಾಜಕಾರಣ ಸೀಮಿತವಾಗಿದೆ. ಅಂತಹ ರಾಜಕಾರಣದಿಂದಾಗಿಯೇ ಇಂದು ಜೆಎನ್‌ಯು ಅಂತಹ ಮಹಾನ್ ವಿದ್ಯಾಲಯದ ಬಗ್ಗೆ ಚರ್ಚೆಗಳು, ವಿದ್ಯಾಮಾನಗಳು ನುಂಗಲಾರದ ತುತ್ತಾಗುತ್ತಿವೆ. ಅದನ್ನು ಮಟ್ಟ ಹಾಕಲು ಕೇಂದ್ರ ಸರಕಾರ ಸಜ್ಜಾಗಿ ನಿಂತಿದೆ. ಅವರ ರಾಜಕಾರಣವನ್ನು ಬಯಲು ಮಾಡಬೇಕಾದ ಪರಿಸ್ಥಿತಿ ಇದೆ.
ದೇಶಕ್ಕೆ ಅದ್ಭುತ ಸಂವಿಧಾನ ನೀಡಿದ, ತಾರತಮ್ಯ ಇಲ್ಲದ ದೇಶ ನಮ್ಮದಾಗಬೇಕು ದೇಶದಲ್ಲಿ ಹುಟ್ಟಿದ ಎಲ್ಲರಿಗೂ ಹಕ್ಕು, ಬಾಧ್ಯತೆ, ಕರ್ತವ್ಯಗಳನ್ನು ಸಮಾನವಾಗಿ ಅಂಬೇಡ್ಕರ್ ಅವರ ಹೆಸರು ಹೇಳಲು ಯೋಗ್ಯತೆ ಇಲ್ಲದವರು ಅವರ ಹೆರಸನ್ನು ಹೇಳಿ ಲಾಬಿ ಮಾಡಲು ಹೊರಟಿರುವ ಈ ಸಂದರ್ಭದಲ್ಲಿ ಅಂತಹವರ ರಾಜಕಾರಣವನ್ನು ಬಯಲು ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವೆ ಸ್ಮತಿ ಇರಾನಿ ಅವರನ್ನು ಉಲ್ಲೇಖಿಸಿ ಅವರು ಮಾತನಾಡಿದರು.
ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂದು ಹೆಗ್ಗಳಿಕೆ ಪಡೆದಿರುವ ಸ್ವತಂತ್ರ ಭಾರತದಲ್ಲಿ ಸಮಾನತೆಯ ಸ್ವಾತಂತ್ರಕ್ಕಾಗಿ ಬಹುಸಂಖ್ಯಾತ ದುಡಿಯುವ ವರ್ಗ ಬೀದಿಗಿಳಿಯಬೇಕಾದ ದುಸ್ಥಿತಿ ಬಂದೊದಗಿರುವುದು ದುರದೃಷ್ಟಕರ. ಕಾಲ ಮಿಂಚಿಲ್ಲ, ಪ್ರಜಾಪ್ರಭುತ್ವದ ಹಕ್ಕುಗಳು ನಮ್ಮ ಕೈಯ್ಯಲ್ಲಿದ್ದು, ಅದನ್ನು ಪ್ರಯೋಗಿಸದೆ ಹೋದರೆ ಅದು ಜಡ್ಡು ಹಿಡಿಯಲಿದೆ ಎಂದು ಅವರು ಎಚ್ಚರಿಸಿದರು.
ಪತ್ರಕರ್ತ ಸುದೀಪ್ತೋ ಮೊಂಡಲ್ ಮಾತನಾಡಿ, ಭಗತ್ ಸಿಂಗ್ ಶೋಷಿತ ಸಮುಾಯಗಳ ನಾಯಕ ಎಂದು ಹೇಳಿದರು.
ರೋಹಿತ್ ಮೇಮುಲಾ ಸಾವಿನ ಸಂದರ್ಭ ದೇಶದಲ್ಲಿ ಎಡಬಂಥೀಯ ಸಂಘಟನೆಗಳು, ದಲಿತರು ಹಾಗೂ ಕೆಲ ಸಮುದಾಯಗಳು ಒಂದಾಗಿ ಅಸಮಾನತೆಯ ವಿರುದ್ಧ ಧ್ವನಿ ಎತ್ತುವ ಮೂಲಕ ಉತ್ತಮ ಕಾರ್ಯ ಮಾಡಿವೆ. ಇಂತಹ ಜನಪರ ಸಂಘಟನೆಗಳು ಕೇವಲ ಒಂದು ವಿಷಯದ ಹೋರಾಟದ ಸಂದರ್ಭ ಮಾತ್ರ ತಮ್ಮನ್ನು ಒಗ್ಗಟ್ಟನ್ನು ಸೀಮಿತಗೊಳಿಸಿ ಮತ್ತೆ ಒಡೆದುಹೋಗುವುದರಿಂದ ಬದಲಾವಣೆ ಸಾಧ್ಯವಿಲ್ಲ. ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕು ಎಂದು ಅಭಿಪ್ರಾಯಿಸಿದರು.
ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ಪ್ರಗತಿಪರ ಸಂಘಟನೆಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಹೋರಾಟ ಮಾಡಬೇಕು ಎಂದರು.
ನಾದಾ ಮಣಿ ನಾಲ್ಕೂರು ಅವರ ಕ್ರಾಂತಿಗೀತೆಯೊಂದಿಗೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಎಂ.ದೇವದಾಸ್, ರಘು ಎಕ್ಕಾರ್, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ಡಿವೈಎಫ್‌ಐನ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ಎಸ್‌ಎಫ್‌ಐನ ನಿತಿನ್ ಕುತ್ತಾರ್, ಎಸ್.ಪಿ.ಆನಂದ, ಶಿವರಾಜ್ ಆರ್.ಬಿರಾದರ್ ಉಪಸ್ಥಿತರಿದ್ದರು. ಚರಣ್ ಶೆಟ್ಟಿ ಪಂಜಿಮೊಗರು ಸ್ವಾಗತಿಸಿದರು. ಸಂತೋಷ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ನಗರದ ಅಂಬೇಡ್ಕರ್ ವೃತ್ತದಿಂದ ಮಂಗಳೂರು ಪುರಭವನವರೆಗೆ ಆಝಾಧಿ ಜಾಥಾ ನಡೆಯಿತು. ಜಾಥಾದಲ್ಲಿ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮೊಳಗಿಸಿದ ಆಝಾದಿ ಘೋಷಣೆಯನ್ನು ಕೂಗಲಾಯಿತು. ಡಿವೈಎ್ಐ, ಎಸ್‌ಎ್ಐ, ಎಐವೈಎ್, ಎಐಎಸ್‌ಎ್, ಜೆಎಂಎಸ್, ಬಿವಿಎಸ್, ಅಭಿಮತ ಮಂಗಳೂರು, ದಲಿತ ಸಂಘರ್ಷ ಸಮಿತಿ(ಪ್ರೊ.ಕೃಷ್ಣಪ್ಪ ಸ್ಥಾಪಿತ), ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ), ಸಮುದಾಯ ಮಂಗಳೂರು, ದಲಿತ ಹಕ್ಕುಗಳ ಸಮನ್ವಯ ಸಮಿತಿ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
‘‘ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸುವುದು ದೇಶದ್ರೋಹವೆಂದಾದರೆ ನಾನು ದೇಶದ್ರೋಹಿ ಅನ್ನಿಸಿಕೊಳ್ಳಲು ನನಗೆ ಯಾವುದೇ ಮುಲಾಜು ಇಲ್ಲ. ಸ್ವಾತಂತ್ರಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿ, ಭಗತ್ ಸಿಂಗ್ ಮೇಲೂ ದೇಶದ್ರೋಹದ ಆರೋಪ ಹೊರಿಸಲಾಗಿತ್ತು’’
-ಕೆ.ಎಸ್. ವಿಮಲಾ







