ಕಲಬುರಗಿ: ಜೈಲಿನ ಗೋಡೆ ಕೊರೆದು ನಾಲ್ವರು ಕೈದಿಗಳು ಪರಾರಿ

ಬೆಂಗಳೂರು, ಮಾ. 23: ಕಲಬುರಗಿಯ ಕೇಂದ್ರ ಕಾರಾಗೃಹದ ಬ್ಯಾರಕ್‌ನ ಗೋಡೆ ಕೊರೆದು ಕಾಂಪೌಂಡ್ ಹಾರಿ ನಾಲ್ವರು ವಿಚಾರಣಾಧೀನ ಕೈದಿಗಳು ಪರಾರಿಯಾಗಿರುವ ಘಟನೆ ತಡರಾತ್ರಿ 1 ಗಂಟೆಯಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಲ್ಲಿನ ಶರಣಸಿರಸಗಿ ಗ್ರಾಮದ ಶಿವಕುಮಾರ, ಫರಾಹತ್ತಬಾದ್ ನಿವಾಸಿ ತಾಜುದ್ದೀನ್, ಕಲಬುರಗಿ ನಿವಾಸಿ ಸುನೀಲ್‌ಕುಮಾರ, ಆಳಂದ ತಾಲೂಕಿನ ಹಿತ್ತಲಸಿರೂರ ಗ್ರಾಮದ ಲಕ್ಷ್ಮಣ್ ಎಂಬ ವಿಚಾರಣಾಧೀನ ಕೈದಿಗಳು ಪರಾರಿಯಾದವರೆಂದು ಪೊಲೀಸರು ಗುರುತಿಸಿದ್ದಾರೆ.
ಸಿನೆಮಾ ದೃಶ್ಯಾವಳಿಯ ಮಾದರಿಯಲ್ಲಿಯೇ ಕಲಬುರಗಿ ಕೇಂದ್ರ ಕಾರಾಗಹದ ಬ್ಯಾರಕ್‌ನ ಗೋಡೆ ಕಾಂಪೌಂಡ್ ಕೊರೆದು ಪರಾರಿಯಾದ ನಾಲ್ಕು ವಿಚಾರಣಾಧೀನ ಖೈದಿಗಳ ಬಂಧನಕ್ಕೆ ಈಗಾಗಲೇ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಈ ಪೈಕಿ ಶಿವಕುಮಾರ ಕೊಲೆ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದ್ದು, ಉಳಿದ ಮೂವರು ಆರೋಪಿಗಳು ಅತ್ಯಾಚಾರ ಆರೋಪದಡಿ ಜೈಲಿನಲ್ಲಿದ್ದರು. ಕೈದಿಗಳು ಪರಾರಿಯಾದ ಬಗ್ಗೆ ಜೈಲು ಅಧಿಕಾರಿಗಳು ಮೂರು ಗಂಟೆಯ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಆರೋಪಿಗಳು ಸ್ವಲ್ಪದೂರ ಹೋಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಮಧ್ಯೆ ಕಾರಾಗೃಹಕ್ಕೆ ಈಶಾನ್ಯ ವಲಯ ಐಜಿಪಿ ಬಿ.ಶಿವಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಜಿಪಿ, ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷದಿಂದ ಕೈದಿಗಳು ಪರಾರಿಯಾಗಿದ್ದಾರೆ. ತಡರಾತ್ರಿ 1ರಿಂದ 3 ಗಂಟೆ ಸುಮಾರಿಗೆ ಪರಾರಿಯಾಗಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಮಾಹಿತಿ ನೀಡಿದರು.
ಪರಾರಿಯಾದ ವಿಚಾರಣಾಧೀನ ಕೈದಿಗಳ ಬಂಧನಕ್ಕೆ ಈಗಾಗಲೇ ಬೀದರ್, ಯಾದಗಿರಿ, ರಾಯಚೂರು ಮತ್ತು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಗಳ ಪೊಲೀಸ್ ಠಾಣೆಗಳಿಗೆ ಫೋಟೊ ಮತ್ತು ಮಾಹಿತಿ ರವಾನಿಸಿದ್ದೇವೆ. ಪ್ರಕಣದ ತನಿಖೆ ಕಾರಾಗೃಹದ ಅಧಿಕಾರಿಗಳಿಂದ ನಡೆಯಲಿದ್ದು, ಈ ಸಂಬಂಧ ಫರಾಹತ್ತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







