ಮೋದಿ ಪಾಕ್ ಭೇಟಿಯ ಡಿ.25 ದಿನಾಂಕದ ಟಿಪ್ಪಣಿ ಬಿಟ್ಟು ಹೋದ ಪಠಾಣ್‌ಕೋಟ್ ಉಗ್ರರು
ಹೊಸದಿಲ್ಲಿ, ಮಾ.23: ವರ್ಷಾರಂಭದಲ್ಲಿ ಉಗ್ರರ ದಾಳಿಗೆ ತುತ್ತಾದ ಪಠಾಣ್‌ಕೋಟ್ ವಾಯುನೆಲೆಗೆ ಈ ತಿಂಗಳ 29ರಂದು ಪಾಕಿಸ್ತಾನದ ಐಎಸ್‌ಐ ಸದಸ್ಯರು ಸೇರಿದಂತೆ ತನಿಖಾ ತಂಡದ ಆಯ್ದ ಐದು ಮಂದಿಯ ತಂಡ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಪಾಕಿಸ್ತಾನ ನಿಯೋಗದ ಜತೆಗೆ ನಿರ್ಬಂಧಿತ ಮಾತುಕತೆ ನಡೆಸುವ ಪ್ರಸ್ತಾವವನ್ನು ಸರಕಾರಿ ತಳ್ಳಿಹಾಕಿದೆ.
ಪಾಕ್ ನಿಯೋಗ ಬಯಸಿದಂತೆ ಮುಖ್ಯ ಸಾಕ್ಷಿಯಾದ ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಲು ಅವಕಾಶ ನಿರಾಕರಿಸಲಾಗಿದೆ. ಪೊಲೀಸ್ ಆಧಿಕಾರಿಯನ್ನು ಉಗ್ರರು ಅಪಹರಿಸಿ, ಅವರ ಕಾರಿನಲ್ಲಿ ವಾಯುನೆಲೆಯ ಒಳಕ್ಕೆ ಪ್ರವೇಶಿಸಿದ್ದರು. ಅದಾಗ್ಯೂ ಅವರ ಹೇಳಿಕೆಯನ್ನು ಪಾಕಿಸ್ತಾನ ನಿಯೋಗಕ್ಕೆ ಪ್ರಸ್ತುತಪಡಿಸಲಾಗುವುದು.
ರವಿವಾರ ಪಾಕಿಸ್ತಾನ ನಿಯೋಗ ಹೊಸದಿಲ್ಲಿಗೆ ಬರಲಿದೆ. ಏಳು ಮಂದಿ ಸೇನಾ ಅಧಿಕಾರಿಗಳ ಸಾವಿಗೆ ಕಾರಣವಾದ ಪಠಾಣ್‌ಕೋಟ್ ದಾಳಿ ಘಟನೆಯ ಸ್ಥಳಕ್ಕೆ ಎರಡು ದಿನ ಬಳಿಕ ತೆರಳಲಿದೆ. ಉಗ್ರರು ಹಾಗೂ ಸೇನಾ ಅಧಿಕಾರಿಗಳ ನಡುವೆ ಗುಂಡಿನ ಚಕಮಕಿ ನಡೆದ ಜಾಗದವರೆಗೂ ತನಿಖಾ ತಂಡ ಹೋಗಲಿದೆ. ತಾಂತ್ರಿಕ ಕ್ಷೇತ್ರಕ್ಕೆ ಮಾತ್ರ ಅವರನ್ನು ಬಿಡುತ್ತಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಉಗ್ರರಿಂದ ವಶಪಡಿಸಿಕೊಂಡ ಆಹಾರದ ಪೊಟ್ಟಣಗಳು, ಲೇಬಲ್ ಇರುವ ಶಸ್ತ್ರಾಸ್ತ್ರಗಳು ಮತ್ತಿತರ ದಾಖಲೆಗಳನ್ನು ಪಾಕಿಸ್ತಾನ ತಂಡಕ್ಕೆ ಪ್ರದರ್ಶಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಡಿಸೆಂಬರ್ 25ರಂದು ದಿಢೀರ್ ಭೇಟಿ ನೀಡಿ ನವಾಜ್ ಶರೀಫ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸಂದರ್ಭದಲ್ಲಿ ಸಿದ್ಧಪಡಿಸಿದ ಟಿಪ್ಪಣಿಯೂ ಉಗ್ರರಿಂದ ವಶಪಡಿಸಿಕೊಂಡ ವಸ್ತುಗಳಲ್ಲಿ ಸೇರಿದ್ದು, ಈ ಬಗ್ಗೆ ತನಿಖಾ ತಂಡ ವಿಶೇಷ ಗಮನ ಹರಿಸಲಿದೆ. ಮೋದಿ ಭೇಟಿಯ ಒಂದು ವಾರ ಬಳಿಕ ನಡೆದ ಈ ದಾಳಿಯಲ್ಲಿ ಅಫ್ಝಲ್ ಗುರುವಿಗೆ ಮರಣ ದಂಡನೆ ವಿಧಿಸಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿತ್ತು.





