ಮೊಮ್ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಅಜ್ಜ!
ಪುಣೆ, ಮಾ.23 : ಮೊಮ್ಮಗನ ಮೇಲೆ ಅತೀವ ಮಮಕಾರ ಹೊಂದಿದ ಅಜ್ಜನೊಬ್ಬ ತನ್ನ ಅಪಾರ್ಟ್‌ಮೆಂಟಿನಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ 10 ವರ್ಷದ ಮೊಮ್ಮಗನನ್ನು ಕತ್ತು ಹಿಚುಕಿ ಕೊಂದು ಸಾಯುವಾಗಲೂ ಆತನನ್ನು ಜತೆಯಾಗಿ ಕರೆದುಕೊಂಡು ಹೋದ ಆಘಾತಕಾರಿ ಘಟನೆ ಪುಣೆಯ ಕೊಂಧ್ವಾ ಬುದ್ರುಕ್ ಪ್ರದೇಶದ ಶಾಂತಿನಗರದಿಂದವರದಿಯಾಗಿದೆ.
ಸುಧೀರ್ ದಗ್ದುಮಲ್ ಶಾಹ್ (65) ಯಾವತ್ತೂ ತನ್ನ ಮೊಮ್ಮಗ ಜಿನಯ್ ಜತೆಯೇ ಕಾಲ ಕಳೆಯುತ್ತಿದ್ದರಲ್ಲದೆ ಪ್ರತಿ ದಿನ ಆತನನ್ನು ಶಾಲೆಗೆ ಬಿಡಲು ಬಸ್ ಸ್ಟಾಪ್ ತನಕವೂ ಬರುತ್ತಿದ್ದರು. ಆದರೆ ಆಸ್ತಿ ವಿವಾದವೊಂದರಿಂದ ಬೇಸತ್ತಿದ್ದರೆಂದು ಹೇಳಲಾದ ಶಾ ಡೆತ್ ನೋಟೊಂದನ್ನು ಬರೆದಿಟ್ಟು ತನ್ನ ಮಗ ಪರೇಶ್ ಶಾ, ಸೊಸೆ, ಮೊಮ್ಮಗಳು ಗಾಢ ನಿದ್ದೆಯಲ್ಲಿರುವಾಗ ಜಿನಯ್‌ನನ್ನು ಹೊರಕ್ಕೆ ಕರೆದುಕೊಂಡು ಹೋಗಿ ಮೆಟ್ಟಿಲು ಬಳಿ ಆತನನ್ನು ಕತ್ತು ಹಿಚುಕಿ ಸಾಯಿಸಿ ನಂತರ ಕೆಳಕ್ಕೆ ಹಾರಿ ಮಾರ್ಚ್ 19ರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನೆರೆಮನೆಯವರು ಸತ್ತು ಬಿದ್ದಿದ್ದ ಜಿನಯ್‌ನನ್ನು ನಂತರ ನೋಡಿದಾಗಲಷ್ಟೇಈ ಪ್ರಕರಣ ಬೆಳಕಿಗೆ ಬಂದಿತ್ತು.
‘‘ನಾನು ಇನ್ನೂ 10-15 ವರ್ಷ ಬದುಕಬಹುದು. ಆದರೆ ಈ ಸಮಯ ಕೋರ್ಟಿಗೆ ಹೋಗಿ ಸಮಯ ವ್ಯಯ ಮಾಡುವ ಬದಲು ನಾನು ಸತ್ತು ಎಲ್ಲ ಸಮಸ್ಯೆ ಬಗೆಹರಿಸಬಯಸುತ್ತೇನೆ. ನಾನು ಜಿನಯ್‌ನನ್ನು ನನ್ನ ಜತೆ ಕರೆದುಕೊಂಡು ಹೋಗುತ್ತೇನೆ. ಅವ ನಿಲ್ಲದೆ ನಾನಿರಲಾರೆ.’’ ಎಂದು ಡೆತ್ ನೋಟಲ್ಲಿ ಬರೆಯಲಾಗಿತ್ತು.
ಶಾ ವಿರುದ್ಧಕೊಲೆ ಪ್ರಕರಣವನ್ನು ಅವರ ಪುತ್ರ ಪರೇಶ್ ದಾಖಲಿಸಿದ್ದು ಕುಟುಂಬ ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದೆ. ಪುಣೆಯಿಂದ63 ಕಿಮಿ ದೂರದ ಶಿರೂರಿನಲ್ಲಿ ಶಾ ಹೊಂದಿದ್ದ ಅಂಗಡಿಯೊಂದರ ವಿಚಾರವಾಗಿ ಸಂಬಂಧಿಯೊಬ್ಬರ ವಿರುದ್ಧ ಶಾ ಕೋರ್ಟ್ ಮೆಟ್ಟಿಲೇರಿದ್ದರು. ಅವರ ಕುಟುಂಬ ಅಲ್ಲಿ ಇಲೆಕ್ಟ್ರಾನಿಕ್ ಉದ್ಯಮ ಹೊಂದಿದ್ದರೂ ಒಂದು ವರ್ಷದ ಹಿಂದೆ ಅದನ್ನು ಮುಚ್ಚಿ ಪುಣೆಗೆ ವಾಸ ಬದಲಾಯಿಸಿದ್ದರು.
ಶಾ ಸ್ವಲ್ಪ ಸಮಯದ ಹಿಂದೆಯೇ ಆತ್ಮಹತ್ಯೆಗೆ ಯೋಚಿಸಿದ್ದರೆನ್ನಲಾಗಿದ್ದು ಕುಟುಂಬದಲ್ಲಿ ನಡೆಯಲಿದ್ದ ಧಾರ್ಮಿಕ ಕಾರ್ಯ ಅವರನ್ನು ಅವರ ನಿರ್ಧಾರದಿಂದ ಹಿಂದೆ ಸರಿಯವಂತೆ ಮಾಡಿತ್ತು. ಅವರ ಕುಟುಂಬ ಸದ್ಯದಲ್ಲಿಯೇ ರಾಜಸ್ಥಾನ ಪ್ರವಾಸ ಹೋಗಲಿತ್ತು.





