ಮಾ.26: ತಣ್ಣೀರುಬಾವಿಯಲ್ಲಿ ರಾಜ್ಯದ 6ನೆ ಟ್ರೀ ಪಾರ್ಕ್ ಉದ್ಘಾಟನೆ
ಮಂಗಳೂರು, ಮಾ.23: ಬೆಂಗರೆ ಪ್ರದೇಶದ ತಣ್ಣೀರುಬಾವಿಯಲ್ಲಿ ರಾಜ್ಯದ 6ನೆ ಸಸ್ಯೋದ್ಯಾನ (ಟ್ರೀ ಪಾರ್ಕ್) ಮಾ.26ರಂದು ಉದ್ಘಾಟನೆಯಾಗಲಿದೆ. ಅರಣ್ಯ ಸಚಿವ ಬಿ.ರಮಾನಾಥ ರೈ ಯೋಜನೆಯನ್ನು ಉದ್ಘಾಟಿಸಲಿದ್ದಾರೆ ಎಂದು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಡಾ.ಕೆ.ಟಿ. ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಸಮಾರಂಭದಲ್ಲಿ ಸಚಿವರಾದ ಅಭಯಚಂದ್ರ ಜೈನ್, ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ.ಆರ್.ಲೋಬೊ, ಗಣೇಶ್ ಕಾರ್ಣಿಕ್, ಬಿ.ಎ.ಮೊಯ್ದಿನ್ ಬಾವ, ಐವನ್ ಡಿಸೋಜ, ಟಿ.ಶಂಕುತಳಾ ಶೆಟ್ಟಿ, ಮೇಯರ್ ಹರಿನಾಥ್, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮನಪಾ ಸದಸ್ಯ ರಘುವೀರ್ ಮತ್ತು ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹನುಮಂತಪ್ಪ ತಿಳಿಸಿದ್ದಾರೆ.
ಸಸ್ಯೋದ್ಯಾನ
ಗುರುಪುರ ನದಿ ತೀರ ಹಾಗೂ ಬೆಂಗ್ರೆ ಪ್ರದೇಶದ 37 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಸಸ್ಯೋದ್ಯಾನದಲ್ಲಿ ಪಶ್ಚಿಮ ಘಟ್ಟದ ಸುಮಾರು 50 ಜಾತಿಯ ಗಿಡಗಳು, 16 ಜಾತಿಯ ಗಿಡಮೂಲಿಕೆಗಳ ಸಸ್ಯಗಳನ್ನು ನೆಡಲಾಗಿದೆ. ಎಪ್ರಿಲ್ 1ರಿಂದ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗುವುದು. ಸಾರ್ವಜನಿಕರು ಪ್ರಧಾನ ದ್ವಾರದಲ್ಲಿ ಟಿಕೆಟ್ ಪಡೆದುಕೊಂಡು ಉದ್ಯಾನವನವನ್ನು ವೀಕ್ಷಿಸಬಹುದು. ಈ ಪ್ರದೇಶಕ್ಕೆ ಹೋಗಲು ಹಳೆ ಬಂದರಿನ ದಕ್ಕೆ ಬಳಿ ಫೆರಿ ಬೋಟ್ ಸರ್ವೀಸ್ ಅಥವಾ ಕೂಳೂರು ಮಾರ್ಗವಾಗಿ ತಣ್ಣೀರುಬಾವಿ ತಲುಪಬಹುದಾಗಿದೆ ಎಂದು ಹನುಮಂತಪ್ಪ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವಲಯ ಅರಣ್ಯ ಅಧಿಕಾರಿ ಪಿ.ಶ್ರೀಧರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಶ್ರೀಧರ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.







