ಆಶಾ ಕಾರ್ಯಕರ್ತೆಯರಿಂದ ಮಾ.28ಕ್ಕೆ ‘ವಿಧಾನಸೌಧ ಚಲೋ’
ಬೆಂಗಳೂರು, ಮಾ.23: ವೇತನ ನಿಗದಿ ಮತ್ತು ಸಾಮಾಜಿಕ ಭದ್ರತೆಗಾಗಿ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಮಾ.28 ರಂದು ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಶಾ ಕಾರ್ಯಕರ್ತೆಯರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಾಲಿನಿ ಮೇಸ್ತ ತಿಳಿಸಿದ್ದಾರೆ.
ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಜನ ಸಮುದಾಯವನ್ನು ಸಂಪರ್ಕಿಸಿ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡುವುದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ಸಂಪರ್ಕಿಸುವಂತಹ ಆಶಾ ಕಾರ್ಯಕರ್ತರಿಗೆ ಕನಿಷ್ಠ ವೇತನವನ್ನು ನೀಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ದೂರಿದ್ದಾರೆ.
ಆದುದರಿಂದ ಸರಕಾರ ಆಶಾ ಕಾರ್ಯಕರ್ತರಿಗೆ ಮಾಸಿಕ ಕನಿಷ್ಠ 5 ಸಾವಿರ ರೂ. ವೇತನ ನೀಡಬೇಕು. ಜನಶ್ರೀ ಭಿಮಾ ಯೋಜನೆ, ಯಶಸ್ವಿನಿ ಯೋಜನೆಯನ್ನು ಆಶಾ ಕಾರ್ಯಕರ್ತರಿಗೂ ನೀಡಬೇಕು. ಶಿಡ್ಲಘಟ್ಟ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀರಿಗೆ ಹಲ್ಲೆ ನಡೆಸಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ಇದುವರೆಗೂ ಸರಕಾರ ಒಪ್ಪಿಕೊಂಡಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಮಾಲಿನಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







