ಎ.7ರಂದು ವಿಶ್ವ ಆರೋಗ್ಯ ದಿನಾಚರಣೆ
ಬೆಂಗಳೂರು, ಮಾ. 23: ಎ.7 ರಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಶ್ವ ಆರೋಗ್ಯ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಿ.ಎಸ್.ವಸ್ತ್ರದ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿರುವ ಇಲಾಖೆಯ ಕೇಂದ್ರ ಕಚೇರಿಯಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಮಧು ಮೇಹ ಏರಿಕೆಯನ್ನು ನಿಲ್ಲಿಸೋಣ ಹಾಗೂ ಸೋಲಿಸೋಣ ಎಂಬ ಘೋಷಣಾ ವಾಕ್ಯದೊಂದಿಗೆ ಈ ವರ್ಷದ ವಿಶ್ವ ಆರೋಗ್ಯ ದಿನಾಚರಣೆಯನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಮಧುಮೇಹವು ವಯಸ್ಸಿನ ಅಂತರಲ್ಲದೆ ಎಲ್ಲಾ ವಯಸ್ಸಿನವರಲ್ಲೂ ಪತ್ತೆಯಾಗುತ್ತಿದೆ. ಈ ವರ್ಷದ ಆರೋಗ್ಯ ದಿನಾಚರಣೆಯಲ್ಲಿ ಮಧುಮೇಹವನ್ನು ತಡೆಯಲು ಜನಜಾಗೃತಿ ಮೂಡಿಸುವ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು. ಮಾಧ್ಯಮಗಳ ಮೂಲಕ ಅಗತ್ಯ ಪ್ರಚಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆಕಾಶವಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಯುವಜನಸೇವಾ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ವೈದ್ಯಕೀಯ ಶಿಕ್ಷಣ ಇಲಾಖೆಗಳ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.





