ಕಲಬುರಗಿ ಆಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕ: 26 ಹಸುಗೂಸುಗಳು ಪಾರು

ತಪ್ಪಿದ ಭಾರೀ ದುರಂತ
ಕಲಬುರಗಿ, ಮಾ.23: ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಅಲ್ಲಿದ್ದ ಎಲ್ಲ 26 ಹಸುಗೂಸುಗಳು ಅದೃಷ್ಟವಶಾತ್ ಪಾರಾಗಿವೆ. ಏರ್‌ಕಂಡಿಶರ್‌ನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಡೀ ವಾರ್ಡ್‌ನಲ್ಲಿ ಹೊಗೆ ತುಂಬಿ ಹೋಗಿ ಎಳೆಯ ಮಕ್ಕಳು ಅಪಾಯದಲ್ಲಿ ಸಿಲುಕಿಕೊಂಡಿದ್ದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ವಾರ್ಡ್‌ನ ಗ್ಲಾಸ್‌ಗಳನ್ನು ಒಡೆದು ಒಳಗೆ ಆವರಿಸಿದ್ದ ಹೊಗೆ ಹೊರಹೋಗುವಂತೆ ಮಾಡಿದರು. ನಂತರ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಏರ್‌ಕಂಡಿಶನ್ ಉಪಕರಣ ಸ್ಫೋಟಿಸಿದಾಗ ಬೆಂಕಿ ಅನಾಹುತ ಸಂಭವಿಸಿತೆಂದು ಮೂಲಗಳು ತಿಳಿಸಿವೆ.
ದಟ್ಟವಾದ ಹೊಗೆಯಿಂದ ತುಂಬಿದ್ದ ಹೆರಿಗೆ ಕೋಣೆಯ ಗ್ಲಾಸು ಒಡೆಯಲು ಯತ್ನಿಸಿದ ಸ್ಟಾಫ್ ನರ್ಸ್ ಫಕೀರಪ್ಪ ಎಂಬವರ ಕೈಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 26 ಹಸುಗೂಸುಗಳ ಪೈಕಿ ಬಸವೇಶ್ವರ ಆಸ್ಪತ್ರೆಗೆ 12, ಸಂಗಮೇಶ್ವರ ಆಸ್ಪತ್ರೆಗೆ 14 ಕಂದಮ್ಮಗಳ ಸ್ಥಳಾಂತರ ಮಾಡಲಾಗಿದೆ. ಇಲೆಕ್ಟ್ರಿಕಲ್ ಸಿಬ್ಬಂದಿ ತಕ್ಷಣ ಆಗಮಿಸಿ ದುರಸ್ತಿ ಕೆಲಸ ಕೈಗೊಂಡಿದ್ದಾರೆ. ಆದರೆ ಮೂರ್ನಾಲ್ಕು ಗಂಟೆ ಕಾಲ ಆಸ್ಪತ್ರೆಯಲ್ಲಿ ಭೀತಿ, ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಐಜಿಪಿ ಶಿವಕುಮಾರ, ಎಸ್ಪಿ ಅಮಿತ್‌ಸಿಂಗ್, ಹೆಚ್ಚುವರಿ ಎಸ್ಪಿ ಜಯಪ್ರಕಾಶ, ಡಿವೈಎಸ್ಪಿ, ಇನ್‌ಸ್ಪೆಕ್ಟರ್ ಸತೀಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಸ್ಪತ್ರೆ ಅಧೀಕ್ಷಕಿ ಡಾ.ನಳಿನಿ ನಮೋಶಿ ಮತ್ತು ವೈದ್ಯರು, ಸಿಬ್ಬಂದಿ ಇದ್ದರು. ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.







