ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ: ಚಿತ್ರ ಇನ್ನೂ ಬಾಕಿ ಉಳಿದಿದೆ ದೋಸ್ತ್ ಎಂದ ಉಮರ್ ಅಬ್ದುಲ್ಲಾ
.jpg)
ಹೊಸದಿಲ್ಲಿ,ಮಾರ್ಚ್.24: ಜಮ್ಮುಕಾಶ್ಮೀರದಲ್ಲಿ ಸರಕಾರ ರಚನೆಯ ಹಿನ್ನೆಲೆಯಲ್ಲಿ ಪಿಡಿಪಿ ಮತ್ತು ಬಿಜೆಪಿ ಸಂಧಾನ ಪ್ರಯತ್ನಗಳಾಗುತ್ತಿರುವ ಕುರಿತು ಸಂದೇಹ ಪ್ರಕಟಿಸಿದ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಚಿತ್ರ ಇನ್ನೂ ಬಾಕಿ ಉಳಿದಿದೆ ಗೆಳೆಯರೇ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಜಮ್ಮುವಿನಲ್ಲಿ ನಿನ್ನೆ ರಾಜ್ಯಪಾಲ ಎನ್‌ಎನ್ ವೊರಾರನ್ನು ಭೇಟಿಯಾಗಿ ಬಂದ ಉಮರ್ ದಿನವಿಡೀ ಸುಮ್ಮನಿದ್ದರು. ಸರಕಾರ ರಚನೆಯ ಕುರಿತು ಪಿಡಿಪಿ ಮತ್ತು ಬಿಜೆಪಿ ನಡುವೆ ನಡೆಯುತ್ತಿದ್ದ ಮಾತುಕತೆಯತ್ತ ದೃಷ್ಟಿ ನೆಟ್ಟಿದ್ದ ಅವರು ಕಾಶ್ಮೀರದ ಬಿಜೆಪಿ ವಕ್ತಾರ ರಾಮ್‌ಮಾಧವ್‌ರ ಹೇಳಿಕೆ ಬಂದನಂತರ ಶಾರುಕ್ ಖಾನ್‌ರ ಓಂಶಾಂತಿ ಓಂ ಚಿತ್ರದಲ್ಲಿರುವಂತೆ ಸರಕಾರ ರಚನೆಯ ಕುರಿತ ಮಾತುಕತೆ ಸ್ಥಿತಿಗತಿಯಾಗಿದೆಯೆಂದು ಉಮರ್ ಕಟಕಿಯಾಡಿದ್ದು ಸರಕಾರ ರಚನೆಯ ಚಿತ್ರ ಇನ್ನೂ ಬಾಕಿ ಇದೆ ಗೆಳೆಯರೇ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆಂದು ವರದಿಯಾಗಿದೆ. ಬಿಜೆಪಿ ವಕ್ತಾರ ರಾಮ್‌ಮಾಧವರು ಪಿಡಿಪಿಯ ಶಾಸಕಾಂಗ ಪಕ್ಷದ ಬೈಠಕ್ ಗುರುವಾರ ನಡೆಯಲಿದ್ದು ಆನಂತರ ಕೊನೆಯ ಕಂತಿನ ಮಾತುಕತೆ ನಡೆಯಲಿದೆ ಎಂದು ಹೇಳಿದ್ದರು. ಆನಂತರ ಉಮರ್ ಟ್ವೀಟ್ ಮಾಡಿ ಮೆಹಬೂಬ ಮುಫ್ತಿ ಸಿದ್ಧಾಂತ ಮತ್ತು ಸರಕಾರ ಇದರ ನಡುವೆ ಸರಕಾರವನ್ನು ಆಯ್ಕೆ ಮಾಡಿಕೊಂಡಿರುವುದು ಸ್ಪಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಮೆಹಬೂಬರಿಗೆ ಇಂತಹ ಸಂತುಷ್ಟಿ ಎಲ್ಲಿಂದ ಸಿಕ್ಕಿದೆಯೆಂದು ಉಮರ್ ಆಶ್ಚರ್ಯವನ್ನು ಪ್ರಕಟಿಸಿದ್ದಾರೆ. ಪ್ರಧಾನಿ ಭೇಟಿಯ ವೇಳೆ ಮೆಹಬೂಬರಿಗೆ ಎಂತಹ ಆಶ್ವಾಸನೆ ಸಿಕ್ಕಿದೆ ಎಂಬುದನ್ನು ಜನರಿಗೆ ಬಹಿರಂಗಪಡಿಸಬೇಕೆಂದು ಉಮರ್ ಆಗ್ರಹಿಸಿದ್ದಾರೆ. ಒಂದುವೇಳೆ ಮೆಹಬೂಬ ಪ್ರಧಾನಿ ಭೇಟಿಯಿಂದ ಖಾಲಿ ಕೈಗಳಲ್ಲಿ ಮರಳಿರುವುದಾದರೆ ಅವರ ಈ ಸಂತುಷ್ಟಿ ಕಳಾಹೀನವಾಗಿದೆ ಎಂದು ಉಮರ್ ವ್ಯಂಗವಾಡಿದ್ದಾರೆ.





