ಬಂಟ್ವಾಳ ಸೋಲಿಡಾರಿಟಿ ಯೂತ್ ಮೂಮೆಂಟ್ ನಿಂದ ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರಯ್ಯರಿಗೆ ಸನ್ಮಾನ

ಬಂಟ್ವಾಳ, ಮಾ.24: ಬಿ.ಸಿ.ರೋಡ್, ಮೆಲ್ಕಾರ್ ಪರಿಸರದ ಸಾರ್ವಜನಿಕರಿಗೆ ಪ್ರತಿದಿನ ತೀವ್ರ ತಲೆನೋವಾಗಿದ್ದ ಟ್ರಾಫಿಕ್ ಜಾಮ್ ಮತ್ತು ರಸ್ತೆ ಅಗಲೀಕರಣ ಸಮಸ್ಯೆಗೆ ಸ್ಪಂದಿಸಿ ರಸ್ತೆ ಅಗಲೀಕರಣ ಮಾಡಿಸಿ ಸಮಸ್ಯೆಗೆ ಮುಕ್ತಿ ನೀಡಿದ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರಯ್ಯರಿಗೆ ಮೆಲ್ಕಾರ್ ನಾಗರಿಕರ ಪರವಾಗಿ ಸೋಲಿಡಾರಿಟಿ ಯೂತ್ ಮೂಮೆಂಟ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಇತ್ತೀಚೆಗೆ ಮೆಲ್ಕಾರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರಯ್ಯ , ಇದು ನಾನು ಮಾಡಿದ ಸಾಧನೆಯಲ್ಲ. ನನ್ನ ಜೊತೆಗೆ ಸಾರ್ವಜನಿಕರು ನೀಡಿದ ಸಂಪೂರ್ಣ ಸಹಕಾರದಿಂದ ನನ್ನ ಕರ್ತವ್ಯವನ್ನು ನಾನು ನಿಭಾಯಿಸಿದ್ದೇನೆ.
ಸನ್ಮಾನ ಮಾಡುವ ಮೂಲಕ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದೀರಿ. ಬಂಟ್ವಾಳ ತಾಲೂಕಿನ ಎಲ್ಲೂ ಟ್ರಾಫಿಕ್ ನಿಂದಾಗಿ ಜನರಿಗೆ ಸಮಸ್ಯೆಯಾಗದಂತೆ ನಿವೃತ್ತಿಯಾಗುವವರೆಗೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಈಗ ನೀಡಿರುವ ಸನ್ಮಾನವು ನನ್ನ ವೃತ್ತಿ ಜೀವನದಲ್ಲಿ ಎಂದೂ ಮರೆಯಲಾಗದು. ಅದಕ್ಕಾಗಿ ಎಲ್ಲರಿಗೂ ಕೃತಜ್ಞ ಎಂದವರು ಹೇಳಿದರು.
ಎಂ.ಎಚ್. ಮುಸ್ತಫಾ ಬೋಳಂಗಡಿ ಸನ್ಮಾನ ಪತ್ರವನ್ನು ವಾಚಿಸಿದರು. ಮುಹ್ಸಿನ್ ಮಂಗಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಲಿಡಾರಿಟಿ ಯೂತ್ ಮೂಮೆಂಟ್ ನ ಶಂಶೀರ್ ಮೆಲ್ಕಾರ್, ಅಬ್ದು ಶುಕೂರ್ ಎಂ.ಎಚ್, ಮುಬೀನ್ ಉಳ್ಳಾಲ್, ಗುಡ್ಡೆಯಂಗಡಿ ಜುಮಾ ಮಸೀದಿ ಉಪಾಧ್ಯಕ್ಷ ಎಸ್.ಮುಹಮ್ಮದ್, ದುರ್ಗಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಜೆ. ಕೃಷ್ಣಪ್ಪ, ಹಿರಿಯ ರಿಕ್ಷಾ ಚಾಲರಾದ ಸೈಮನ್ ಪಾಯಸ್ ಭಾಗವಹಿಸಿದ್ದರು. ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ದಯಾನಂದ, ಉಪಾಧ್ಯಕ್ಷ ಗೋಪಿನಾಥ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಿದ್ದೀಕ್ ವಂದನಾರ್ಪಣೆಗೈದರು.







