ಬಂಗಾರ ತೆಗೆದುಕೊಂಡು ಹೋದ ಇಂದಿರಾಗಾಂಧಿ ನೀರು ಕೊಡಲಿಲ್ಲ...

ಬೆಂಗಳೂರು.ಮಾ.24: ಆಲಮಟ್ಟಿ ಜಲಾಶಯ ನಿರ್ಮಾಣವಾಗಲಿ ಎಂಬ ಕಾರಣದಿಂದಬಾಗಲಕೋಟೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ಬಂಗಾರದಲ್ಲಿ ತುಲಾಭಾರ ಮಾಡಲಾಯಿತು. ಬಂಗಾರ ತೆಗೆದುಕೊಂಡ ಹೋದ ಅವರು ನಮ್ಮ ಭಾಗದ ಜನರಿಗೆ ಏನೂ ಮಾಡಲಿಲ್ಲ ಎಂದು ಬಿಜೆಪಿ ನಾಯಕ ಗೋವಿಂದ ಕಾರಜೋಳ ವಿದಾನಸಭೆಯಲ್ಲಿಂದು ನೆನಪುಗಳನ್ನು ಮೆಲುಕು ಹಾಕಿದರು.
ಬರ ಹಾಗೂ ವಿದ್ಯುತ್ ಸಮಸ್ಯೆ ಕುರಿತು ನಿಯಮ 69ರ ಅಡಿ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಆಲಮಟ್ಟಿ ಜಲಾಶಯ ನಿರ್ಮಾಣವಾಗಲಿ. ನಮ್ಮಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿ ಎಂಬ ಕಾರಣದಿಂದ 1964ರಲ್ಲಿ ಇಂದಿರಾಗಾಂಧಿಯವರನ್ನು ಬಂಗಾರದಲ್ಲಿ ತುಲಾಬಾರ ಮಾಡಲಾಯಿತು. ಚಿತ್ರದುರ್ಗದಲ್ಲಿ ಸೋತಿದ್ದ ನಿಜಲಿಂಗಪ್ಪ ಅವರನ್ನು ಬಾಗಲಕೋಟೆಯಲ್ಲಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಲಾಯಿತು. ಆದ್ರೆ, ಬಂಗಾರ ತೆಗೆದುಕೊಂಡು ಹೋದ ಇಂದಿರಾಗಾಂಧಿಯೂ ಏನೂ ಮಾಡಲಿಲ್ಲ. ನಿಜಲಿಂಗಪ್ಪನವರೂ ಏನೂ ಮಾಡಲಿಲ್ಲ ಎಂದು ಹಿಂದುಳಿದ ಪ್ರದೇಶದ ಸಮಸ್ಯೆಯನ್ನು ಸದನದಲ್ಲಿ ತೆರೆದಿಟ್ಟರು.
ಈ ಭಾಗದ ಸಮಸ್ಯೆಗಳನ್ನು ಬಗೆಹರಿಸುವಂತೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕಂಬಳಿ ಹೊದಿಸಿ, ಬಂಗಾರ ಹಾಕಿ ಸನ್ಮಾನಿಸಿದ್ದೇವೆ. ಜನರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ವಿತರಿಸಿ ಎಂದು ಮನವಿ ಮಾಡಿದರು.
ಡಿ.ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದಾಗ, ಭೀಕರ ಬರ ಬಂದಿತ್ತು. ನೀರು ಪೂರೈಕೆಗೆ 400 ಟ್ಯಾಂಕರ್ ಖರೀದಿಸಿದ್ದರು, ಜಾನುವಾರುಗಳ ಮೇವಿಗೆ ಟ್ರಾಕ್ಟರ್, ಟ್ರಕ್ ಕೊಟ್ಟಿದ್ದರು. ಹಳ್ಳಿಗಳಿಗೆ ರಸ್ತೆ ನಿರ್ಮಾಣ ಮಾಡಿದ್ದರು. ಉದ್ಯೋಗ ಸೃಷ್ಟಿ ಮಾಡಿದರು. ಅದು ಜನಪರ ಸರ್ಕಾರ.
ಇದೇ ರೀತಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಬರ ನಿರ್ವಹಣೆ ಮಾಡಲು ನೀಲಿ ನಕ್ಷೆಯನ್ನೇ ಸಿದ್ಧಪಡಿಸಿದ್ದರು. ರಾಜ್ಯ ಸುತ್ತಿ ಜಿಲ್ಲೆಗಳಲ್ಲಿ ಸಭೆ ಮಾಡಿದ್ದರು. ಗ್ರಾಮೀಣಾಭಿವೃದ್ಧಿ ಸಚಿವ ನಜೀರ್ ಸಾಬ್ ಅವರು ಗ್ರಾಮೀಣ ಭಾಗಕ್ಕೆ ನೀರು ಕೊಟ್ಟು ನೀರ್‌ಸಾಬ್ ಎಂದೇ ಜನಪ್ರಿಯರಾಗಿದ್ದರು. ಆದರೆ ಈಗಿನ ಸರ್ಕಾರಕ್ಕೆ ಆ ಬದ್ಧತೆ ಕಾಣುತ್ತಿಲ್ಲ ಎಂದರು.
ಮುಂಗಾರು, ಹಿಂಗಾರು ಹಂಗಾಮಿನಲ್ಲೀ ಮಳೆ ವೈಫಲ್ಯದಿಂದ ಬರ ಆವರಿಸಿದೆ. ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದಂತೆ ಇಲ್ಲ. ಜನ ಜಾನುವಾರುಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಬೇಕು. ಜಾನುವಾರುಗಳಿಗೆ ಮೇವು ಖರೀದಿ ಮಾಡಿ ಹಂಚಬೇಕು. ಗುಳೆ ಹೋಗದಂತೆ ಉದ್ಯೋಗ ಒದಗಿಸಬೇಕು.
ರಾಜ್ಯದ ಸಹಕಾರ ಸಂಘಗಳಲ್ಲಿ ರೈತರು ಮಾಡಿರುವ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲದ ಶೇಕಡಾ ಐವತ್ತು ಭಾಗವನ್ನು ನಾವು ಭರಿಸುತ್ತೇವೆ. ಶೇಕಡಾ ಐವತ್ತು ಭಾಗವನ್ನು ನೀವು ಭರಿಸಿ ಎಂದು ಕೇಂದ್ರ ಸರ್ಕಾರದ ಬಳಿ ಸರ್ವಪಕ್ಷ ನಿಯೋಗವನ್ನು ಕರೆದೊಯ್ಯಬೇಕು ಎಂದು ಗೋವಿಂದ ಕಾರಜೋಳ್ ಒತ್ತಾಯಿಸಿದರು.
ರಾಜ್ಯದಲ್ಲಿ ಬರಗಾಲ ಹಾಗೂ ವಿದ್ಯುತ್ ಸಮಸ್ಯೆಯಿಂದ ಜನ ತತ್ತರಿಸುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಬರಗಾಲವನ್ನು ನಿವಾರಿಸಲು ಹಾಗೂ ವಿದ್ಯುತ್ ಸಮಸ್ಯೆಯಿಂದ ಜನರನ್ನು ಕಾಪಾಡಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮ ಸಮರ್ಪಕವಾಗಿಲ್ಲ. ಬರಗಾಲದಿಂದ ರೈತ ಸಮುದಾಯ ತತ್ತರಿಸಿಹೋಗಿದೆ.
ಇವತ್ತು ಬರಗಾಲದ ಪರಿಣಾಮವಾಗಿ ಕುಡಿಯುವ ನೀರಿಗೆ ಯಾವ ಪರಿಯ ಸಮಸ್ಯೆ ಕಾಣಿಸಿಕೊಂಡಿದೆ ಎಂದರೆ ನಮ್ಮ ಹಳ್ಳಿಗಾಡಿನ ಹೆಣ್ಣು ಮಕ್ಕಳು ಒಂದು,ಎರಡು ಕಿಲೋಮೀಟರುಗಳಷ್ಟು ದೂರ ಹೋಗಿ ಯಾವುದಾದರೂ ಹೊಲ-ಗದ್ದೆಗಳಲ್ಲಿ ಇರುವ ನೀರನ್ನು ಬಿಂದಿಗೆಯಲ್ಲಿ ಹೊತ್ತು ತರುವ ಪರಿಸ್ಥಿತಿ ಇದೆ ಎಂದರು.
ಮಕ್ಕಳನ್ನು ಹೊತ್ತುಕೊಂಡು ಕಿಲೋಮೀಟರುಗಳಷ್ಟು ದೂರ ಹೋಗಿ ಅವರು ನೀರು ತರುವ ಪರಿಸ್ಥಿತಿಯನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಬರಪೀಡಿತ ತಾಲ್ಲೂಕುಗಳಲ್ಲಿ ನೀರು ಸಿಗುತ್ತಿಲ್ಲ. ಟ್ಯಾಂಕರ್‌ಗಳ ಮೂಲಕ ಅವರಿಗೆ ನೀರು ಸರಬರಾಜು ಮಾಡುವ ಕೆಲಸ ನಡೆಯುತ್ತಿಲ್ಲ. ಹೀಗಾದರೆ ಜನ ಏನು ಮಾಡಬೇಕು?ಎಂದು ಅವರು ನೇರವಾಗಿ ಪ್ರಶ್ನಿಸಿದರು.
ಜಾನುವಾರುಗಳ ಮೇವಿನ ವಿಷಯದಲ್ಲೂ ಅಷ್ಟೇ. ನೀವು ಮೇವನ್ನು ಸಂಗ್ರಹಿಸುವ ಕೆಲಸ ಈಗಿನಿಂದಲೇ ಮಾಡಿ. ಇದಕ್ಕೆ ನೀವು ಕೊಡುವ ಹಣ ಮೇವು ಖರೀದಿಗೆ ಸಾಲುವುದಿಲ್ಲ. ಒಂದು ಟನ್ ಮೇವಿಗೆ ನೀವು ನಾಲ್ಕು ಸಾವಿರ ರೂಪಾಯಿ ಕೊಡುತ್ತೀರಿ. ಆದರೆ ಈ ಹಣ ಯಾವ ಪ್ರಮಾಣದಲ್ಲೂ ಸಾಲುವುದಿಲ್ಲ. ಹೀಗಾಗಿ ತಕ್ಷಣವೇ ನೀವು ಈ ವಿಷಯದಲ್ಲಿ ಮುಂಜಾಗರೂಕತೆ ವಹಿಸಿ ಎಂದು ಅವರು ಹೇಳಿದರು.
ಕೃಷಿ ಇರಬಹುದು,ತೋಟಗಾರಿಕೆ ಇರಬಹುದು.ಎಲ್ಲ ಕ್ಷೇತ್ರಗಳಲ್ಲೂ ರೈತರು ಕಂಗಾಲಾಗಿದ್ದಾರೆ.ಅವರ ನೆರವಿಗೆ ಸರ್ಕಾರ ಬರಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಕಬ್ಬು ಬೆಳೆಗಾರರ ಪರಿಸ್ಥಿತಿಯೂ ಅತ್ಯಂತ ದಾರುಣವಾಗಿದೆ 2014-15 ರ ಸಾಲಿಗೆ ಸಂಬಂಧಿಸಿದಂತೆ ನೀವೇ ನಿಗದಿ ಮಾಡಿದ ಕನಿಷ್ಟ ಬೆಂಬಲ ಬೆಲೆಯನ್ನು ನೀಡಲಿಲ್ಲ.ಆ ಪೈಕಿ ಇನ್ನೂ ನೂರು ರೂಪಾಯಿಗಳಷ್ಟು ಬಾಕಿ ಇದೆ. ಇದೇ ರೀತಿ 2015-16 ರ ಸಾಲಿನ ಬಾಕಿಯೂ ಉಳಿದುಕೊಂಡಿದೆ.ಹೀಗೆ ಬಾಕಿ ಉಳಿಸಿಕೊಂಡರೆ ರೈತರು ಎಲ್ಲಿಗೆ ಹೋಗಬೇಕು?ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವವರು ಯಾರು?ಎಂದು ಅವರು ಪ್ರಶ್ನಿಸಿದರು.
ಮಾತಿನ ನಡುವೆ ಗೋವಿಂದ ಕಾರಜೋಳ ಅವರು ಕೇಂದ್ರದಿಂದ ಬಂದಿರುವ ಅನುದಾನದ ಬಗ್ಗೆ ಪ್ರಸ್ತಾಪ ಮಾಡಿದರು. ಹೇಗಿದ್ದರೂ ಕೇಂದ್ರದ ಬಳಿ ಭಿಕ್ಷೆ ಕೇಳುತ್ತಿದ್ದೀರಿ ಸ್ವಲ್ಪ ಹೆಚ್ಚಿಗೇ ಕೇಳಿ, ಅದರಿಂದಲಾದರೂ ಸಮರ್ಪಕ ಪರಿಹಾರ ಕಾಮಗಾರಿ ಕೈಗೊಳ್ಳಿ ಎಂದರು.
ಇದು ಕೃಷಿ ಸಚಿವ ಕೃಷ್ಣಬೈರೇಗೌಡ ಅವರನ್ನು ಕೆರಳಿಸಿತು. ನಾವು ಯಾರಿಂದಲೂ ಭಿಕ್ಷೆ ಬೇಡುವ ಅಗತ್ಯವಿಲ್ಲ. ಕೇಂದ್ರ ನೀಡುವ ಅನುದಾನ ಭಿಕ್ಷೆಯಲ್ಲ. ಅದು ನಮ್ಮ ಹಕ್ಕು ಎಂದು ವಾದಿಸಿದರು. ಅಲ್ಲದೆ, ಭಿಕ್ಷೆ ಪದ ಬಳಕೆ ಮಾಡುವ ಮೂಲಕ ಗೋವಿಂದ ಕಾರಜೋಳ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ನ ಶಿವಮೂರ್ತಿ ನಾಯಕ್ ಹಾಗೂ ಬಸವರಾಜ ರಾಯರೆಡ್ಡಿ ಅವರು ಕೃಷಿ ಸಚಿವರನ್ನು ಬೆಂಬಲಿಸಿದರು. ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯ್ತು
ಕೊನೆಗೆ ಭಿಕ್ಷೆ ಪದ ಬಳಕೆಯನ್ನು ಕಡತದಿಂದ ತೆಗಿಸುವ ಮೂಲಕ ಸ್ಪೀಕರ್ ಕಾಗೋಡು ತಿಮ್ಮಪ್ಪ ವಿವಾದಕ್ಕೆ ಮಂಗಳ ಹಾಡಿದರು.







