ಹೋಳಿ ಬಲೂನಿಗೆ ಆಕ್ಷೇಪಿಸಿದ ನೈಜೀರಿಯಾ ಪ್ರಜೆಗಳ ಮೇಲೆ ಬರ್ಬರ ಹಲ್ಲೆ
ಇದೆಂತಹಾ ಸಂಭ್ರಮಾಚರಣೆ ?

ನವದೆಹಲಿ : ಬಾಲಕನೊಬ್ಬ ನೀರು ತುಂಬಿದ ಬಲೂನನ್ನು ತಮ್ಮತ್ತ ಎಸೆದಿದ್ದಕ್ಕಾಗಿ ಆತನಿಗೆ ಬೈದರೆಂಬ ಒಂದೇ ಕಾರಣಕ್ಕೆ ಫುಟ್ಬಾಲ್ ಕೋಚ್ ಒಬ್ಬರು ಸೇರಿದಂತೆ ಇಬ್ಬರು ನೈಜೀರಿಯಾ ಪ್ರಜೆಗಳ ಮೇಲೆ ಕ್ರಿಕೆಟ್ ಹಾಗೂ ಬೇಸ್‌ಬಾಲ್ ಬ್ಯಾಟುಗಳಿಂದಸುಮಾರು 12 ಮಂದಿಯ ಗುಂಪೊಂದು ಹಲ್ಲೆಗೈದ ಘಟನೆ ಪಶ್ಚಿಮ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಭಾನುವಾರ ನಡೆದಿದ್ದು ಘಟನೆ ನಡೆದು 24 ಗಂಟೆಗಳ ತರುವಾಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆನ್ನಲಾಗಿದೆ. ಈ ತನಕ ಯಾರನ್ನೂ ಬಂಧಿಸಲಾಗಿಲ್ಲವೆಂದು ತಿಳಿದು ಬಂದಿದೆ. ಘಟನೆ ನಡೆದಂದಿನಿಂದ ನೈಜೀರಿಯಾ ಪ್ರಜೆಗಳಿಬ್ಬರೂ ತಮ್ಮ ಮನೆಗೆ ಹಿಂದಿರುಗಿಲ್ಲ ಹಾಗೂ ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆಯೆನ್ನಲಾಗಿದೆ.
‘‘ನಾವು ಭಯಭೀತರಾಗಿದ್ದೇವೆ ಹಾಗೂನಮ್ಮ ಸ್ನೇಹಿತರೊಬ್ಬರ ಮನೆಯಲ್ಲಿ ತಂಗಿದ್ದೇವೆ.ನಾವಿದ್ದ ಪ್ರದೇಶವನ್ನು ತೊರೆಯುತ್ತೇವೆಯಾದರೂ ನ್ಯಾಯಕ್ಕಾಗಿ ನಾವು ಹೋರಾಡುತ್ತೆವೆ,’’ಎಂದು ಸಂತ್ರಸ್ತರಲ್ಲೊಬ್ಬರಾದ ಎವ್ವಿರ್ಹಿ ಐಸಾಕ್ ಇಂಡಿಯನ್ ಎಕ್ಸ್‌ಪ್ರೆಸ್ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಹೇಳಿದರು. ಗುಲ್‌ಮೊಹರ್ ಬಾಗ್‌ನಲ್ಲಿರುವ ಸಾಕರ್ ಕ್ಲಬ್‌ನಲ್ಲಿ ಅವರು ಕೋಚ್ ಆಗಿದ್ದಾರೆ. ಇವರು ದ್ವಾರಕಾ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಿಂದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ‘‘ಜನಾಂಗೀಯ ನಿಂದನೆಯನ್ನು ಹಲವು ಬಾರಿ ಎದುರಿಸಬೇಕಾಗಿ ಬಂದಿದ್ದರೂ ನಾನು ಅದನ್ನು ಯಾವತ್ತೂನಿರ್ಲಕ್ಷ್ಯಿಸಿದ್ದೇನೆ,’’ಎಂದು ಐಸಾಕ್ ಹೇಳಿದ್ದಾರೆ. ‘‘ಆದರೆ ರವಿವಾರ ನಡೆದ ಘಟನೆಯಲ್ಲಿ ಜನರು ನಮ್ಮನ್ನು ಸಾಯಿಸಿಯೇ ಬಿಡುತ್ತಿದ್ದರೇನೋ,’’ಎಂದವರು ಭೀತಿ ವ್ಯಕ್ತಪಡಿಸಿದ್ದಾರೆ.
ಐಸಾಕ್ ಮಾರ್ಕೆಟ್‌ನತ್ತ ನಡೆಯುತ್ತಿದ್ದಾಗ ಬಾಲಕನೊಬ್ಬ ಅವರ ಮೇಲೆ ನೀರು ತುಂಬಿದ ಬಲೂನು ಎಸೆದಾಗ ಐಸಾಕ್ ಬಾಲಕನನ್ನು ಹಿಡಿದು ಬೈದು ನಂತರ ತಮ್ಮ ದಾರಿ ಹಿಡಿದಿದ್ದರು. ಸ್ವಲ್ಪ ಹೊತ್ತಿನ ಬಳಿಕ ಬಾಲಕನ ಸಹೋದರಅಲ್ಲಿಗೆ ಬಂದಾಗ ಹತ್ತಿರದ ಅಂಗಡಿಯವ ನಡೆದಿದ್ದನ್ನು ವಿವರಿಸಿದ್ದ. ಸ್ವಲ್ಪ ಹೊತ್ತಿನಲ್ಲಿಯೇ ಐಸಾಕ್ ಮನೆ ಬಾಗಿಲನ್ನು ಬಡಿದ ಜನರು ಒಳ ಪ್ರವೇಶಿಸಿ ಅವರ ಹಾಗೂ ಅವರ ರೂಂ ಮೇಟ್ ಅಬ್ದುಲ್ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿ ದಾಂಧಲೆಗೈದು ಹೊರನಡೆದಿದ್ದರು.
ಘಟನೆ ನಡೆದ ಸಮಯ ತಾನು ಐಸಾಕ್ ಜತೆಗಿರಲಿಲ್ಲವೆಂದು ಆತನ ರೂಂ ಮೇಟ್ ಅಬ್ದುಲ್ ದಾಳಿಕೋರರಲ್ಲಿ ಹೇಳಿದರೂ ಏನೂ ಪ್ರಯೋಜನವಾಗಲಿಲ್ಲವೆನ್ನಲಾಗಿದೆ.
ಹಿರಿಯ ಅಧಿಕಾರಿಗಳ ಹಸ್ತಕ್ಷೇಪದ ನಂತರವಷ್ಟೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆನ್ನಲಾಗಿದೆ.







