ಶೇನ್ ವ್ಯಾಟ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

ಮೊಹಾಲಿ, ಮಾ.24: ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ನಾಯಕ ಶೇನ್ ವ್ಯಾಟ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂದು ವಿದಾಯ ಘೋಷಿಸಿದ್ದಾರೆ.
34ರ ಹರೆಯದ ಬಲಗೈ ಬ್ಯಾಟ್ಸ್‌ಮನ್ ಹಾಗೂ ಬಲಗೈ ಮಧ್ಯಮ ವೇಗಿ ವ್ಯಾಟ್ಸನ್ ಹದಿನಾಲ್ಕು ವರ್ಷಗಳ ಕ್ರಿಕೆಟ್ ಬದುಕಿನಿಂದ ನಿವೃತ್ತರಾಗುವ ನಿರ್ಧಾರವನ್ನು ಮೊಹಾಲಿಯಲ್ಲಿ ಪ್ರಕಟಿಸಿದರು.
ಭಾರತದಲ್ಲಿ ನಡೆಯುತ್ತಿರುವ ಟ್ವೆಂಟಿ-20 ವಿಶ್ವಕಪ್ ಮುಗಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗುವುದಾಗಿ ವ್ಯಾಟ್ಸನ್ ತಿಳಿಸಿದರು.
ಮಾ.24, 2002ರಲ್ಲಿ ಸೆಂಚೂರಿಯನ್‌ನಲ್ಲಿ ದಕ್ಷಿಣ ಆಫ್ರಿಕದ ವಿರುದ್ಧದ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡದಲ್ಲಿ ಆಡುವ ಮೂಲಕ ತನ್ನ 20ರ ಹರೆಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ಕಾಲಿರಿಸಿದ್ದ ವ್ಯಾಟ್ಸನ್ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹದಿನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿರುವ ಬೆನ್ನಲ್ಲೇ ನಿವೃತ್ತಿಯ ನಿರ್ಧಾರ ಕೈಗೊಂಡರು.
ಕಳೆದ ವರ್ಷ ಆ್ಯಶಸ್ ಸರಣಿ ಮುಗಿದಾಗ ಟೆಸ್ಟ್ ಕ್ರಿಕೆಟ್‌ನಿಂದ ವ್ಯಾಟ್ಸನ್ ದೂರ ಸರಿದಿದ್ದರು.
ವ್ಯಾಟ್ಸನ್ 59 ಟೆಸ್ಟ್‌ಗಳಲ್ಲಿ 4 ಶತಕ ಮತ್ತು 24 ಅರ್ಧಶತಕಗಳನ್ನು ಒಳಗೊಂಡ 3,731 ರನ್ ಗಳಿಸಿದ್ದಾರೆ.190 ಏಕದಿನ ಪಂದ್ಯಗಳಲ್ಲಿ 9 ಶತಕಗಳನ್ನು ಒಳಗೊಂಡ 5,757 ರನ್ ಮತ್ತು 56 ಟ್ವೆಂಟಿ-20 ಪಂದ್ಯಗಳಲ್ಲಿ 1 ಶತಕ ಒಳಗೊಂಡ 1,400 ರನ್ ಗಳಿಸಿದ್ದರು.
ಕಳೆದ ಸೆಪ್ಟಂಬರ್‌ನಿಂದ ವ್ಯಾಟ್ಸನ್ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಿರಲಿಲ್ಲ.‘‘ ಧರ್ಮಶಾಲಾದಲ್ಲಿ ಎದ್ದ ತಕ್ಷಣ ನನಗೆ ನಿವೃತ್ತಿಗೆ ಇದು ಒಳ್ಳೆಯ ಸಮಯ ಎನ್ನುವ ಆಲೋಚನೆ ಬಂತು. ಆಸ್ಟ್ರೇಲಿಯ ಕ್ರಿಕೆಟ್ ತಂಡದಲ್ಲಿ ಇದ್ದಷ್ಟು ದಿನ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿರುವೆ. ಕ್ರಿಕೆಟ್ ಖುಶಿಯನ್ನು ಅನುಭವಿಸಿರುವೆ. ’’ ಎಂದು ಹೇಳಿದ್ಧಾರೆ.
ಆಗಾಗ ಗಾಯದ ಸಮಸ್ಯೆ ಎದುರಿಸುತ್ತಿದ್ದ ವ್ಯಾಟ್ಸನ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದರು. ಐಸಿಸಿ ಟ್ವೆಂಟಿ-20 ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ತಲುಪಿದ್ದರು. ಎರಡು ವರ್ಷಗಳ ಕಾಲ ಏಕದಿನ ಕ್ರಿಕೆಟ್‌ನಲ್ಲಿ ನಂ.1 ಆಲ್‌ರೌಂಡರ್ ಆಗಿದ್ದರು. ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 10,000 ರನ್ ಮತ್ತು 250 ವಿಕೆಟ್ ಪಡೆದಿರುವ ವಿಶ್ವದ ಏಳನೆ ಆಟಗಾರನಾಗಿ ದಾಖಲೆ ಬರೆದಿರುವ ವ್ಯಾಟ್ಸನ್ ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು ಮೂರು ಮಾದರಿಯ ಕ್ರಿಕೆಟ್‌ನಲ್ಲಿ ನಾಯಕರಾಗಿ ಮುನ್ನಡೆಸಿದ್ದರು. ಸ್ಟೀವ್ ವಾ, ಕಾರ್ಲ್ ಹೂಪರ್, ಸನತ್ ಜಯಸೂರ್ಯ, ಜಾಕ್ ಕಾಲಿಸ್, ಶಾಹಿದ್ ಅಫ್ರಿದಿ ಮತ್ತು ಕ್ರಿಸ್ ಗೇಲ್ ಈ ಸಾಧನೆ ಮಾಡಿರುವ ವಿಶ್ವದ ಇತರ ಆಟಗಾರರು. ಕಳೆದ ಜನವರಿಯಲ್ಲಿ ಭಾರತ ವಿರುದ್ಧದ ಟ್ವೆಂಟಿ-20 ಪಂದ್ಯದಲ್ಲಿ ನಾಯಕರಾಗಿ ವ್ಯಾಟ್ಸನ್(ಔಟಾಗದೆ 124) ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ್ದರು.
2007 ಮತ್ತು 2015ರ ವಿಶ್ವಕಪ್ ತಂಡದಲ್ಲಿ ಆಡಿದ್ದ ವ್ಯಾಟ್ಸನ್ 2006 ಮತ್ತು 2009ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆರಂಭಿಕ ದಾಂಡಿಗನಾಗಿ ಎರಡೂ ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2009 ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಔಟಾಗದೆ 136 ರನ್ ಮತ್ತು ಫೈನಲ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಔಟಾಗದೆ 105 ರನ್ ದಾಖಲಿಸಿದ್ದರು.
ಆಸ್ಟ್ರೇಲಿಯ ಈ ತನಕ ಟ್ವೆಂಟಿ-20 ವಿಶ್ವಕಪ್ ಪ್ರಶಸ್ತಿ ಜಯಿಸಿಲ್ಲ. ವ್ಯಾಟ್ಸನ್ 2012ರಲ್ಲಿ ಶ್ರೀಲಂಕಾದಲ್ಲಿ ನಡೆದ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದರು. 49.80 ಸರಾಸರಿಯಂತೆ 249 ರನ್ ಮತ್ತು 11 ವಿಕೆಟ್ ಎಗರಿಸುವ ಮೂಲಕ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದರು.








