ಪುಣೆ ಕಾಲೇಜು ವಿವಾದ:200ಕ್ಕೂ ಅಧಿಕ ಜನರ ವಿರುದ್ಧ ದಂಗೆ ಪ್ರಕರಣ ದಾಖಲು

ಪುಣೆ,ಮಾ.24: ಇಲ್ಲಿಯ ಫರ್ಗ್ಯುಸನ್ ಕಾಲೇಜಿನಲ್ಲಿ ಎನ್‌ಸಿಪಿ ಕಾರ್ಯಕರ್ತರು ಹಾಗೂ ಬಿಜೆಪಿ ಯುವಮೋರ್ಚಾ ಮತ್ತು ಎಬಿವಿಪಿ ಕಾರ್ಯಕರ್ತರ ನಡುವಿನ ಘರ್ಷಣೆಗಳಿಗೆ ಸಂಬಂಧಿಸಿದಂತೆ 200ಕ್ಕೂ ಅಧಿಕ ಅಪರಿಚಿತ ವ್ಯಕ್ತಿಗಳ ವಿರುದ್ಧ ದಂಗೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಘರ್ಷಣೆಗಳ ವೇಳೆ ಎನ್‌ಸಿಪಿ ಶಾಸಕ ಜಿತೇಂದ್ರ ಅವ್ಹಾದ್ ಅವರ ಮೇಲೆ ಹಲ್ಲೆಯನ್ನು ನಡೆಸಲಾಗಿತ್ತು.
ಜೆಎನ್‌ಯು ಎಬಿವಿಪಿ ನಾಯಕ ಅಲೋಕ ಸಿಂಗ್ ಅವರ ಉಪಸ್ಥಿತಿಯಲ್ಲಿ ‘ಜೆಎನ್‌ಯುದ ಸತ್ಯ’ವಿಷಯವನ್ನು ಚರ್ಚಿಸಲು ಎಬಿವಿಪಿಯ ಕಾರ್ಯಕ್ರಮದ ವೇಳೆ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದವರ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಕೋರಿ ಕಾಲೇಜಿನ ಪ್ರಾಂಶುಪಾಲ ಆರ್.ಜೆ.ಪರದೇಶಿ ಅವರು ಪುಣೆ ಪೊಲೀಸರಿಗೆ ಪತ್ರವನ್ನು ಬರೆದಿದ್ದರು. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲೆಂದು ಬುಧವಾರ ಕ್ಯಾಂಪಸ್‌ಗೆ ಆಗಮಿಸಿದ್ದ ಅವ್ಹಾದ್ ಮೆಲೆ ಹಲ್ಲೆ ನಡೆದಿತ್ತು.
ಆದರೆ,ಡಾ.ಬಿ.ಆರ್.ಅಂಬೇಡ್ಕರ್ ಅವರ ಮರಿಮೊಮ್ಮಗ ಹಾಗೂ ಮಾಜಿಸಂಸದ ಪ್ರಕಾಶ ಅಂಬೇಡ್ಕರ್ ಅವರ ಪುತ್ರ ಸುಜತ್ ಅಂಬೇಡ್ಕರ್ ಸೇರಿದಂತೆ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ರಾಷ್ಟ್ರವಿರೋಧಿಗಳ ಪಟ್ಟ ಕಟ್ಟುತ್ತಿದ್ದಾರೆಂದು ಹಲವಾರು ದಲಿತ ಸಂಘಟನೆಗಳು ಆರೋಪಿಸಿದ ಬಳಿಕ ಪರದೇಶಿ ಅವರು ತನ್ನ ಹೇಳಿಕೆಯನ್ನು ಹಿಂದೆಗೆದುಕೊಂಡಿದ್ದಾರೆ. ಅದೊಂದು ಮಮುದ್ರಣ ದೋಷವಾಗಿತ್ತು ಎಂದು ಅವರು ಸಮಜಾಯಿಷಿ ನೀಡಿದ್ದಾರೆ.
ಕ್ಯಾಂಪಸ್‌ನ ಮೂಲೆಯಲ್ಲಿ ತನ್ನ ಭಾಷಣ ಮುಗಿಸಿದ ನಂತರ ಅವ್ಹಾದ್ ಮೇಲೆ ಹಲ್ಲೆ ನಡೆದಿದ್ದು,ಅವರ ಕಾರಿನತ್ತ ಕಲ್ಲು ಮತ್ತು ಚಪ್ಪಲಿಗಳನ್ನು ತೂರಲಾಗಿತ್ತು ಎನ್ನಲಾಗಿದೆ. ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿಪ್ರಹಾರವನ್ನೂ ನಡೆಸಿದ್ದರು. ಆದರೆ ತನ್ನ ಮೇಲೆ ಹಲ್ಲೆ ನಡೆದಿರುವುದನ್ನು ನಿರಾಕರಿಸಿರುವ ಅವ್ಹಾದ್, ಅವರಿಗೆ ತನ್ನ ಮೈಯನ್ನು ಮುಟ್ಟಲೂ ಸಾಧ್ಯವಾಗಲಿಲ್ಲ. ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸರು ತನ್ನನ್ನು ಅಲ್ಲಿಂದ ಸುರಕ್ಷಿತವಾಗಿ ಕರೆದೊಯ್ದಿದ್ದರು ಎಂದರು.
ತನ್ಮಧ್ಯೆ ಎಬಿವಿಪಿ ವಕ್ತಾರ ನಿಖಿಲ್ ಕರಮ್‌ಪುರಿ ಅವರು ಘಟನೆಯಲ್ಲಿ ತಮ್ಮ ಕಾರ್ಯಕರ್ತರು ಭಾಗಿಯಾಗಿದ್ದನ್ನು ನಿರಾಕರಿಸಿದ್ದಾರೆ.







