ಹಿಂದು ವಿರೋಧಿ ಕಾರ್ಯಕ್ರಮ ಆಕಾಶವಾಣಿ ವಿರುದ್ಧ ಬಿಜೆಪಿ ಆಕ್ರೋಶ

ತಿರುವನಂತಪುರ,ಮಾ.24: ಕೇರಳದ ತ್ರಿಶ್ಶೂರಿನಲ್ಲಿರುವ ಆಕಾಶವಾಣಿಯ ಪ್ರಾದೇಶಿಕ ಕೇಂದ್ರದಿಂದ ಪ್ರತಿ ನಿತ್ಯ ಪ್ರಸಾರಗೊಳ್ಳುತ್ತಿರುವ ಕಾರ್ಯಕ್ರಮವೊಂದು ಬಿಜೆಪಿಯ ಆಕ್ರೋಶಕ್ಕೆ ಗುರಿಯಾಗಿದೆ. ಈ ಕಾರ್ಯಕ್ರಮವು ಹಿಂದು ದೇವತೆಗಳನ್ನು ಕೆಟ್ಟದಾಗಿ ಬಿಂಬಿಸುತ್ತಿದೆ ಎಂದು ಆರೋಪಿಸಿರುವ ಅದು, ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದೆ.
ಕಾರ್ಯಕ್ರಮದಲ್ಲಿಯ ಹಿಂದು ವಿರೋಧಿ ಅಂಶಗಳನ್ನು ತೆಗೆದು ಹಾಕದಿದ್ದರೆ ಗಂಭೀರ ಪರಿಣಾಮಗಳನ್ನೆದುರಿಸಬೇಕಾಗುತ್ತದೆ ಎಂದು ಸ್ಥಳೀಯ ಬಿಜೆಪಿ ನಾಯಕರೋರ್ವರು ಬೆದರಿಕೆಯೊಡ್ಡಿದ್ದಾರೆ ಎಂದು ಆಕಾಶವಾಣಿಯ ಸಿಬ್ಬಂದಿ ಆರೋಪಿಸಿದ್ದರೆ, ಈ ಕೃತ್ಯದ ಹಿಂದಿರುವವರ ವಿರುದ್ಧ ತಾನು ಶೀಘ್ರವೇ ಮೊಕದ್ದಮೆಯನ್ನು ದಾಖಲಿಸುವುದಾಗಿ ಬಿಜೆಪಿಯು ಹೇಳಿದೆ.
ವಿದ್ವಾಂಸ ಡಾ.ಸಿ.ಎನ್.ಪರಮೇಶ್ವರನ್ ಅವರು ಕಳೆದ ವಾರ ಸಾದರಪಡಿಸಿದ್ದ ‘ಸುಭಾಷಿತಂ’ಕಾರ್ಯಕ್ರಮದಲ್ಲಿ ಪುರಾಣದಲ್ಲಿಯ ದೇವತೆಗಳು ಮತ್ತು ಅಸುರರ ನಡುವಿನ ಯುದ್ಧವನ್ನು ದೇಶದ ಹೊರಗಿನಿಂದ ಬಂದ ಮೇಲ್ವರ್ಗದವರು ಮತ್ತು ಮೂಲನಿವಾಸಿಗಳ ನಡುವಿನ ಹೋರಾಟವೆಂದು ಬಿಂಬಿಸಲಾಗಿತ್ತು.
ಹೆಚ್ಚಿನ ಶ್ರೋತೃಗಳಿರುವ ಈ ಬೆಳಗಿನ ಕಾರ್ಯಕ್ರಮವು ಹಿಂದುಗಳ ದೇವತೆಗಳಾದ ರಾಮ ಮತ್ತು ಕೃಷ್ಣರನ್ನು ಶೋಷಕರೆಂದು ಬಿಂಬಿಸುವ ಮೂಲಕ ಸಮುದಾಯದ ಭಾವನೆಗಳಿಗೆ ನೋವನ್ನುಂಟು ಮಾಡಿದೆ ಎನ್ನುವುದು ಬಿಜೆಪಿಯ ಆರೋಪ.
ಬಿಜೆಪಿ ರಾಜ್ಯ ಕಾರ್ಯದರ್ಶಿ ಬಿ.ಗೋಪಾಲಕೃಷ್ಣನ್ ಅವರು ಆಕಾಶವಾಣಿ ಸಿಬ್ಬಂದಿಗೆ ಬೆದರಿಕೆ ಒಡ್ಡಿದ್ದಾರೆನ್ನಲಾಗಿದ್ದು, ಆ ಬಳಿಕ ವಿವಾದ ಭುಗಿಲ್ಲೆದ್ದಿದೆ. ಆದರೆ ತನ್ನ ವಿರುದ್ಧದ ಆರೋಪವನ್ನು ನಿರಾಕರಿಸಿರುವ ಗೋಪಾಲಕೃಷ್ಣನ್, ತಾನು ಕೇವಲ ವಾಸ್ತವಾಂಶಗಳ ಬಗ್ಗೆ ಪ್ರಶ್ನಿಸಿದ್ದೆ ಎಂದಿದ್ದಾರೆ.
ನಾನು ಕಟ್ಟಾ ಕೃಷ್ಣಭಕ್ತನಾಗಿದ್ದೇನೆ. ಕೃಷ್ಣ ಮತ್ತು ರಾಮ ಭಾರತೀಯರಲ್ಲ,ಅವರು ಹೊರಗಿನಿಂದ ಭಾರತಕ್ಕೆ ಬಂದು ಇಲ್ಲಿಯ ಮೂಲನಿವಾಸಿಗಳನ್ನು ದಮನಿಸಿದವರು ಎಂದು ಯಾರೋ ಹೇಳುತ್ತಿದ್ದರೆ ನಾನು ಸುಮ್ಮನೆ ಕುಳಿತು ಕೇಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಈ ಕಾರ್ಯಕ್ರಮದ ರೆಕಾರ್ಡಿಂಗ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಅವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಯಾವುದೇ ಹಿಂದು ವಿರೋಧಿ ವಿಷಯವಿರಲಿಲ್ಲ ಎಂದು ಆಕಾಶವಾಣಿಯ ನಿಲಯ ನಿರ್ದೇಶಕ ಎಂ.ಎನ್.ರಾಜೀವ ಹೇಳಿದ್ದಾರೆ.







