ಸಚಿವರ ಜಿಲ್ಲಾ ಪ್ರವಾಸಕ್ಕೆ ಒಕ್ಕೊರಲ ಆಗ್ರಹ
ಬರ ಪರಿಹಾರ
ಬೆಂಗಳೂರು, ಮಾ. 24: ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೃಷಿ, ಕಂದಾಯ, ಗ್ರಾಮೀಣಾಭಿವೃದ್ಧಿ, ಇಂಧನ ಹಾಗೂ ತೋಟಗಾರಿಕೆ ಸಚಿವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಖುದ್ದು ಪರಿಸ್ಥಿತಿ ಅವಲೋಕಿಸಿ ಅಗತ್ಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಆಡಳಿತ ಪಕ್ಷದ ಸದಸ್ಯ ಬಸವರಾಜ ರಾಯರೆಡ್ಡಿ ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಬರ ಮತ್ತು ವಿದ್ಯುತ್ ಅಭಾವ ಸಂಬಂಧ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಧಿಕಾರಿಗಳ ಮೇಲೆ ಸರಕಾರ ಯಾವುದೇ ಕಾರಣಕ್ಕೂ ಅವಲಂಬಿಸಬಾರದು. ನಾಲ್ಕೈದು ಮಂದಿ ಸಚಿವರು ಜಿಲ್ಲಾ ಪ್ರವಾಸ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಅತ್ಯಂತ ಭೀಕರ ಸ್ವರೂಪದ ಬರ ಆವರಿಸಿದ್ದು, ಗ್ರಾಮೀಣ ಪ್ರದೇಶದ ಜನತೆ ಕುಡಿಯುವ ನೀರು, ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವು ಒದಗಿಸಲು ರಾಜ್ಯ ಸರಕಾರ ಸಮರೋಪಾದಿಯಲ್ಲಿ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರಕಾರವೂ ಅಗತ್ಯ ನೆರವು ನೀಡಬೇಕೆಂದು ಮನವಿ ಮಾಡಿದರು.
ಇಚ್ಛಾಶಕ್ತಿ ಅಗತ್ಯ: ಬರ ಪರಿಸ್ಥಿತಿ ನಿರ್ವಹಿಸಲು ಆಡಳಿತ ವ್ಯವಸ್ಥೆಗೆ ಇಚ್ಛಾಶಕ್ತಿ ಅಗತ್ಯ. ಆದರೆ, ಅವರಿಗೆ ಇಚ್ಛಾಶಕ್ತಿ, ಆಸಕ್ತಿ, ಕ್ರಿಯಾಶೀಲತೆಯ ‘ಬರ’ ಆವರಿಸಿದೆ. ಸಚಿವರು-ಶಾಸಕರಿಗೂ ಜವಾಬ್ದಾರಿಯ ‘ಬರ’ ಬಂದಿದೆ. ಇಡೀ ಸದನವೇ ಒಗ್ಗೂಡಿ ಬರ ಪರಿಸ್ಥಿತಿ ನಿಭಾಯಿಸಲು ಪಕ್ಷಭೇದ ಮರೆತು ಕೆಲಸ ಮಾಡಬೇಕೆಂದು ಜೆಡಿಎಸ್ ಉಪ ನಾಯಕ ವೈಎಸ್‌ವಿ ದತ್ತ ಸಲಹೆ ನೀಡಿದರು.
ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ವೇಳೆ ಬರ ಪರಿಸ್ಥಿತಿ ಆವರಿಸಿತ್ತು. ಆ ಸಂದರ್ಭದಲ್ಲಿ ಅಧ್ಯಯನಕ್ಕೆ ಸದನ ಸಮಿತಿ ರಚಿಸಿ ಬರ ಪೀಡಿತ ಪ್ರದೇಶಗಳಿಗೆ ಸಮಿತಿ ಖುದ್ದು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು ಎಂದು ಅವರು ನೆನಪಿಸಿದರು.
ಸಾಲ ಮನ್ನಾಕ್ಕೆ ಆಗ್ರಹ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ಕುಡಿಯುವ ನೀರಿಗೆ ಪ್ರತೀ ತಾಲೂಕಿಗೆ ಕನಿಷ್ಠ 10 ಕೋಟಿ ರೂ. ಬಿಡುಗಡೆ ಮಾಡಬೇಕು. ಮೇವು ಬ್ಯಾಂಕ್ ಸ್ಥಾಪಿಸುವುದರ ಜೊತೆಗೆ ಹೋಬಳಿಗೆ ಒಂದು ಗೋಶಾಲೆ ಆರಂಭಿಸಬೇಕು. ಕನಿಷ್ಠ 2ಸಾವಿರ ಕೋಟಿ ರೂ.ಬರ ಪರಿಹಾರ ಕಾರ್ಯಗಳಿಗೆ ಸರಕಾರ ಒದಗಿಸಬೇಕೆಂದು ಗೋವಿಂದ ಕಾರಜೋಳ ಆಗ್ರಹಿಸಿದರು.
‘ಬೇಡುವುದೇ (ಕೇಂದ್ರಕ್ಕೆ ಹೆಚ್ಚಿನ ನೆರವು ನೀಡಲು ಮನವಿ ಮಾಡಿ)ಭಿಕ್ಷೆ, ಅದನ್ನು ಸರಿಯಾಗಿ ಬೇಡಿ.’
-ಗೋವಿಂದ ಕಾರಜೋಳ, ಬಿಜೆಪಿ ಸದಸ್ಯ
‘ರೀ ಗೋವಿಂದ ಕಾರಜೋಳ ನಿಮ್ಮ ಹೆಸರಿನಲ್ಲೇ ‘ಕಾರಜೋಳ’ ಅಡಗಿದೆ, ನಮ್ಮ ಪಾಲಿಗೆ ನೀವು ಸ್ವಲ್ಪ ಸಿಹಿಜೋಳನೂ ಆಗಿ.’
-ವಿ.ಶ್ರೀನಿವಾಸ ಪ್ರಸಾದ್, ಕಂದಾಯ ಸಚಿವ





