ಭಯಬೀಳಿಸುವ ಸತ್ಯ: ಮನೆ ಬಳಕೆಯಲ್ಲಿ ಚರಂಡಿ ನೀರು

ನಾವು ಉಪಯೋಗಿಸುವ ಶೇಕಡಾ ಎಂಬತ್ತು ನೀರು ಕಲುಷಿತಗೊಂಡಿದೆ ಮತ್ತು ಇದರಲ್ಲಿ ಶೇಕಡಾ 80 ಚರಂಡಿಯಿಂದಲೇ ಬರುತ್ತದೆ.
ಸಂಸ್ಕರಿಸದ ಚರಂಡಿ ಕಲ್ಮಶಗಳು ಸಂಸ್ಕರಿಸಿದ ಚರಂಡಿ ತ್ಯಾಜ್ಯ ನೀರಿನೊಂದಿಗೆ ಸೇರಿ ಯಮುನಾ ನದಿಯನ್ನು ಸೇರುತ್ತಿದೆ ಎಂದು ಗುರ್ಗಾಂವ್‌ನ ಮುನಿಸಿಪಲ್ ಕಾರ್ಪೊರೇಶನ್ ರಾಷ್ಟ್ರೀಯ ಹಸಿರು ಪೀಠದ ಮುಂದೆ ಒಪ್ಪಿಕೊಂಡಿದೆ. ದೇಶದಲ್ಲಿ ಅತೀಹೆಚ್ಚು ಕಲುಷಿತಗೊಂಡಿರುವ ಮೇಲ್ಮೆಜಲದ ಹಲವು ಮೂಲಗಳಲ್ಲಿ ದಿಲ್ಲಿ ಮೂಲಕ ಹರಿಯುವ ಕೊಳಕಿನಿಂದ ನಾರುವ ಯಮುನಾ ನದಿಯೂ ಒಂದು. ಭಾರತದ ಮೇಲ್ಮೆಜಲರಾಶಿಯಲ್ಲಿ ಶೇಕಡಾ ಎಂಬತ್ತು ಕಲುಷಿತಗೊಂಡಿದ್ದು ಅದರಲ್ಲಿ ಬಹುತೇಕ ಕಲ್ಮಶಗಳು ಚರಂಡಿಗಳಿಂದ ಬರುತ್ತವೆ ಎಂದು ಸರಕಾರಿ ಸಂಸ್ಥೆಗಳು ಅಂದಾಜಿಸುತ್ತವೆ.
ಈ ಕಲುಷಿತತೆಯ ಪರಿಣಾಮವು ಮಾನ್ಸೂನ್ ಆರಂಭವಾದ ಕೂಡಲೇ ಅನುಭವಕ್ಕೆ ಬರುತ್ತದೆ. ಈ ವರ್ಷ ಮಳೆಯು ಆರಂಭವಾಗುತ್ತಿದ್ದಂತೆ, ಒಡೆದ ನೀರಿನ ಪೈಪ್‌ಗಳು ಮತ್ತು ನೆರೆಯ ಪರಿಣಾಮವಾಗಿ ಮಲಮಿಶ್ರಿತ ಕೊಳಚೆಗಳು ದಿನಬಳಕೆಯ ನೀರಿನೊಂದಿಗೆ ಸೇರಿ, ನೀರಿನಿಂದ ಹರಡುವ ಕಾಯಿಲೆಗಳಾದ ಅತಿಸಾರ ಮತ್ತು ಕಾಲರಾ ಇತ್ಯಾದಿ ದಿಲ್ಲಿ, ಪುಣೆ, ವಾರಣಾಸಿ ಮತ್ತು ಚೆನ್ನೆಯಲ್ಲಿ ಹರಡಿತ್ತು. ಈ ಘಟನೆ ಪ್ರತೀವರ್ಷವೂ ಪುನರಾವರ್ತನೆಯಾಗುತ್ತದೆ ಯಾಕೆಂದರೆ ದೇಶದ ಉದ್ದಗಲಕ್ಕೂ ನೀರಿನ ಪೈಪ್‌ಗಳು ಒಡೆಯುತ್ತಲೇ ಇರುತ್ತದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2009ರಲ್ಲಿ ಮಾಡಿದ ಅಂದಾಜಿನ ಪ್ರಕಾರ ಪ್ರಮುಖ ನಗರಗಳು ಮತ್ತು ಪಟ್ಟಣಗಳು ಜೊತೆಯಾಗಿ ಪ್ರತಿದಿನ 38 ಬಿಲಿಯನ್ ಲೀಟರ್ ಕಲ್ಮಶವನ್ನು ಉತ್ಪಾದಿಸುತ್ತವೆ ಮತ್ತು ಅದರಲ್ಲಿ ಕೇವಲ ಶೇಕಡಾ 30 ಮಾತ್ರ ಶೇಖರಣೆ ಮಾಡಲಾಗುತ್ತದೆ. ಇದರಲ್ಲಿ ಶೇಕಡಾ 20ಕ್ಕಿಂತಲೂ ಕಡಿಮೆ ಕಲ್ಮಶವನ್ನು ಸಂಸ್ಕರಿಸಲಾಗುತ್ತದೆ ಯಾಕೆಂದರೆ ನಮ್ಮ ದೇಶದಲ್ಲಿ ಸಂಸ್ಕರಣಾ ಸಾಮರ್ಥ್ಯ ಇರುವುದೇ ಅಷ್ಟು. ಉಳಿದ ಕಲ್ಮಶಗಳನ್ನು ನದಿ, ಸರೋವರ, ಸಮುದ್ರ, ಬಾವಿ, ತೊರೆ ಹೀಗೆ ಜಲಮೂಲಗಳಿಗೆ ಬಿಡಲಾಗುತ್ತದೆ.
ವಾಟರ್ ಏಡ್ ಇಂಡಿಯಾ ಎಂಬ ಸಂಸ್ಥೆ ತಯಾರಿಸಿರುವ ಸದ್ಯದಲ್ಲೇ ಬಿಡುಗಡೆಯಾಗಲಿರುವ ಮಲಕಲ್ಮಶ ನಿರ್ವಹಣೆ ಬಗೆಗಿನ ವರದಿಯು ಭಾರತದ ಚರಂಡಿ ವ್ಯವಸ್ಥೆಯಲ್ಲಿನ ಬಿರುಕುಗಳನ್ನು ಎತ್ತಿತೋರಿಸುತ್ತದೆ. ಹದಿನೇಳು ಮಿಲಿಯನ್ ಅಥವಾ ಸರಿಸುಮಾರು ಶೇಕಡಾ 20 ನಗರದ ಮನೆಗಳಲ್ಲಿ ಶೌಚದ ವ್ಯವಸ್ಥೆಯೇ ಇಲ್ಲ ಎಂದು ವರದಿ ಹೇಳುತ್ತದೆ. ಶೌಚದ ವ್ಯವಸ್ಥೆಯಿರುವ ಮನೆಗಳಲ್ಲಿ ಕೇವಲ ಶೇಕಡಾ 32 ಮಾತ್ರ ಚರಂಡಿಯೊಂದಿಗೆ ಸಂಪರ್ಕ ಹೊಂದಿದೆ, ಉಳಿದವು ಸೆಪ್ಟಿಕ್ ಟ್ಯಾಂಕ್ ಅಥವಾ ಗುಂಡಿ ಶೌಚಾಲಯಗಳನ್ನು ಅವಲಂಬಿಸಿರುವುದಾಗಿದೆ. ತಲೆಕೆಡಿಸಿಕೊಳ್ಳಲು ಇದಕ್ಕೂ ಹೆಚ್ಚಿನ ಕಾರಣಗಳಿವೆ. ಐದು ಲಕ್ಷಕ್ಕೂ ಅಕ ಗುಂಡಿ ಶೌಚಾಲಯಗಳು ನಿರ್ಮಲವಾಗಿಲ್ಲ, ಅವುಗಳು ಕೇವಲ ತೆರೆದ ಗುಂಡಿಗಳಾಗಿವೆ ಅಷ್ಟೇ. ಒಂಬತ್ತು ಲಕ್ಷಕ್ಕೂ ಅಕ ಶೌಚಾಲಯಗಳು ನೇರವಾಗಿ ಚರಂಡಿಗಳಲ್ಲಿ ಖಾಲಿಯಾಗುತ್ತವೆ. ನಗರ ಪ್ರದೇಶದಲ್ಲಿ ಖಾಸಗಿ ಶೌಚಾಲಯ ವ್ಯವಸ್ಥೆಯಿಲ್ಲದ ಶೇಕಡಾ 18 ಮನೆಗಳಲ್ಲಿ ಶೇಕಡಾ 12 ಮನೆಗಳ ಜನರು ಶೌಚಕ್ಕೆ ಬಯಲನ್ನು ಅವಲಂಬಿಸಿದ್ದಾರೆ.
ಕತೆ ಇನ್ನೂ ಒಗಟಾಗುತ್ತಾ ಸಾಗುತ್ತದೆ. ಚರಂಡಿಗಳು ಇರುವ ಪ್ರದೇಶಗಳಲ್ಲಿ ಒಂದೋ ಅವುಗಳು ಸೋರುತ್ತವೆ ಅಥವಾ ತುಂಬಿ ತುಳುಕುತ್ತಿವೆ. ವರ್ಷಗಳ ಅಂತರದಲ್ಲಿ ಶೌಚಗುಂಡಿಯನ್ನು ಸ್ವಚ್ಛಗೊಳಿಸುವ ಬದಲು ಮಲ ಅದರಲ್ಲೇ ಶೇಖರಣೆಯಾಗಲು ಬಿಡುವ ಕಾರಣ ನಿಧಾನವಾಗಿ ಅದು ಅಂತರ್ಜಲದ ಜೊತೆ ಸೇರಿಕೊಳ್ಳುತ್ತದೆ. ಈ ಗುಂಡಿಗಳನ್ನು ಸ್ವಚ್ಛಗೊಳಿಸುವ ಸಂದರ್ಭಗಳಲ್ಲಿ ಕಪ್ಪು ಕಲ್ಮಶಯುಕ್ತ ನೀರನ್ನು ಗದ್ದೆಗೆ ಅಥವಾ ನೀರಿನ ಮೂಲಗಳಿಗೆ ಹರಿಸುವ ಕಾರಣ ಅಲ್ಲೂ ಶುದ್ಧನೀರು ಕಲುಷಿತಗೊಳ್ಳುತ್ತದೆ. ವಾಟರ್ ಏಡ್ ಇಂಡಿಯಾ ವರದಿಯು ಆರು ರಾಜ್ಯಗಳ ನೈರ್ಮಲ್ಯೀಕರಣ ವ್ಯವಸ್ಥೆಯನ್ನು ಗುರುತಿಸುತ್ತದೆ ಮತ್ತು ಎಷ್ಟು ತ್ಯಾಜ್ಯನೀರನ್ನು ಸಂಸ್ಕರಿಸದೆ ಬಿಡಲಾಗುತ್ತಿದೆ ಎಂಬುದನ್ನು ತಿಳಿಸುತ್ತದೆ. ಉದಾಹರಣೆಗೆ, ದಿಲ್ಲಿಯು ದಿನವೊಂದಕ್ಕೆ 4,346 ಮಿಲಿಯನ್ ಲೀಟರ್ ನೀರನ್ನು ಉಪಯೋಗಿಸುತ್ತದೆ ಮತ್ತು ಅದರಲ್ಲಿ ಶೇಕಡಾ 87 ತ್ಯಾಜ್ಯ ರೂಪದಲ್ಲಿ ವಾಪಸಾಗುತ್ತದೆ. ಆದರೆ ದಿಲ್ಲಿಯಲ್ಲಿ ಉತ್ಪನ್ನವಾಗುವ ಒಟ್ಟಾರೆ ತ್ಯಾಜ್ಯನೀರಿನಲ್ಲಿ ಕೇವಲ 61 ಶೇಕಡಾವನ್ನು ಮಾತ್ರ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಮಹಾರಾಷ್ಟ್ರದಲ್ಲಿರುವ 51 ಮೊದಲ ದರ್ಜೆ ನಗರಗಳು ದಿಲ್ಲಿಗಿಂತ ಮೂರುಪಟ್ಟು ಹೆಚ್ಚು ನೀರನ್ನು ಬಳಸುತ್ತವೆ ಮತ್ತು ಅದರಲ್ಲಿ 80 ಶೇಕಡಾ ತ್ಯಾಜ್ಯವಾಗಿ ವಾಪಸಾಗುತ್ತದೆ. ಇದರಲ್ಲಿ ಅರ್ಧಕ್ಕಿಂತಲೂ ಕಡಿಮೆ ತ್ಯಾಜ್ಯನೀರನ್ನು ಸಂಸ್ಕರಿಸಲಾಗುತ್ತದೆ. ಈ ಅಂಕಿಅಂಶಗಳು ಎರಡನೆ ದರ್ಜೆ ನಗರಕ್ಕೆ ಬಂದಾಗ ಇನ್ನೂ ಕೆಟ್ಟದಾಗಿದೆ.
2008ರಲ್ಲಿ ರಾಷ್ಟ್ರೀಯ ನಗರ ನೈರ್ಮಲ್ಯೀಕರಣ ನೀತಿಯನ್ನು ರಚಿಸಿದರೂ ಮತ್ತು ಚರಂಡಿ ಜಾಲಕ್ಕಾಗಿ ಹಲವು ಸಾವಿರ ಕೋಟಿ ಹಣವನ್ನು ರಾಜ್ಯಗಳು ಖರ್ಚು ಮಾಡಿದರೂ ಕಳೆದ ಐದು ವರ್ಷಗಳಲ್ಲಿ ಈ ಸಮಸ್ಯೆ ಕೆಟ್ಟದಾಗಿ ಬೆಳೆಯುತ್ತಿದೆ. ಸಿಪಿಸಿಬಿ ವರದಿಯ ಪ್ರಕಾರ 2009ರಲ್ಲಿ 127 ಇದ್ದ ಕಲುಷಿತ ನದಿಗಳ ಸಂಖ್ಯೆ 275ಕ್ಕೇರಿದೆ ಮತ್ತು 302 ಕಲುಷಿತ ನದಿಗಳು ಇವೆಲ್ಲವನ್ನೂ ಸೇರಿಕೊಳ್ಳುತ್ತದೆ. ಮಂಡಳಿಯ ಪ್ರಕಾರ ಈ ಕಲುಷಿತ ನದಿಗಳ ದಡಗಳಲ್ಲಿರುವ 650 ನಗರಗಳು ಪ್ರತೀದಿನ 62,000 ಮಿಲಿಯನ್ ಲೀಟರ್ ಕಲ್ಮಶವನ್ನು ಉತ್ಪಾದಿಸುತ್ತವೆ ಮತ್ತು ಪ್ರತಿದಿನ ಅವುಗಳು ಸಂಸ್ಕರಿಸಬಲ್ಲ ಸಾಮರ್ಥ್ಯ ಕೇವಲ 38,000 ಮಿಲಿಯನ್ ಲೀಟರ್‌ಗಳು ಮಾತ್ರ.
ವಾಟರ್ ಏಡ್ ವರದಿಯು ಚರಂಡಿ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ರಾಷ್ಟ್ರೀಯ ಕಟ್ಟಡ ಸಂಕೇತವನ್ನು ಅನುಷ್ಠಾನಕ್ಕೆ ತರುವುದು, ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನಡೆಸುವುದು ಮತ್ತು ಚರಂಡಿ ಸಂಸ್ಕರಣಾ ಘಟಕಗಳನ್ನು ವಿಕೇಂದ್ರೀಕರಣಗೊಳಿಸಬೇಕು ಎಂದು ಸಲಹೆ ನೀಡುತ್ತದೆ. ನೀರಿನ ತಜ್ಞರು ನದಿಗಳು ಪುನರುತ್ಥಾನಗೊಳ್ಳುವ ಅವುಗಳು ಸರಾಗವಾಗಿ ಹರಿಯಲು ಬಿಡಬೇಕು ಎಂದು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಹಾಗಾಗಿ ಈ ಕ್ಷಣದ ಸಂತೋಷದ ಸುದ್ದಿಯೆಂದರೆ ಜಲ ಸಂಪನ್ಮೂಲ ಸಚಿವೆಯಾದ ಉಮಾ ಭಾರತಿಯವರು ಗಂಗಾ ನದಿಯ ಹರಿವಿಗೆ ತಡೆಯಾಗುವಂತಹ ಯಾವುದೇ ಅಣೆಕಟ್ಟಿನ ನಿರ್ಮಾಣಕ್ಕೆ ಅನುಮತಿ ನೀಡುವುದಿಲ್ಲ ಎಂದು ಮಂಗಳವಾರ ಘೋಷಿಸಿರುವುದು. (ಕೃಪೆ: scroll.in)







