ಹೋಳಿ ಹಬ್ಬದ ವೇಳೆ ನೀರು ಎರಚಿದ್ದನ್ನು ವಿರೋಧಿಸಿದ ನೈಜೀರಿಯಾ ಪ್ರಜೆಗಳಿಗೆ ಹಲ್ಲೆ
ಹೊಸದಿಲ್ಲಿ,ಮಾ.24: ಪಶ್ಚಿಮ ದಿಲ್ಲಿಯ ಉತ್ತಮ ನಗರ ಪ್ರದೇಶದಲ್ಲಿ ಹೋಳಿ ಆಚರಣೆ ಸಂದರ್ಭ ತಮ್ಮ ಮೇಲೆ ನೀರು ತುಂಬಿದ್ದ ಬಲೂನನ್ನು ಎಸೆದಿದ್ದನ್ನು ವಿರೋಧಿಸಿ ಬಾಲಕನೋರ್ವನನ್ನು ಬೈದ ಇಬ್ಬರು ನೈಜೀರಿಯಾ ಪ್ರಜೆಗಳ ಮೇಲೆ ಯುವಕರ ತಂಡವೊಂದು ಕ್ರಿಕೆಟ್ ಮತ್ತು ಬೇಸ್‌ಬಾಲ್ ಬ್ಯಾಟುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ರವಿವಾರ ಈ ಘಟನೆ ನಡೆದಿದ್ದು,ಹಿರಿಯ ಅಧಿಕಾರಿಗಳ ಮಧ್ಯಪ್ರವೇಶದ ಬಳಿಕವೇ ಸೋಮವಾರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಹಲ್ಲೆಗೊಳಗಾದವರ ಪೈಕಿ ಎವ್ರಿರೆ ಇಸಾಕ್ ಗುಲ್‌ಮೊಹರ್ ಬಾಗ್‌ನ ಫುಟ್ಬಾಲ್ ಕ್ಲಬ್‌ವೊಂದರಲ್ಲಿ ಕೋಚ್ ಆಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಭಾರತದಲ್ಲಿ ವಾಸವಾಗಿರುವ ಅವರು ಪ್ರಮುಖ ಫುಟ್ಬಾಲ್ ಕ್ಲಬ್‌ಗಳ ಪರ ಆಡಿದ್ದಾರೆ.
ಘಟನೆಯಿಂದ ಆಘಾತಗೊಂಡಿರುವ ಅವರಿಬ್ಬರೂ ದ್ವಾರಕಾದಲ್ಲಿರುವ ತಮ್ಮ ನಿವಾಸಕ್ಕೆ ವಾಪಸಾಗದೇ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ದ್ವಾರಕಾದಲ್ಲಿ ಬಾಡಿಗೆಮನೆಯಲ್ಲಿ ವಾಸವಿದ್ದೇನೆ. ಜನರ ಜನಾಂಗೀಯ ನಿಂದೆಗಳು ನನಗೆ ಅಭ್ಯಾಸವಾಗಿಬಿಟ್ಟಿವೆ. ನಾನು ಅವುಗಳನ್ನು ಸದಾ ಕಡೆಗಣಿಸುತ್ತಲೇ ಬಂದಿದ್ದೇನೆ. ಆದರೆ ರವಿವಾರ ಸಂಭವಿಸಿದ್ದು ಜನಾಂಗೀಯ ವಾದವನ್ನೂ ಮೀರಿದೆ. ನಮಗೆ ಬಿದ್ದ ಏಟುಗಳಿಂದಾಗಿ ನಾವು ಸತ್ತೇ ಹೋಗಬಹುದಿತ್ತು, ಹೇಗೋ ಬದುಕುಳಿದಿದ್ದೇವೆ ಎಂದು ಇಸಾಕ್ ಸುದ್ದಿಗಾರರಿಗೆ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಯಾರನ್ನೂ ಬಂಧಿಸಿಲ್ಲ.







