ಹೈದರಾಬಾದ್ ವಿವಿ: ಕರ್ತವ್ಯಕ್ಕೆ ಮರಳಿದ ಮುಷ್ಕರ ನಿರತ ಬೋಧಕೇತರ ಸಿಬ್ಬಂದಿ
ಹೈದರಾಬಾದ್,ಮಾ.24: ವಿದ್ಯಾರ್ಥಿಗಳ ಒಂದು ಗುಂಪು ಕುಲಪತಿ ಅಪ್ಪಾರಾವ್ ಪೊಡಿಲೆ ಅವರ ಪುನರಾಗಮನದ ವಿರುದ್ಧ ಅವರ ಅಧಿಕೃತ ನಿವಾಸದಲ್ಲಿ ನಡೆಸಿದ್ದ ದಾಂಧಲೆಯನ್ನು ಮತ್ತು ತಮ್ಮ ಮೇಲಿನ ಹಲ್ಲೆಯನ್ನು ವಿರೋಧಿಸಿ ಮುಷ್ಕರದಲ್ಲಿ ತೊಡಗಿದ್ದ ಹೈದರಾಬಾದ್ ಕೇಂದ್ರೀಯ ವಿವಿಯ ಬೋಧಕೇತರ ಸಿಬ್ಬಂದಿ ಕ್ಯಾಂಪಸ್‌ನಲ್ಲಿ ಪರಿಸ್ಥಿತಿ ಶಾಂತಿಯುತವಾಗಿರುವ ಹಿನ್ನೆಲೆಯಲ್ಲಿ ಗುರುವಾರ ತಮ್ಮ ಕರ್ತವ್ಯಕ್ಕೆ ಮರಳಿದ್ದಾರೆ.
ಕುಲಪತಿಯನ್ನು ಬೆಂಬಲಿಸಿ ಮುಷ್ಕರದ ಅಂಗವಾಗಿ ಬಾಣಸಿಗರು ವಿದ್ಯಾರ್ಥಿಗಳ ಮೆಸ್ ಅನ್ನು ಮುಚ್ಚಿದ ಬಳಿಕ ವಿದ್ಯಾರ್ಥಿಗಳು ಬುಧವಾರ ಬಯಲು ಪಾಕಶಾಲೆಯನ್ನು ಸ್ಥಾಪಿಸಿಕೊಂಡಿದ್ದರು. ಗುರುವಾರ ಈ ಬಾಣಸಿಗರು ತಮ್ಮ ಕೆಲಸಕ್ಕೆ ಹಾಜರಾಗಿದ್ದಾರೆ.
ತನ್ಮಧ್ಯೆ,ಕುಲಪತಿಯವರ ನಿವಾಸದಲ್ಲಿ ದಾಂಧಲೆ ಮತ್ತು ಪೊಲೀಸ್ ಸಿಬ್ಬಂದಿಯತ್ತ ಕಲ್ಲು ತೂರಾಟ ಘಟನೆಗಳಿಗೆ ಸಂಬಂಧಿಸಿದಂತೆ 25 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ಬುಧವಾರ ಬಂಧಿಸಲಾಗಿದ್ದು,ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪೊಡಿಲೆ ಅವರನ್ನು ತಕ್ಷಣ ವಜಾಗೊಳಿಸಬೇಕು ಮತ್ತು ಕುಲಪತಿಯ ನಿವಾಸದ ಮೇಲೆ ದಾಳಿಗೆ ಸಂಬಂಧಿಸಿದಂತೆ ಬಂಧಿತರನ್ನು ಬಿಡುಗಡೆಗೊಳಿಸಬೇಕು ಎಂಬ ಬೇಡಿಕೆಗಳನ್ನಿಟ್ಟುಕೊಂಡು ಹಲವಾರು ವಿದ್ಯಾರ್ಥಿಗಳೊಂದಿಗೆ ವಿವಿಯ ಎದುರು ಧರಣಿ ಪ್ರತಿಭಟನೆಯನ್ನು ನಡೆಸುತ್ತಿದ್ದ ರೋಹಿತ್ ವೇಮುಲಾರ ತಾಯಿ ರಾಧಿಕಾ ಅವರು ಅಧಿಕಾರಿಗಳು ಕ್ಯಾಂಪಸ್‌ನಲ್ಲಿ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ ನಂತರ ಬುಧವಾರ ತಡರಾತ್ರಿ 11:15ರ ಸುಮಾರಿಗೆ ಪ್ರತಿಭಟನೆಯನ್ನು ಹಿಂದೆಗೆದುಕೊಂಡಿದ್ದಾರೆ.





