ಚುನಾವಣೆಯಲ್ಲಿ ಹಣಬಲ ಬಳಕೆಗೆ ತಡೆ: ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಹೈಕೋರ್ಟ್ ಸಲಹೆ

ಹೊಸದಿಲ್ಲಿ, ಮಾ.24: ಚುನಾವಣೆಗಳಲ್ಲಿ ಹಣಬಲದ ದುರುಪಯೋಗ ತಡೆಯಲು ಸರಕಾರವು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ದಿಲ್ಲಿ ಹೈಕೋರ್ಟ್ ಬುಧವಾರ ಹೇಳಿದೆ. ನಾಲ್ಕು ರಾಜ್ಯಗಳು ಕೇಂದ್ರಾಡಳಿತದ ಪುದುಚೇರಿಗಳಲ್ಲಿ ಸದ್ಯವೇ ಚುನಾವಣೆಗಳು ನಡೆಯಲಿವೆ.
ರಾಜಕೀಯ ಪಕ್ಷಗಳು ಖರ್ಚು ಮಾಡುವ ಹೆಚ್ಚಿನ ಸಾರ್ವಜನಿಕ ನಿಧಿಗಳ ‘ಲೆಕ್ಕ ಸಿಗುವುದಿಲ್ಲ’ ಎಂದು ಬೆಟ್ಟುಮಾಡಿದ ನ್ಯಾಯಮೂರ್ತಿ ಎಸ್. ಮುರಳಿಧರ್ ನೇತೃತ್ವದ ಪೀಠವೊಂದು , ಹಣದ ಶಕ್ತಿಯು ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಳನ್ನು ನಡೆಸುವ ದಾರಿಗೆಡಿಸದಂತೆ ಖಚಿತಪಡಿಸಲು ಕಾನೂನು ಆಯೋಗದ ಶಿಫಾರಸುಗಳಿಗೆ ಸರಕಾರ ಹಾಗೂ ಸಂಸತ್ ಗಂಭೀರ ಮತ್ತು ತುರ್ತು ಲಕ್ಷ ನೀಡಬೇಕೆಂದು ತಿಳಿಸಿದೆ.
ಪಕ್ಷವು ಪಡೆದಿರುವ ‘ಸ್ವ ಇಚ್ಛೆಯ’ ದೇಣಿಗೆಗಳಿಗೆ 1994-95ನೆ ವೌಲ್ಯಮಾಪನ ವರ್ಷಕ್ಕೆ ಆದಾಯತೆರಿಗೆ ವಿನಾಯಿತಿ ನೀಡುವಂತೆ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯೊಂದನ್ನು ನ್ಯಾಯಪೀಠ ತಳ್ಳಿ ಹಾಕಿತು.
ಚುನಾವಣಾ ಪ್ರಕ್ರಿಯೆಯಲ್ಲಿ ಧನ ಬಲದ ಪ್ರಭಾವವನ್ನು ತಡೆಯಲು ಪರಿಣಾಮಕಾರಿ ಕಾನೂನು ಕ್ರಮಗಳು ಅಗತ್ಯವೆಂಬುದನ್ನು ಈ ಪ್ರಕರಣ ತೋರಿಸುತ್ತಿದೆಯೆಂದು ಅದು ಅಭಿಪ್ರಾಯಿಸಿತು.
ರಾಜಕೀಯ ಪಕ್ಷಗಳು ನಮ್ಮ ಪ್ರಜಾಪ್ರಭುತ್ವದ ಅವಶ್ಯ ಅಂಗಗಳಾಗಿವೆ. ಅವುಗಳು ಅಪಾರ ಮೊತ್ತದ ಹಣದ ವ್ಯವಹಾರ ನಡೆಸುತ್ತಿವೆ. ಆದರೆ, ಹೆಚ್ಚಿನದಕ್ಕೆ ಲೆಕ್ಕವೇ ಇರುವುದಿಲ್ಲ. ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವುದಕ್ಕೆ ರಾಜಕೀಯ ಪಕ್ಷಗಳ ಲೆಕ್ಕ ಪತ್ರಗಳ ಸೂಕ್ತ ತಪಾಸಣೆ ಅಗತ್ಯ ಹಾಗೂ ನಿರ್ಣಾಯಕವಾಗಿದೆಯೆಂದು ಪೀಠ ಸ್ಟಷ್ಟಪಡಿಸಿತು.
ಇದು ಸಂಪೂರ್ಣವಾಗಿ, ರಾಜಕೀಯ ಪಕ್ಷಗಳ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ತುಂಬುತ್ತದೆ. ಈ ಮೂಲಕ ಪ್ರಜಾಪ್ರಭುತ್ವವನ್ನು ಬಲಗೊಳಿಸುತ್ತದೆ ಹಾಗೂ ಆಳಗೊಳಿಸುತ್ತದೆಂದುಹೇಳಿದೆ ಪೀಠ, ರಾಜಕೀಯ ಪಕ್ಷಗಳ ಲೆಕ್ಕ ಪತ್ರಗಳನ್ನು ಸೂಕ್ತವಾಗಿ ತಪಾಸಣೆ ಮಾಡುವುದು ಅಗತ್ಯವೆಂದಿತು.
ಒಂದು ರಾಜಕೀಯ ಪಕ್ಷದ ಒಟ್ಟು ಸಂಗ್ರಹದ (ಚೆಕ್ ಯಾ ನಗದು)ಸ ಶೇ.20ರಷ್ಟು ಅಥವಾ ರೂ.20 ಕೋಟಿ- ಯಾವುದು ಕಡಿಮೆಯೋ ಅದು-ಮಾತ್ರ ಅನಾಮಧೇಯವಾಗಿ (ಗುಪ್ತವಾಗಿ) ಇರಬಹುದೆಂಬ ಕಾನೂನು ಆಯೋಗದ, ಚುನಾವಣಾ ಸುಧಾರಣೆಯ ಕುರಿತ 255ನೆ ವರದಿಯನ್ನು ಪರಿಗಣಿಸುವಂತೆ ಸರಕಾರಕ್ಕೆ ಪೀಠ ಸಲಹೆ ನೀಡಿತು.







