ರಾಜ್ಯಸಭೆಗೆ ಆಯ್ಕೆಯಾಗುವುದು ಉದ್ಯಮಿಗಳೇ ಅಧಿಕ ಏಕೆ?
ವಿಜಯ ಮಲ್ಯ ಇಂಗ್ಲೆಂಡಿಗೆ ಹಾರಿರುವುದು ಸಮಸ್ಯೆಯ ಸರಣಿ ಸೃಷ್ಟಿಸಿದೆ. ಬೃಹತ್ ಸುಸ್ತಿಸಾಲದಿಂದ ಹಿಡಿದು, ಅಮೂಲ್ಯ ಆಸ್ತಿಯವರೆಗೆ ಪ್ರತಿದಿನವೂ ಅವರ ಯಾರಿಗೂ ತಿಳಿಯದ ವಹಿವಾಟು- ವೈಯಕ್ತಿಕ ಜೀವನದ ಎಳೆಗಳು ಬಿಚ್ಚಿಕೊಳ್ಳುತ್ತಲೇ ಇವೆ. ಆದರೆ ಅವರ ರಾಜಕೀಯ ಜೀವನ ಹಾಗೂ ಹಿತಾಸಕ್ತಿಗಳ ಸಂಘರ್ಷ ಬಗ್ಗೆ ಯಾವ ಚರ್ಚೆಯೂ ನಡೆಯುತ್ತಿಲ್ಲ.
ಇದೀಗ ನಿಷ್ಕ್ರಿಯವಾಗಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಅಧ್ಯಕ್ಷ ವಿಜಯ ಮಲ್ಯ, 2002ರಿಂದಲೂ ರಾಜ್ಯಸಭೆ ಸದಸ್ಯರು. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಸಲಹಾ ಸಮಿತಿಯ ಸದಸ್ಯ ಹಾಗೂ ವಾಣಿಜ್ಯ ಸ್ಥಾಯಿ ಸಮಿತಿಯಲ್ಲೂ ಸದಸ್ಯ. ದೇಶದ ವಿಮಾನಯಾನ ಸಚಿವಾಲಯದ ಆಗುಹೋಗುಗಳ ಬಗ್ಗೆ ನಿಗಾ ಇಡುವ ಸಮಿತಿ ಇದು. ಸಚಿವಾಲಯ ರೂಪಿಸುವ ಮಸೂದೆಗಳ ಕರಡನ್ನು ಪರಿಶೀಲಿಸುವ ಹಾಗೂ ಸಚಿವಾಲಯದ ಅನುದಾನ ಬೇಡಿಕೆ ಬಗ್ಗೆ ಮೌಲ್ಯಮಾಪನ ಮಾಡುವ ಹೊಣೆ ಇದಕ್ಕಿದೆ.
ಮಲ್ಯ ಅವರ ಸ್ಥಾನ ಎಂಥದ್ದು ಎಂದರೆ, ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ನೀತಿಗಳ ಮೇಲೆ ನ್ಯಾಯಬದ್ಧವಲ್ಲದ ಪ್ರಭಾವ ಬೀರುವ ಅವಕಾಶ ನೀಡುವಂಥದ್ದು ಎನ್ನುತ್ತಾರೆ ಮಾಜಿ ಸಚಿವ ಜೈರಾಂ ರಮೇಶ್. ಇದು ಹಿತಾಸಕ್ತಿಗಳ ಸಂಘರ್ಷಕ್ಕೆ ಕಾರಣವಾಗುವಂಥದ್ದು ಎನ್ನುವುದು ಅವರ ಅಭಿಮತ. ಇತ್ತೀಚಿನ ವರ್ಷಗಳಲ್ಲಿ ಇಂತಹ ಹಲವು ನಿದರ್ಶನಗಳು ಕಾಣುತ್ತಿವೆ ಎನ್ನುವುದು ವಾಸ್ತವ.
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕುಪೇಂದ್ರ ರೆಡ್ಡಿ, ರಿಯಲ್ ಎಸ್ಟೇಟ್(ನಿಯಂತ್ರಣ ಹಾಗೂ ಅಭಿವೃದ್ಧಿ) ಮಸೂದೆ-2013 ಕುರಿತ ಆಯ್ದ ಸಮಿತಿಯ ಸದಸ್ಯರು; ಬೀಡಿ ಉದ್ಯಮಿ ಹಾಗೂ ಬಿಜೆಪಿ ಸಂಸದ ಶ್ಯಾಮ ಚರಣ್ ಗುಪ್ತಾ, ಉಪಶಾಸನಗಳ ಸಮಿತಿ ಸದಸ್ಯರಾಗಿರುವ ಅವರು, ತಂಬಾಕು ಬಳಕೆ ಕ್ಯಾನ್ಸರ್‌ಕಾರಕವಲ್ಲ ಎನ್ನುವ ಮೂಲಕ ಸುದ್ದಿಮಾಡಿದ್ದರು. ಸಾರ್ವಜನಿಕ ಉದ್ದಿಮೆಗಳ ಸಮಿತಿಯಲ್ಲಿ ಕಾಂಗ್ರೆಸ್‌ನ ಟಿ.ಸುಬ್ರಮಣಿ ರೆಡ್ಡಿ, ಲಗಡಪಟ್ಟಿ ರಾಜಗೋಪಾಲ್ ಹಾಗೂ ತೆಲುಗುದೇಶಂನ ನಾಮಾ ನಾಗೇಶ್ವರ ರಾವ್ ಅವರು ತಮ್ಮ ಉದ್ಯಮ ಹಿತಾಸಕ್ತಿ ಬೆಳೆಸಿಕೊಳ್ಳು ಪ್ರಭಾವ ಬೀರಿದ್ದು 2009ರಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಎಲ್ಲರೂ ಉತ್ತಮ ಉದ್ಯಮಿ-ರಾಜಕಾರಣಿಗಳಾಗಿದ್ದು, ಸಾರ್ವಜನಿಕ ದೃಷ್ಟಿ ಹೊಂದಿರದಿರುವವರು ಎನ್ನುವುದು ಸ್ಪಷ್ಟ. ಮಲ್ಯ ಕೂಡಾ ಇದೇ ವರ್ಗಕ್ಕೆ ಸೇರುತ್ತಾರೆ.
ಆದ್ಯತೆ ಮಾರ್ಗ
ಇತ್ತೀಚಿನ ವರ್ಷಗಳಲ್ಲಿ ಉದ್ಯಮ ನೀತಿಯಲ್ಲಿ ಯಾವ ಬದಲಾವಣೆ ಆಗಿದೆ ಎನ್ನುವುದನ್ನು ತಮಿಳುನಾಡಿನ ಮಾಜಿ ಶಿಕ್ಷಣ ಸಚಿವ ತಂಗಂ ತೆನರಸು ವಿಶ್ಲೇಷಿಸುತ್ತಾರೆ. ಉದಾರೀಕರಣಕ್ಕೆ ಮುನ್ನ, ಕೈಗಾರಿಕೆ ಜತೆ ನಿಕಟ ಸಂಪರ್ಕ ಹೊಂದಿರುವವರು ಸಚಿವರಾಗಿರುತ್ತಿದ್ದರು. ಆದರೆ ಅಲ್ಲಿಂದ ಮುಂದೆ ಕೈಗಾರಿಕೋದ್ಯಮಿಗಳೇ ಕೈಗಾರಿಕಾ ಸಚಿವರಾಗುವ ಸಂಪ್ರದಾಯ ಸೃಷ್ಟಿಯಾಯಿತು. ರಾಜಕೀಯ ಪ್ರವೇಶಿಸುವುದು ಬಹುತೇಕ ರಾಜ್ಯಸಭೆಯ ಮೂಲಕ. ಕರ್ನಾಟಕ ಮಾಜಿ ಸಂಸದರೊಬ್ಬರು ಕೂಡಾ ಇದನ್ನು ಒಪ್ಪುತ್ತಾರೆ. ಕೈಗಾರಿಕೋದ್ಯಮಿಗಳಿಗೆ ಸಂಸತ್ತು ಎಂದರೆ ವಿಶೇಷ ಲಾಲಸೆ. ಏಕೆಂದರೆ ನೀತಿಯ ಮೇಲೆಯೇ ನೇರ ಪರಿಣಾಮ ಬೀರಬಹುದು. ಕಾನೂನು ಕರಡು ಸಿದ್ಧಪಡಿಸುವಾಗಲೆ, ಸ್ಥಾಯಿ ಸಮಿತಿ ಅದನ್ನು ಪರಿಶೀಲಿಸುತ್ತದೆ. ಇಡೀ ಸರಕಾರಿ ವ್ಯವಸ್ಥೆ ಅದರ ಕೈಕೆಳಗೆ ಇರುತ್ತದೆ. ಎಷ್ಟು ಉನ್ನತಾಧಿಕಾರಿಯನ್ನಾದರೂ ಅದು ಕರೆಸಿಕೊಳ್ಳಬಹುದು. ಕೇವಲ ಸಂಸದರಾಗಿ, ಆಡಳಿತ ವ್ಯವಸ್ಥೆ ನಿಮ್ಮ ಅಧೀನದಲ್ಲಿರುತ್ತದೆ ಎನ್ನುವುದು ಅವರ ಸ್ಪಷ್ಟನುಡಿ.
ಈ ಮಾರ್ಗವನ್ನು ಉದ್ಯಮಿಗಳು ಕಂಡುಕೊಳ್ಳಲು ಕಾರಣ ಹಲವು. ಇದು ಚುನಾವಣಾ ರಾಜಕೀಯ ಜಂಜಾಟಗಳಿಂದ ಮುಕ್ತ. ನವೀನ್ ಜಿಂದಾಲ್ ಅವರಂತೆ ಉದ್ಯಮಿಗಳು ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾಗುವ ನಿದರ್ಶನಗಳು ವಿರಳ. ಬಹುತೇಕ ರಾಜ್ಯಸಭಾ ಸದಸ್ಯರು ರಾಜ್ಯಗಳ ವಿಧಾನಸಭೆಗಳಿಂದ ಪರೋಕ್ಷವಾಗಿ ಚುನಾಯಿತರಾದವರು. ಕೆಲವರನ್ನಷ್ಟೇ ರಾಷ್ಟ್ರಪತಿ ನಾಮಕರಣ ಮಾಡುತ್ತಾರೆ. ಪ್ರತಿ ರಾಜ್ಯಗಳು ಕೂಡಾ ನಿಗದಿತ ಸದಸ್ಯರನ್ನು ಇಂಥವರಿಗೇ ಮತ ನೀಡುವಂತೆ ಸೂಚಿಸಿ, ಪಕ್ಷದ ವಿಪ್‌ಗೆ ಅನುಗುಣವಾಗಿ ಮತ ಚಲಾಯಿಸುವ ವ್ಯವಸ್ಥೆ ಇದೆ. ಆದರೆ ರಾಜ್ಯದಲ್ಲಿ ಎರಡಕ್ಕಿಂತ ಹೆಚ್ಚು ಪ್ರಬಲ ಪಕ್ಷಗಳಿದ್ದಾಗ ಈ ವ್ಯವಸ್ಥೆ ವಿಕೃತವಾದ ನಿದರ್ಶನಗಳೂ ಇವೆ.
ಕಾಂಗ್ರೆಸ್‌ನ ಮಾಜಿ ಸಂಸದರೊಬ್ಬರ ಪ್ರಕಾರ, ರಾಜ್ಯ ವಿಧಾನಸಭೆಯಲ್ಲಿನ ಅಂಕಗಣಿತ ರಾಜ್ಯಸಭಾ ಸ್ಥಾನಗಳ ಖರೀದಿ ಹಾಗೂ ಮಾರಾಟಕ್ಕೆ ಅವಕಾಶ ಸೃಷ್ಟಿಸುತ್ತದೆ. ಮೂರನೆ ದೊಡ್ಡ ಪಕ್ಷ ಕೆಲ ಸ್ಥಾನಗಳನ್ನು ಹೊಂದಿದ್ದು, ಸ್ವಂತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಅಗತ್ಯವಾದಷ್ಟು ಬೆಂಬಲ ಹೊಂದಿರದಿದ್ದಾಗ, ಅದು ತನ್ನ ಸಂಖ್ಯೆಗೆ ಅನುಗುಣವಾಗಿ ಲಾಭ ಪಡೆಯುತ್ತದೆ. ಸಣ್ಣ ಪಕ್ಷ ಹೆಚ್ಚು ಅವಧಿಗೆ ಅಧಿಕಾರದಿಂದ ಹೊರಗಿದ್ದಾಗ, ಆರ್ಥಿಕ ಮುಗ್ಗಟ್ಟೂ ಇರುತ್ತದೆ ಎನ್ನುವುದು ಅವರ ವಿವರಣೆ.
ಅತಂತ್ರ ವಿಧಾನಸಭೆ ರಚನೆಯಾದಾಗ ಅಂದರೆ ಮೂರು ಪಕ್ಷಗಳು ಅಧಿಕ ಸ್ಥಾನ ಪಡೆಯುತ್ತವೆ. ರಾಜಸ್ಥಾನದಲ್ಲಿ ಸದಾ ಒಂದೇ ಪಕ್ಷ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸುತ್ತದೆ. ಆದರೆ ಕರ್ನಾಟಕದಲ್ಲಿ ಕಳೆದ ಮೂರು ದಶಕಗಳಿಂದ ಕೆಲ ಸ್ಥಾನಗಳು ಸದಾ ಮಾರಾಟಕ್ಕೆ ಇರುತ್ತವೆ. ಜಾರ್ಖಂಡ್ ಇನ್ನೊಂದು ಉದಾಹರಣೆ. ಆಂಧ್ರದಲ್ಲಿ ರಾಜಕಾರಣ ಹಾಗೂ ಉದ್ಯಮ ನಡುವಿನ ಅಂತರ ಎಷ್ಟು ಕ್ಷೀಣಿಸಿದೆ ಎಂದರೆ, ಅದನ್ನು ಗುರುತಿಸುವುದೂ ಕಷ್ಟ ಎಂದು ರಮೇಶ್ ವಿವರಿಸುತ್ತಾರೆ.
ಇಂಥ ಚಿತ್ರಣವಿದ್ದಾಗ ಸಂಸದರಾಗಲು ರಾಜ್ಯಸಭಾ ಮಾರ್ಗ ಲೋಕಸಭೆಯ ಮಾರ್ಗಕ್ಕಿಂತ ಉತ್ತಮ. ಅದು ಅಗ್ಗ ಕೂಡಾ. ಸುಮಾರು 50ರಿಂದ 60 ಕೋಟಿಯನ್ನು ಒಂದು ಪಕ್ಷ ಖರ್ಚು ಮಾಡಿದರೆ, ಅನಿಶ್ಚಿತತೆ ತೀರಾ ಕಡಿಮೆ.
ಸ್ವಚ್ಛತೆಯ ಕಡೆಗೆ
ರಾಜ್ಯಸಭೆ ಪ್ರವೇಶಿಸುವ ಉದ್ಯಮಿಗಳ ಸಂಖ್ಯೆ ಹೆಚ್ಚಿದರೂ, ಸಂಘರ್ಷದ ಹಿತಾಸಕ್ತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತದ ಕಾನೂನುಗಳು ಏನೂ ಮಾಡುತ್ತಿಲ್ಲ.
ಯುಪಿಎ ಸರಕಾರದ ಮಾಜಿ ಬುಡಕಟ್ಟು ವ್ಯವಹಾರ ಖಾತೆ ಸಚಿವ ಕಿಶೋರ್ ಚಂದ್ರ ದೇವ್ ಅವರ ಪ್ರಕಾರ, ಸಂಸದರು ತಮ್ಮ ಹಿತಾಸಕ್ತಿಗಳ ಬಗ್ಗೆ ಸ್ಪೀಕರ್‌ಗೆ ಮಾಹಿತಿ ನೀಡಬೇಕು ಹಾಗೂ ಅದರ ಅನ್ವಯ ಸಂಸದರನ್ನು ಸ್ಥಾಯಿ ಸಮಿತಿಗಳಿಗೆ ನೇಮಕ ಮಾಡಲಾಗುತ್ತದೆ
ಜನಪ್ರತಿನಿಧಿಗಳು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ತಮ್ಮ ಹಿತಾಸಕ್ತಿಗಷ್ಟೇ ಗಮನ ಹರಿಸುತ್ತಾರೆ ಎನ್ನುವ ಭಾವನೆ ಜನರಲ್ಲಿ ಬಲವಾಗುತ್ತಿದೆ ಎಂದು 2009ರಲ್ಲಿ ದೇವ್ ನೇತೃತ್ವದ ಸಂಸದೀಯ ಸಮಿತಿ ಅಭಿಪ್ರಾಯಪಟ್ಟಿತ್ತು. ಆದ್ದರಿಂದ ಸಮಿತಿಗಳಿಗೆ ನಾಮಕರಣಗೊಳ್ಳುವ ಮುನ್ನವೇ ಎಲ್ಲರೂ ತಮ್ಮ ಹಿತಾಸಕ್ತಿಯನ್ನು ಘೋಷಿಸಬೇಕು. ಇದರಿಂದ ಅಂಥ ವ್ಯಕ್ತಿಗಳನ್ನು ಹಿತಾಸಕ್ತಿಗಳ ಸಂಘರ್ಷಕ್ಕೆ ಕಾರಣವಾಗದ ಸಮಿತಿಗಳಿಗೆ ನೇಮಕ ಮಾಡಲು ಅನುಕೂಲವಾಗುತ್ತದೆ. ಅಥವಾ ಅವರ ಕೈಗಾರಿಕೆಗಳಿಗೆ ಸಂಬಂಧಿಸಿದ ವಿಷಯಗಳ ಚರ್ಚೆ ಇದ್ದಾಗ ಅವರನ್ನು ಸಭೆಯಿಂದ ಹೊರಗಿಡುವುದು ಸಾಧ್ಯವಾಗುತ್ತದೆ ಎನ್ನುವುದು ದೇವ್ ಅಭಿಪ್ರಾಯ. ಆದರೆ ಈ ಸಮಿತಿಯ ಸಲಹೆಗಳು ಅನುಷ್ಠಾನಗೊಳ್ಳಲೇ ಇಲ್ಲ.
ಶಾಸಕಾಂಗದ ಸಂಯೋಜನೆ
ಇವೆಲ್ಲ ಆತಂಕಕಾರಿ ಬೆಳವಣಿಗೆಗಳು. ರಾಜ್ಯಸಭೆ ಎಲ್ಲ ರಾಜ್ಯಗಳನ್ನು ಪ್ರತಿನಿಧಿಸಬೇಕು. ಅಂದರೆ ಆಯಾ ಪ್ರದೇಶಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ದೇಶದ ಶಾಸಕಾಂಗ ಪ್ರಕ್ರಿಯೆಗೆ ಕರೆತರಬೇಕು ಎನ್ನುವುದು ಇದರ ಆಶಯ. ಮೇಲ್ಮನೆಯ ಹಾಗೂ ಸಂಸದೀಯ ಸಮಿತಿಯ ಸಂಯೋಜನೆ, ಅಸಮರ್ಪಕವಾದಾಗ ಸಹಜವಾಗಿಯೇ ಶಾಸಕಾಂಗದಲ್ಲಿ ಹಸ್ತಕ್ಷೇಪಕ್ಕೆ ಕಾರಣವಾಗುತ್ತದೆ. ಉದ್ದೇಶಪೂರ್ವಕ ಸಂಘರ್ಷಗಳ ಹಿತಾಸಕ್ತಿ ಅಲ್ಲದಿದ್ದರೂ, ಬಹುತೇಕ ಬಡ ಭಾರತೀಯರ ಜೀವನದ ಬಗೆಗೆ ಕಲ್ಪನೆ ಇಲ್ಲದೇ ಹೀಗಾಗುವ ಸಾಧ್ಯತೆ ಇರುತ್ತದೆ. ದುರದೃಷ್ಟವಶಾತ್ ಯಾವ ರಾಜಕೀಯ ಪಕ್ಷಗಳಿಗೂ ಇದು ಸಮಸ್ಯಾತ್ಮಕ ವಿಷಯ ಅಲ್ಲ.
ಮಲ್ಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಎರಡು ಬಾರಿ ಅವರು ರಾಜ್ಯಸಭೆ ಸದಸ್ಯರಾಗಿದ್ದಾರೆ. ಎರಡು ಬಾರಿಯೂ ಜೆಡಿಎಸ್ ನಾಯಕ ಮಾಜಿ ಪ್ರಧಾನಿ ದೇವೇಗೌಡ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ತಿಂಗಳ ಅರಂಭದಲ್ಲಿ ಮಲ್ಯ ಸುತ್ತ ವಿವಾದದ ಹುತ್ತ ಸೃಷ್ಟಿಯಾದಾಗ ಅವರನ್ನು ಸಮರ್ಥಿಸಿಕೊಳ್ಳಲು ದೇವೇಗೌಡ ಮುಂದಾಗಿದ್ದರು. ಇನ್ನೂ ಕುತೂಹಲಕಾರಿ ಅಂಶವೆಂದರೆ, ಕಳೆದ ಹನ್ನೆರಡು ವರ್ಷಗಳಲ್ಲಿ ಜೆಡಿಎಸ್ ನಾಮಕರಣ ಮಾಡಿದ ಎಲ್ಲ ರಾಜ್ಯಸಭಾ ಸದಸ್ಯರು ಕೂಡಾ ಉದ್ಯಮಿಗಳು. ವಿಜಯ ಮಲ್ಯ, ಎಂಎಎಂ ರಾಮಸ್ವಾಮಿ, ರಾಜೀವ್ ಚಂದ್ರಶೇಖರ್ ಹಾಗೂ ಡಿ.ಕುಪೇಂದ್ರ ರೆಡ್ಡಿ!
ಜೆಡಿಎಸ್ ಹಿರಿಯ ಮುಖಂಡ ಎಂ.ಎಸ್.ನಾರಾಯಣ ರಾವ್ ಅವರ ಪ್ರಕಾರ, ಈ ಉದ್ಯಮಿಗಳು ಜೆಡಿಎಸ್ ಸೇರಿ, ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಅವರ ಉಮೇದುವಾರಿಕೆ ಬೆಂಬಲಿಸಲಾಗಿದೆ. ನಾವು ರಾಜ್ಯಸಭೆ ಸ್ಥಾನವನ್ನು ಹಣಕ್ಕೆ ಮಾರಾಟ ಮಾಡುತ್ತೇವೆ ಎಂದು ಹೇಳಿದರೆ ಅದು ಸರಿಯಲ್ಲ. ಅವರು ಪಕ್ಷಕ್ಕೆ ಸಹಾಯ ಮಾಡಿದ್ದಾರೆ. ಸಂಸದರು ಅಥವಾ ಶಾಸಕರು ಪಕ್ಷಕ್ಕೆ ದೇಣಿಗೆ ನೀಡಿದರೆ, ಅದು ವ್ಯಾಪಾರ ಆಗುವುದಿಲ್ಲ ಎನ್ನುವುದು ಅವರ ಸಮರ್ಥನೆ. ಪಕ್ಷ ಆರ್ಥಿಕವಾಗಿ ಸಂಕಷ್ಟದಲ್ಲಿದೆ ಎಂದು ಅವರು ಒಪ್ಪಿಕೊಳ್ಳುತ್ತಾರೆ.
ಪಕ್ಷ ಏಕೆ ಉದ್ಯಮಿಗಳನ್ನಷ್ಟೇ ನಾಮಕರಣ ಮಾಡುತ್ತದೆ? ಏಕೆಂದರೆ ನಮಗೆ ಸಾಕಷ್ಟು ಸ್ಥಾನಗಳಿಲ್ಲ. ಸ್ಥಾನಗಳು ಅಧಿಕ ಇದ್ದರೆ, ವಿಭಿನ್ನ ಹಿತಾಸಕ್ತಿಗಳನ್ನು ಬೆಂಬಲಿಸಬಹುದು. ಆದರೆ ಇರುವ ಸ್ಥಾನಗಳು ಸೀಮಿತ. ಪ್ರಸ್ತುತ ವಿಧಾನಸಭೆಯಲ್ಲಿ ಜೆಡಿಎಸ್ 40 ಶಾಸಕನ ರನ್ನು ಹೊಂದಿದ್ದರೆ, ಕಾಂಗ್ರೆಸ್ 124 ಹಾಗೂ ಬಿಜೆಪಿ 44 ಸ್ಥಾನಗಳನ್ನು ಹೊಂದಿದೆ. ಇತರ 18 ಸದಸ್ಯರು ಇತರ ಸಣ್ಣ ಪಕ್ಷಗಳಿಗೆ ಸೇರಿದವರು ಅಥವಾ ಪಕ್ಷೇತರರು.
ಕುಪೇಂದ್ರ ರೆಡ್ಡಿ ಜೆಡಿಎಸ್‌ಗೆ ಹಣ ನೀಡಿದ ಆರೋಪವನ್ನು ಅಲ್ಲಗಳೆಯುತ್ತಾರೆ. ಇ-ಮೇಲ್ ಪ್ರತಿಕ್ರಿಯೆಯಲ್ಲಿ ರಾಜೀವ್ ಚಂದ್ರಶೇಖರ್, ಕೆಲ ವ್ಯಾಪಾರ ಹಿತಾಸಕ್ತಿಗಳು ರಾಜ್ಯಸಭೆ ಹಾಗೂ ಲೋಕಸಭೆಗೆ ಹಣಬಲದ ಹಿನ್ನೆಲೆಯಲ್ಲಿ ಆಯ್ಕೆಯಾಗುತ್ತಿದ್ದಾರೆ. ಆದರೆ ಎರಡನೆ ಬಾರಿ ನಾನು ಅವಿರೋಧವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ವಿಜಯ ಮಲ್ಯ ಇ-ಮೇಲ್ ಪ್ರಶ್ನಾವಳಿಗೆ ಉತ್ತರಿಸಿಲ್ಲ.
ಕೃಪೆ: ಸ್ಕ್ರೋಲ್.ಇನ್