ಜಮ್ಮು-ಕಾಶ್ಮೀರ: ಮತ್ತೆ ಪಿಡಿಪಿ-ಬಿಜೆಪಿ ಮೈತ್ರಿ: ಮೆಹಬೂಬ ಸಿಎಂ ಅಭ್ಯರ್ಥಿ

ಕಣಿವೆ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಲು ಮೆಹಬೂಬಗೆ ವೇದಿಕೆ ಸಿದ್ಧ
ಶ್ರೀನಗರ, ಮಾ.24: ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ. ಅವರ ಪಕ್ಷವು ಇಂದು ನಡೆದ ಸಭೆಯಲ್ಲಿ ಮೆಹಬೂಬ ರನ್ನು ತನ್ನ ಮುಖ್ಯಮಂತ್ರಿ ಆಭ್ಯರ್ಥಿಯೆಂದು ಔಪಚಾರಿಕವಾಗಿ ಆಯ್ಕೆ ಮಾಡಿದೆ.
ಮೆಹಬೂಬ ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಬಳಿಕ, ಸರಕಾರ ರಚನೆಯ ಸಂಬಂಧ ಪಿಡಿಪಿ ಹಾಗೂ ಬಿಜೆಪಿಗಳ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಕೊನೆಗೊಂಡಿದೆ.
‘‘ಪಿಡಿಪಿ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆರಿಸಿದ್ದಕ್ಕಾಗಿ ನಿಮಗೆ ಧನ್ಯವಾದ. ನೀವೆಲ್ಲರೂ ನನ್ನ ಬಲ’’ ಎಂದು ಮೆಹಬೂಬ ತನ್ನ ಪಕ್ಷದ ಶಾಸಕರಿಗಿಂದು ತಿಳಿಸಿದರು.
ಗುರುವಾರ ನಿರ್ಣಾಯಕ ಸಭೆಗೆ ಮೊದಲು ಅವರು ತನ್ನ ತಂದೆ, ದಿವಂಗತ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್‌ರ ಸಮಾಧಿಗೆ ಭೇಟಿ ನೀಡಿದರು.
ಜಮ್ಮು-ಕಾಶ್ಮೀರ ಪ್ರಕೃತ ರಾಷ್ಟ್ರಪತಿ ಆಡಳಿತದಲ್ಲಿದ್ದು, ಪಿಡಿಪಿ -ಬಿಜೆಪಿ ಮೈತ್ರಿಕೂಟ ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಿದೆ. ಕೂಟಕ್ಕೆ ವಿಜಯ ಖಚಿತವಾಗಿದೆ.
56ರ ಹರೆಯದ ಮೆಹಬೂಬರಿಗೆ, ಬಿಜೆಪಿ ಯೊಂದಿಗೆ ಮೈತ್ರಿಯನ್ನು ವಿರೋಧಿಸುತ್ತಿರುವ ತನ್ನ ಪಕ್ಷದ ಒಂದು ಗುಂಪನ್ನು ಜೊತೆಗೊಯ್ಯುವ ಸವಾ ಲಿದೆ. ಅವರು, ಅತ್ಯಂತ ವಿವಾದಿತ ವಿಷಯಗಳಲ್ಲಿ ತಂದೆಗಿಂತಲೂ ಹೆಚ್ಚು ಕಾಶ್ಮೀರ ಪರ ನಿಲುವು ಹೊಂದಿರುವುದಕ್ಕಾಗಿ ಹೆಸರಾಗಿದ್ದಾರೆ.







